ADVERTISEMENT

ಚಾಮರಾಜನಗರ: ಚೇತರಿಕೆ ಕಾಣುತ್ತಿದೆ ಪ್ರವಾಸೋದ್ಯಮ

ಆಗಸ್ಟ್‌ನಲ್ಲಿ ಜಿಲ್ಲೆಯ ಧಾರ್ಮಿಕ ಕೇಂದ್ರಗಳು ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಹೆಚ್ಚು ಪ್ರವಾಸಿಗರು

ಸೂರ್ಯನಾರಾಯಣ ವಿ
Published 26 ಸೆಪ್ಟೆಂಬರ್ 2020, 19:30 IST
Last Updated 26 ಸೆಪ್ಟೆಂಬರ್ 2020, 19:30 IST
ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರದಲ್ಲಿರುವ ಭರಚುಕ್ಕಿ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ
ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರದಲ್ಲಿರುವ ಭರಚುಕ್ಕಿ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ   

ಚಾಮರಾಜನಗರ: ಕೋವಿಡ್‌–19 ನಿಯಂತ್ರಣದ ಕಾರಣದಿಂದ ಹೇರಲಾಗಿದ್ದ ಲಾಕ್‌ಡೌನ್‌ನಿಂದಾಗಿ ತತ್ತರಿಸಿದ್ದ ಜಿಲ್ಲಾ ಪ್ರವಾಸೋದ್ಯಮ ಈಗ ನಿಧಾನವಾಗಿ ಚೇತರಿಸುತ್ತಿದೆ.

ಲಾಕ್‌ಡೌನ್‌ ನಿಯಮಗಳಲ್ಲಿ ಸಡಿಲಿಕೆಯಾಗಿ, ರಾಜ್ಯದ ಒಳಗಡೆ ಜನರ ಓಡಾಟಕ್ಕೆ ಮುಕ್ತ ಅವಕಾಶ ಕೊಟ್ಟ ನಂತರ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳು ಹಾಗೂ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಬರುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಜೂನ್‌ ಮೊದಲ ವಾರದ ನಂತರ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ದೇವಸ್ಥಾನ ಸೇರಿದಂತೆ ಜಿಲ್ಲೆಯ ಧಾರ್ಮಿಕ ಕೇಂದ್ರಗಳು ಭಕ್ತರಿಗೆ ತೆರೆದಿದ್ದರೂ, ಭರಚುಕ್ಕಿ ಜಲಪಾತ, ಬಂಡೀಪುರ ಸೇರಿದಂತೆ ಇತರೆ ಪ್ರವಾಸಿ ಕೇಂದ್ರಗಳನ್ನು ಪೂರ್ಣ ಪ್ರಮಾಣದಲ್ಲಿ ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿರಲಿಲ್ಲ.

ಜುಲೈ ನಂತರ ಪ್ರವಾಸಿ ತಾಣಗಳು ಕೂಡ ಪ್ರವಾಸಿಗರಿಗೆ ತೆರೆದಿವೆ. ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಜಿಲ್ಲೆಯ ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಿರುವ ಜನರ ಸಂಖ್ಯೆ ಹೆಚ್ಚಿದೆ.

ADVERTISEMENT

ಕೋವಿಡ್‌ ಹಾವಳಿಗೂ ಮೊದಲಿನ ಸ್ಥಿತಿಗೆ ಹೋಲಿಸಿದರೆ, ಈಗಲೂ ಪ್ರವಾಸಿರ ಸಂಖ್ಯೆ ಕಡಿಮೆಯೇ ಇದೆ. ಆದರೆ, ಕೋವಿಡ್‌ ಭಯ ಇನ್ನೂ ಜನರನ್ನು ಕಾಡುತ್ತಿದೆ. ಮೊದಲಿನ ರೀತಿ ಓಡಾಟ ನಡೆಯುತ್ತಿಲ್ಲ. ಜಿಲ್ಲೆಗೆ ಭೇಟಿ ನೀಡುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಪ್ರವಾಸೋದ್ಯಮ ಇಲಾಖೆಯು ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಾಥಸ್ವಾಮಿ ದೇವಾಲಯ, ಹಿಮವದ್‌ ಗೋಪಾಲಸ್ವಾಮಿ ದೇವಾಲಯ, ಹುಲಗನಮರಡಿ ದೇವಾಲಯಗಳು, ಕನಕಗಿರಿ ಜೈನ ಕ್ಷೇತ್ರವನ್ನು ಪ್ರವಾಸಿ ತಾಣಗಳ ಪ‍ಟ್ಟಿಯಲ್ಲಿ ಸೇರಿಸಿದೆ. ಇದರ ಜೊತೆಗೆ ಭರಚುಕ್ಕಿ ಜಲಪಾತ, ಬಂಡೀಪುರ ಸಫಾರಿ, ಕೆ.ಗುಡಿ ಸಫಾರಿ, ಹೊಗೆನಕಲ್‌ ಜಲಪಾತಗಳೂ (ಇನ್ನೂ ಪ್ರವಾಸಿಗರಿಗೆ ಮುಕ್ತವಾಗಿಲ್ಲ) ಪಟ್ಟಿಯಲ್ಲಿವೆ.

