
ಗುಂಡ್ಲುಪೇಟೆ: ಟಿಪ್ಪರ್ ಲಾರಿ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಕೇರಳದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮಗು ಸೇರಿ ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ-766ರ ಮಾದಾಪಟ್ಟಣ ಗೇಟ್ ಬಳಿ ಶನಿವಾರ ಬೆಳಿಗ್ಗೆ ನಡೆದಿದೆ.
ಕೇರಳದ ಕಾರು ಚಾಲಕ ಬಷೀರ್(53) ಹಾಗೂ ನಸೀಮಾ ಬಷೀರ್(42) ಮೃತರು. ಮಹಮ್ಮದ್ ಷಫಿ(32), ಜಸೀರಾ(28) ಹಾಗೂ ಮೂರು ವರ್ಷದ ಮಗು ಅಜೈಮ್ ಅನಾನ್ ತೀವ್ರ ಗಾಯಗೊಂಡವರು. ಗುಂಡ್ಲುಪೇಟೆ ಕಡೆಯಿಂದ ಕಲ್ಲು ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಲಾರಿ ಹಾಗೂ ಮೈಸೂರಿನಿಂದ ಗುಂಡ್ಲುಪೇಟೆ ಕಡೆಗೆ ಹೋಗುತ್ತಿದ್ದ ಕೇರಳದ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ.
ಬೇಗೂರು ಸರ್ಕಲ್ ಇನ್‌ಸ್ಪೆಕ್ಟರ್ ಮೋಹಿತ್ ಸಹದೇವ್ ಹಾಗೂ ಸಬ್ ಇನ್‌ಸ್ಪೆಕ್ಟರ್ ನವೀನ್ ಅವರು ಸ್ಥಳಕ್ಕೆ ದೌಡಾಯಿಸಿ, ನಜ್ಜುಗುಜ್ಜಾಗಿದ್ದ ಕಾರಿನೊಳಗೆ ಸಿಲುಕಿದ್ದ ಬಷೀರ್ ಹಾಗೂ ನಸೀಮಾ ಬಷೀರ್ ಅವರ ಶವವನ್ನು ಸ್ಥಳೀಯರ ಸಹಾಯದಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಗುಂಡ್ಲುಪೇಟೆ ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು. ಮೂವರು ಗಾಯಾಳುಗಳನ್ನು ಆಂಬುಲೆನ್ಸ್‌ನಲ್ಲಿ ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಯಿತು.
ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಟಿಪ್ಪರ್ ಲಾರಿ ರಸ್ತೆ ಬದಿಯ ಜಮೀನಿಗೆ ನುಗ್ಗಿದೆ. ಟಪ್ಪರ್ ಚಾಲಕ ಅಪಘಾತದ ನಂತರ ಪರಾರಿಯಾಗಿದ್ದಾನೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ನಡೆದ ಸ್ಥಳಕ್ಕೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ ಭೇಟಿ ನೀಡಿ ಪರಿಶೀಲಿಸಿದರು.
‘ಅಪಘಾತಕ್ಕೆ ಅತೀ ವೇಗ ಕಾರಣ’
ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲು ಎಂ.ಸ್ಯಾಂಡ್ ತುಂಬಿಕೊಂಡು ಅತೀ ವೇಗದಿಂದ ಸಂಚರಿಸುವ ಟಿಪ್ಪರ್ ಲಾರಿಗಳ ಹಾವಳಿ ಹೆಚ್ಚಿದ್ದು ಇದರಿಂದ ಆಗಾಗ್ಗೆ ಅಪಘಾತ ಪ್ರಕರಣಗಳು ನಡೆಯುತ್ತಿವೆ. ಆರ್‌ಟಿಒ ಹಾಗೂ ಗಣಿ ಇಲಾಖೆ ಅಧಿಕಾರಿಗಳು ಟಿಪ್ಪರ್‌ಗಳಿಗೆ ಕಾಡಿವಾಣ ಹಾಕುತ್ತಿಲ್ಲ. ಜೊತೆಗೆ ಹೆಚ್ಚು ಭಾರ ತುಂಬಿಕೊಂಡು ಪೊಲೀಸ್ ಠಾಣೆ ಮುಂಭಾಗ ಸಂಚರಿಸುತ್ತಿದ್ದರು ಸಹ ಪೊಲೀಸರು ಮೌನಕ್ಕೆ ಶರಣಾಗಿದ್ದಾರೆ. ಅಮಾಯಕ ಜನರ ಜೀವಕ್ಕೆ ಕುತ್ತು ಬರುತ್ತಿದೆ. ಕೂಡಲೇ ಟಿಪ್ಪರ್ ಹಾವಳಿಗೆ ಅಂಕುಶ ಹಾಕಬೇಕೆಂದು ಕನ್ನಡ ಸಂಘಟನೆ ಹೋರಾಟಗಾರರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.