ADVERTISEMENT

ಚಾಮರಾಜನಗರ | ಮಳೆಗೆ ಕೊಳೆಯುತ್ತಿರುವ ಟೊಮೆಟೊ; ದರ ಅಲ್ಪ ಹೆಚ್ಚಳ

ಹೂವಿನ ದರ ಚೇತರಿಕೆ; ಬಹುತೇಕ ತರಕಾರಿಗಳ ದರ ಸ್ಥಿರ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 2:12 IST
Last Updated 19 ಆಗಸ್ಟ್ 2025, 2:12 IST
ಚಾಮರಾಜನಗರದಲ್ಲಿ ತರಕಾರಿ ಖರೀದಿ ಮಾಡುತ್ತಿರುವ ಗ್ರಾಹಕ  
ಚಾಮರಾಜನಗರದಲ್ಲಿ ತರಕಾರಿ ಖರೀದಿ ಮಾಡುತ್ತಿರುವ ಗ್ರಾಹಕ     

ಚಾಮರಾಜನಗರ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ತರಕಾರಿಗಳು ಕೊಳೆಯುತ್ತಿದ್ದು ಮಾರುಕಟ್ಟೆಯಲ್ಲಿ ದರ ಏರುಮುಖವಾಗಿದೆ. ಅತಿಯಾದ ಮಳೆಯಿಂದ ಟೊಮೆಟೊ ಬೆಳೆಗೆ ಹೆಚ್ಚಿನ ಹಾನಿಯಾಗಿದ್ದು ಮಾರುಕಟ್ಟೆಗೆ ಬೇಡಿಕೆಯಷ್ಟು ಪೂರೈಕೆಯಾಗದ ಪರಿಣಾಮ ದರ ಹೆಚ್ಚಾಗುತ್ತಿದೆ. 

ಕಳೆದವಾರ ಟೊಮೆಟೊ ಕೆ.ಜಿ 20 ದರ ಇತ್ತು. ಪ್ರಸಕ್ತ 30ಕ್ಕೆ ಏರಿಕೆಯಾಗಿದ್ದು ಮಳೆ ಜೋರಾದರೆ, ನಿರಂತರವಾಗಿ ಸುರಿದರೆ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ, ಸದ್ಯದ ಪರಿಸ್ಥಿತಿಯಲ್ಲಿ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ ಎನ್ನುತ್ತಾರೆ ನಗರದ ಕೋರ್ಟ್‌ ರಸ್ತೆಯಲ್ಲಿರುವ ಹಾಪ್‌ಕಾಮ್ಸ್ ವ್ಯಾಪಾರಿ ಚಂದನ್‌. 

ದರ ಹೆಚ್ಚಾಗಿದ್ದರೂ ಗುಣಮಟ್ಟದ ಟೊಮೆಟೊ ಮಾರುಕಟ್ಟೆಗೆ ಬರುತ್ತಿಲ್ಲ. ಸಗಟು ಮಾರುಕಟ್ಟೆಯಲ್ಲಿ ಒಂದು ಬಾಕ್ಸ್ ಟೊಮೆಟೊ ಖರೀದಿಸಿದರೆ ಕನಿಷ್ಠ 30ರಷ್ಟು ಕೊಳೆತು ಹೋಗಿರುತ್ತವೆ. ಹೆಚ್ಚುದಿನ ಸಂಗ್ರಹಿಡಲು ಸಾಧ್ಯವಾಗುತ್ತಿಲ್ಲ, ನಾಲ್ಕೈದು ದಿನಗಳಲ್ಲಿ ಹಣ್ಣು ಹುಳ ಬೀಳುತ್ತಿವೆ. ಲಾಭದ ಬಹುಪಾಲು ಹಾಳಾದ ಹಣ್ಣಿಗೆ ವ್ಯಯವಾಗುತ್ತಿದೆ ಎಂದರು.

