ADVERTISEMENT

ನಗರಸಭೆ ಚುನಾವಣೆ: ಈ ಬಾರಿ ಮತದಾನ ಪ್ರಮಾಣ ಇಳಿಕೆ

ಕಳೆದ ನಗರಸಭಾ ಚುನಾವಣೆಯಲ್ಲಿ ಹಕ್ಕು ಚಲಾಯಿಸಿದವರ ಸಂಖ್ಯೆ ಹೆಚ್ಚು

ಸೂರ್ಯನಾರಾಯಣ ವಿ
Published 1 ಸೆಪ್ಟೆಂಬರ್ 2018, 15:16 IST
Last Updated 1 ಸೆಪ್ಟೆಂಬರ್ 2018, 15:16 IST
ಚಾಮರಾಜನಗರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಮತಯಂತ್ರಗಳನ್ನು ಇಟ್ಟಿರುವ ಕೊಠಡಿಯ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ
ಚಾಮರಾಜನಗರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಮತಯಂತ್ರಗಳನ್ನು ಇಟ್ಟಿರುವ ಕೊಠಡಿಯ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ   

ಚಾಮರಾಜನಗರ/ ಕೊಳ್ಳೇಗಾಲ: ಜಿಲ್ಲೆಯ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಗಳಿಗೆ ನಡೆದ ಚುನಾವಣೆಯಲ್ಲಿ ಈ ಬಾರಿ ಕಳೆದ ಸಲಕ್ಕಿಂತ ಕಡಿಮೆ ಮತದಾನವಾಗಿದೆ.

2013ರಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿಚಾಮರಾಜನಗರ ನಗರಸಭೆಯಲ್ಲಿ ಶೇ 75.23 ಮತ್ತು ಕೊಳ್ಳೇಗಾಲ ನಗರಸಭೆಯಲ್ಲಿ ಶೇ 74.65 ರಷ್ಟು ಮತದಾನವಾಗಿತ್ತು. ಈ ಸಲ ಕ್ರಮವಾಗಿ ಶೇ 72.02 ಮತ್ತು ಶೇ 73.71ರಷ್ಟು ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಮಹಿಳೆಯರು ಹೆಚ್ಚು: ಚಾಮರಾಜನಗರದಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರು ಹೆಚ್ಚಿದ್ದಾರೆ. ಶುಕ್ರವಾರದ ಮತದಾನದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. ಕೊಳ್ಳೇಗಾಲದಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ.

ADVERTISEMENT

ಮತಗಟ್ಟೆಗಳಿಗೆ ಬಾರದ ಲೈಂಗಿಕ ಅಲ್ಪಸಂಖ್ಯಾತರು: ಚಾಮರಾಜನಗರದ ಮತದಾರರ ಪಟ್ಟಿಯಲ್ಲಿ ಏಳು ಮಂದಿ ಲೈಂಗಿಕ ಅಲ್ಪಸಂಖ್ಯಾತರಿದ್ದರು. ಆದರೆ, ಅವರು ಯಾರೂ ಶುಕ್ರವಾರ ಮತ ಚಲಾಯಿಸಿಲ್ಲ. ಕೊಳ್ಳೇಗಾಲದ ಮತದಾರರ ಪಟ್ಟಿಯಲ್ಲಿನಾಲ್ವರು ಇದ್ದರಾದರೂ, ಅಲ್ಲಿಯೂ ಮತಗಟ್ಟೆಗಳಿಗೆ ಅವರು ಬಂದಿಲ್ಲ.

ಲೆಕ್ಕಾಚಾರದಲ್ಲಿ ಮುಳುಗಿದ ಮುಖಂಡರು: ಈ ಮಧ್ಯೆ, ರಾಜಕೀಯ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗುತ್ತಿದ್ದಂತೆಯೇ, ಅಭ್ಯರ್ಥಿಗಳು ಮತ್ತು ರಾಜಕೀಯ ಮುಖಂಡರು ಸೋಲು– ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಜನಸಾಮಾನ್ಯರು ನಗರಸಭೆ ಫಲಿತಾಂಶದ ಬಗ್ಗೆಯೇ ಚರ್ಚೆ ನಡೆಸುತ್ತಿದ್ದುದು ಕಂಡು ಬಂತು. ಹಾಲಿ ಉಪಾಧ್ಯಕ್ಷ ಆರ್‌.ಎಂ. ರಾಜಪ್ಪ ಸ್ಪರ್ಧಿಸಿರುವ 31ನೇ ವಾರ್ಡ್‌, ಹಿರಿಯ ಸದಸ್ಯ ಎಸ್‌. ನಂಜುಂಡಸ್ವಾಮಿ ಅವರು ಸ್ಪರ್ಧಿಸಿರುವ 9ನೇ ವಾರ್ಡ್‌ ಫಲಿತಾಂಶದ ಸುತ್ತಲೇ ಚರ್ಚೆ ಕೇಂದ್ರೀಕೃತವಾಗಿತ್ತು.

ಬಹುತೇಕ ಅಭ್ಯರ್ಥಿಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ. ಕೆಲವು ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಮ‌ತಯಂತ್ರಗಳನ್ನು ಇಡಲಾಗಿರುವ ಕೇಂದ್ರದ ಬಳಿ ಸುಳಿದಾಡುತ್ತಿದ್ದುದು ಕಂಡು ಬಂತು.