ಬೆಟ್ಟದ್ದೇ ಸಿಂಹಪಾಲು:ಪ್ರತಿ ವರ್ಷ ಮಹದೇಶ್ವರ ಬೆಟ್ಟಕ್ಕೆ ಬರುವವರೇ ಹೆಚ್ಚು. ಲಾಕ್‌ಡೌನ್‌ ಅವಧಿಯಲ್ಲಿ ಮುಚ್ಚಿದ್ದ ದೇವಾಲಯವನ್ನು ಜೂನ್‌ 8ರಿಂದ ಭಕ್ತರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ. ಮೊದಲ ತಿಂಗಳು ಭಕ್ತರ ಸಂಖ್ಯೆ ಕಡಿಮ ಇತ್ತು. ಜುಲೈನಿಂದ ದೇವಾಲಯಕ್ಕೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಸದ್ಯ ಪ್ರತಿ ತಿಂಗಳ ಅಮಾವಾಸ್ಯೆಯ ಸಂದರ್ಭದಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗುತ್ತಿದೆ. ಒಂದು ವೇಳೆ ಆ ಸಂದರ್ಭದಲ್ಲೂ ಅವಕಾಶ ಕೊಟ್ಟಿದ್ದರೆ, ಭೇಟಿ ನೀಡಿದವರ ಸಂಖ್ಯೆ ಇನ್ನಷ್ಟು ಹೆಚ್ಚುತ್ತದೆ.‍ಪ್ರವಾಸೋದ್ಯಮ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ, ಬೆಟ್ಟಕ್ಕೆ ಜುಲೈನಲ್ಲಿ 30 ಸಾವಿರ ಭಕ್ತರು, ಆಗಸ್ಟ್‌ನಲ್ಲಿ 40 ಸಾವಿರ ಮಂದಿ ಭೇಟಿ ನೀಡಿದ್ದಾರೆ.

ಮಳೆಗಾಲದಲ್ಲಿ, ಕಾವೇರಿ ನದಿ ಉಕ್ಕಿ ಹರಿಯುವಾಗ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಭರಚುಕ್ಕಿ ಜಲಪಾತವನ್ನು ಆಗಸ್ಟ್‌ನಲ್ಲಿ 35 ಸಾವಿರ ಮಂದಿ ಕಣ್ತುಂಬಿಕೊಂಡಿದ್ದಾರೆ.

ಬಂಡೀಪುರ ಸಫಾರಿಗೆ ಬರುತ್ತಿರುವವರ ಸಂಖ್ಯೆಯಲ್ಲೂ ಹೆಚ್ಚಳ ಕಂಡು ಬಂದಿದೆ. ಜೂನ್‌ನಲ್ಲಿ 1.005, ಜುಲೈನಲ್ಲಿ 140 ಮಂದಿ ಭೇಟಿ ನೀಡಿದ್ದರು. ಆಗಸ್ಟ್‌ನಲ್ಲಿ 2,992 ಮಂದಿ ಬಂಡೀಪುರಕ್ಕೆ ಬಂದಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲೇ ಬರುವ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ಕಳೆದ ತಿಂಗಳು 20,850 ಮಂದಿ ಭೇಟಿ ನೀಡಿ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿದ್ದಾರೆ.

ವಿದೇಶಿಯರು, ಹೊರರಾಜ್ಯದವರು ಇಲ್ಲ: ಅಂತರರಾಷ್ಟ್ರೀಯ, ಅಂತರರಾಜ್ಯ ಮುಕ್ತ ಸಂಚಾರ ಇನ್ನೂ ಆರಂಭವಾಗದೇ ಇರುವುದರಿಂದ ಹೊರ ರಾಜ್ಯಗಳ ಹಾಗೂ ವಿದೇಶಿ ಪ್ರವಾಸಿಗರು ಬರುತ್ತಿಲ್ಲ. ಹೊರ ರಾಜ್ಯಗಳಿಂದ ಜನ ಬರಲು ಆರಂಭಿಸಿದರೆ, ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ.

‘ಜೂನ್‌, ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಜಿಲ್ಲೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ ಕಂಡು ಬಂದಿದೆ. ಇದು ಒಳ್ಳೆಯ ಬೆಳವಣಿಗೆ. ಮುಂದಿನ ದಿನಗಳಲ್ಲಿ ಭೇಟಿ ನೀಡುವವರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ’ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಕೆ.ಗಿರೀಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.