ಹನೂರು: ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಐದು ಹುಲಿಗಳಿಗೆ ವಿಷವಿಕ್ಕಿ ಕೊಂದಿರುವ ಆರೋಪದ ಮೇಲೆ ಜೈಲು ಸೇರಿರುವ ಮೂವರು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಮತ್ತೆ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.
ಶನಿವಾರ ರಾತ್ರಿ ಆರೋಪಿಗಳಾದ ಕೊಪ್ಪ ಗ್ರಾಮದ ಕೊನಪ್ಪ, ಮಾದುರಾಜು ಹಾಗೂ ನಾಗರಾಜುವನ್ನು ಕೊಳ್ಳೇಗಾಲದ ಹಿರಿಯ ಪ್ರಧಾನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ 2 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಭಾನುವಾರಕ್ಕೆ ನ್ಯಾಯಾಂಗ ಬಂಧನ ಅವಧಿ ಮುಗಿಯುವುದರಿಂದ ಜೂನ್ 30ರಂದು ಮತ್ತೆ ಆರೋಪಿಗಳನ್ನು ವಶಕ್ಕೆ ಪಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.
ಬಳಿಕ ಆರೋಪಿಗಳನ್ನು ಹುಲಿಗಳು ಮೃತಪಟ್ಟ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಲಿದ್ದು ಹುಲಿಗಳಿಗೆ ವಿಷಹಾಕಲು ಕಾರಣ ಸೇರಿದಂತೆ ಎಲ್ಲ ಆಯಾಮಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.
ಹುಲಿಗಳ ಸಾವಿನ ಬಗ್ಗೆ ತನಿಖೆ ನಡೆಸಲು ರಚನೆ ಮಾಡಲಾಗಿರುವ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ತಂಡ ಹನೂರಿನಲ್ಲಿ ಬೀಡುಬಿಟ್ಟಿದೆ. ಹುಲಿಗಳ ಮರಣೋತ್ತರ ಪರೀಕ್ಷೆ ನಡೆದ ದಿನದಿಂದ ಇಲ್ಲಿಯೇ ಉಳಿದು ಮಾಹಿತಿ ಹಾಗೂ ಸಾಕ್ಷ್ಯಗಳ ಕಲೆಹಾಕುವಲ್ಲಿ ನಿರತವಾಗಿರುವ ತಂಡ 14 ದಿನಗಳ ಒಳಗೆ ಎನ್‌ಟಿಸಿಎಗೆ ತನಿಖಾ ವರದಿ ಸಲ್ಲಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.