ADVERTISEMENT

ಉತ್ತಮ ಗುಣಮಟ್ಟ ಇಲ್ಲದಿರುವುದು ಹಾಗೂ ಗಾತ್ರದಲ್ಲಿ ಕಿರಿದಾಗಿರುವುದರಿಂದ ಗ್ರಾಹಕರು ಖರೀದಿಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಹಿಂದೆ ವಾರಕ್ಕಾಗುವಷ್ಟು ಟೊಮೆಟೊ ಖರೀದಿ ಮಾಡುತ್ತಿದ್ದ ಗ್ರಾಹಕರು ಒಂದೆರಡು ದಿನಗಳಿಗಾಗುವಷ್ಟು ಮಾತ್ರ ಕೊಂಡುಕೊಳ್ಳುತ್ತಿದ್ದಾರೆ. ಖರೀದಿಸಿದ ಬಹುಪಾಲು ಟೊಮೆಟೊ ಕೊಳೆತುಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ವ್ಯಾಪಾರಿಗಳು.

ಜಿಲ್ಲೆಗೆ ಅಗತ್ಯದಷ್ಟು ಪ್ರಮಾಣದ ತರಕಾರಿ ಗುಂಡ್ಲುಪೇಟೆ, ಚಾಮರಾಜನಗರ, ಯಳಂದೂರು, ಹನೂರು ಭಾಗಗಳಿಂದ ಪೂರೈಕೆಯಾಗುತ್ತದೆ. ಮಳೆಯಿಂದಾಗಿ ತರಕಾರಿ ಕೊಳೆಯುತ್ತಿರುವುದರಿಂದ ಪೂರೈಕೆ ತಗ್ಗಿದ್ದು ದರವೂ ಹೆಚ್ಚಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿ ಮಹದೇವ್‌.

ಈರುಳ್ಳಿ ದರ ಸ್ಥಿರ: ಕಳೆದ ಒಂದೆರಡು ತಿಂಗಳುಗಳಿಂದ ಈರುಳ್ಳಿ ದರ ಸ್ಥಿರವಾಗಿದೆ, ಗಾತ್ರ ಹಾಗೂ ಗುಣಮಟ್ಟದ ಆಧಾರದ ಮೇಲೆ ಕೆ.ಜಿಗೆ 20 ರಿಂದ 30ವರೆಗೂ ಮಾರಾಟವಾಗುತ್ತಿದೆ. ಶೀತದ ವಾತಾವರಣದಲ್ಲಿ ಹೆಚ್ಚು ಕಾಪಿಡಲು ಸಾಧ್ಯವಿಲ್ಲದಿದ್ದರಿಂದ ಗ್ರಾಹಕರು ಸಗಟು ಖರೀದಿ ಬದಲು ಚಿಲ್ಲರೆಯಾಗಿ ಮುರ್ನಾಲ್ಕು ಕೆ.ಜಿ ತೆಗೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ ವ್ಯಾಪಾರಿಗಳು.

ಹೂವಿನ ದರ: ವರ ಮಹಾಲಕ್ಷ್ಮಿ ಹಬ್ಬದ ನಂತರ ದಿಢೀರ್ ಕುಸಿತ ಕಂಡಿದ್ದ ಹೂವಿನ ದರ ದಿನದಿಂದ ದಿನಕ್ಕೆ ಚೇತರಿಕೆ ಕಾಣುತ್ತಿದೆ. ಗೌರಿ ಗಣೇಶ ಹಬ್ಬ ಹತ್ತಿರವಾಗುತ್ತಿರುವುದರಿಂದ ದರ ಏರುಗತಿಯಲ್ಲಿರುತ್ತದೆ, ಹಬ್ಬ ಮುಗಿಯುವವರೆಗೂ ದರ ಇಳಿಕೆಯಾಗುವ ಸಾಧ್ಯತೆಗಳಿಲ್ಲ ಎನ್ನುತ್ತಾರೆ ಹೂವಿನ ವ್ಯಾಪಾರಿ ರವಿ.

ಪ್ರಸ್ತುತ ಕೆ.ಜಿ ಸಣ್ಣ ಮಲ್ಲಿಗೆ ₹ 240ರಿಂದ300, ಮಲ್ಲಿಗೆ 400, ಕನಕಾಂಬರ 800 ರಿಂದ 1,000, ಸುಗಂಧರಾಜ 160ರಿಂದ200, ಚೆಂಡು ಹೂ 20 ರಿಂದ 30, ಸೇವಂತಿಗೆ 100 ರಿಂದ 160, ಗುಲಾಬಿ 120 ದರ ಇದೆ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.