ಯಾರಿಗೆ ಅಧಿಕಾರ?: ಕಳೆದ ಬಾರಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದ ಚಾಮರಾಜನಗರ ನಗರಸಭೆಯಲ್ಲಿ ಈ ಬಾರಿ ಯಾರು ಅಧಿಕಾರ ಹಿಡಿಯಲಿದ್ದಾರೆ ಎಂಬ ಬಗ್ಗೆ ಸ್ಥಳೀಯವಾಗಿ ಚರ್ಚೆ ನಡೆಯುತ್ತಿದೆ. ತಮಗೇ ಬಹುಮತ ಸಿಗಲಿದೆ ಎಂಬ ವಿಶ್ವಾಸವನ್ನು ಬಿಜೆಪಿ ಮತ್ತು ಕಾಂಗ್ರೆಸ್‌ನ ಮುಖಂಡರು ವ್ಯಕ್ತಪಡಿಸುತ್ತಿದ್ದಾರೆ.

‘ಒಂದು ವೇಳೆ ಬಹುಮತಕ್ಕೆ ಬೇಕಾದಷ್ಟು ಸ್ಥಾನಗಳು ಸಿಗದಿದ್ದರೂ, ಅತೀ ಹೆಚ್ಚು ಸ್ಥಾನಗಳು ನಮಗೇ ಸಿಗುತ್ತವೆ. ನಾವೇ ಅಧಿಕಾರ ಹಿಡಿಯುತ್ತೇವೆ’ ಎಂದು ಕಾಂಗ್ರೆಸ್‌ ಮುಖಂಡರು ಹೇಳಿಕೊಳ್ಳುತ್ತಿದ್ದಾರೆ.

ಕೊಳ್ಳೇಗಾಲದಲ್ಲೂ ಈ ಬಾರಿ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಬಿಎಸ್‌ಪಿ ಪ್ರಬಲ ಪೈಪೋಟಿ ನೀಡಿದ್ದರಿಂದ ಸ್ಥಳೀಯ ರಾಜಕೀಯ ಭಾರಿ ಕುತೂಹಲ ಕೆರಳಿಸಿದೆ. ನಗರಸಭೆಯ ವ್ಯಾಪ್ತಿಯಲ್ಲಿ ಶನಿವಾರ ಚುನಾವಣೆಯ ಬಗ್ಗೆಯೇ ಚರ್ಚೆ ನಡೆಯುತ್ತಿತ್ತು.

ಬಿರುಸಿನ ಪೈಪೋಟಿ ಇರುವ ವಾರ್ಡ್‌ಗಳಲ್ಲಿ ಯಾರು ಗೆಲ್ಲುತ್ತಾರೆ ಎಂಬುದರ ಬಗ್ಗೆ ಬೆಟ್ಟಿಂಗ್‌ ಕೂಡ ಜೋರಾಗಿ ನಡೆಯುತ್ತಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಕಳೆದ ಬಾರಿ ಸ್ಪಷ್ಟ ಬಹುಮತ ಪಡೆದಿದ್ದ ಕಾಂಗ್ರೆಸ್‌ ಈ ಬಾರಿಯೂ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದ್ದರೆ, ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗಿರುವ ಬಿಎಸ್‌ಪಿಯ ಮುಖಂಡರು, ‘ನಾವೇ ನಗರಸಭೆಯ ಚುಕ್ಕಾಣಿ ಹಿಡಿಯುತ್ತೇವೆ’ ಎಂದು ದೃಢವಾಗಿ ಹೇಳುತ್ತಿದ್ದಾರೆ.

ಎಲ್ಲದಕ್ಕೂ ಸೋಮವಾರ ಉತ್ತರ ಸಿಗಲಿದೆ.

ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್‌

ಸೋಮವಾರ (ಸೆ.3) ಮತ ಎಣಿಕೆ ನಡೆಯಲಿರುವ ಚಾಮರಾಜನಗರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಮತ್ತು ಕೊಳ್ಳೇಗಾಲದ ಸರ್ಕಾರಿ ಎಂಜಿಎಸ್‌ವಿ ಪದವಿಪೂರ್ವ ಕಾಲೇಜಿನ ಸುತ್ತ ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ.

ಚಾಮರಾಜನಗರದ ಮತ ಎಣಿಕೆ ಕೇಂದ್ರದ ಸುತ್ತ ಪೊಲೀಸರುದಿನದ 24 ಗಂಟೆ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭದ್ರತೆಗಾಗಿ ಒಬ್ಬರು ಸಿಪಿಐ, ಇಬ್ಬರು ಸಬ್‌ ಇನ್‌ಸ್ಪೆಕ್ಟರ್‌, ಇಬ್ಬರು ಎಎಸ್‌ಐ, 16 ಕಾನ್‌ಸ್ಟೆಬಲ್‌ಗಳು ಹಾಗೂ ಒಂದು ಡಿಎಆರ್‌ ತುಕಡಿಯನ್ನು ನಿಯೋಜಿಸಲಾಗಿದೆ.

ಕೊಳ್ಳೇಗಾಲದಲ್ಲಿಡಿವೈಎಸ್‌ಪಿ ಪುಟ್ಟಮಾದಯ್ಯ ಅವರು ಭದ್ರತೆ ಕುರಿತು ಶನಿವಾರ ಪರಿಶೀಲನೆ ನಡೆಸಿದರು.

ಮತಯಂತ್ರದ ಕೊಠಡಿಯ ಭದ್ರತೆಗಾಗಿ ಒಬ್ಬರು ಸಿಪಿಐ, ಒಬ್ಬರು ಪಿಎಸ್‌ಐ, ನಾಲ್ವರು ಎಎಸ್‌ಐ, 30 ಪೊಲೀಸ್‌ ಕಾನ್‌ಸ್ಟೆಬಲ್‌ಗಳನ್ನು‌ನಿಯೋಜಿಸಲಾಗಿದೆ ಎಂದು ಪುಟ್ಟಮಾದಯ್ಯ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.