ADVERTISEMENT

ಬಂಡೀಪುರ: ಹಿರಿಕೆರೆಯಲ್ಲಿ ಮೋಜು, ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 16:29 IST
Last Updated 6 ಅಕ್ಟೋಬರ್ 2022, 16:29 IST
ಗೋಪಾಲಸ್ವಾಮಿ ಬೆಟ್ಟದ ಬಳಿಯ ಹಿರಿಕೆರೆಯಲ್ಲಿ ಮದ್ಯಸೇವನೆಯಲ್ಲಿ ತೊಡಗಿದ್ದ ಪ್ರವಾಸಿಗರು
ಗೋಪಾಲಸ್ವಾಮಿ ಬೆಟ್ಟದ ಬಳಿಯ ಹಿರಿಕೆರೆಯಲ್ಲಿ ಮದ್ಯಸೇವನೆಯಲ್ಲಿ ತೊಡಗಿದ್ದ ಪ್ರವಾಸಿಗರು   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಇರುವ ಹಿರಿಕೆರೆ ಸುತ್ತ ಮೂವರು ಮದ್ಯಪಾನ ಮಾಡುತ್ತಾ ಮೋಜಿನಲ್ಲಿ ತೊಡಗಿರುವ ವಿಡಿಯೊ ವೈರಲ್‌ ಆಗಿದೆ.

ಹಿರಿಕೆರೆ ಬಳಿ ಮೋಜು ಮಸ್ತಿಗೆ ಅವಕಾಶ ಕೊಟ್ಟಿರುವ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಪರಿಸರವಾದಿಗಳು ಹಾಗೂ ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರದಂದು ಪ್ರವಾಸಿಗರು ವಾಹನ ಸಮೇತ ಕೆರೆಯಲ್ಲಿ ಈಜಾಡುತ್ತ, ಮದ್ಯ ಸೇವಿಸಿದ್ದಾರೆ. ಸ್ಥಳೀಯ ರೈತರು ಈ ದೃಶ್ಯವನ್ನು ಸೆರೆ ಹಿಡಿದ್ದಾರೆ.

ADVERTISEMENT

ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಹಿರಿಕೆರೆ ಕಳೆದ ತಿಂಗಳು ಕೋಡಿ ಬಿದ್ದಿತ್ತು. ಕೆರೆಯನ್ನು ನೋಡಲು ಸುತ್ತಮುತ್ತಲಿನ ಸ್ಥಳೀಯರು ಅನೇಕರು ಹೋಗುತ್ತಿದ್ದರು. ಆದರೆ ಕೆರೆಯ ಬಳಿ ಇರುವ ಗೇಟಿನಲ್ಲಿ ಸಿಬ್ಬಂದಿಗಳು ಬಿಡದೆ ಕಳುಹಿಸುತ್ತಿದ್ದರು.

ಅಧಿಕಾರಿಗಳ ಪ್ರಭಾವ ಬಳಸಿ ಬರುವವರಿಗೆ ಮಾತ್ರ ಸಿಬ್ಬಂದಿ ವಾಹನದ ಸಮೇತ ಕೆರೆಯ ಬಳಿಗೆ ಹೋಗಲು ಬಿಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದರು.

‘ಅಧಿಕಾರಿಗಳು ಅನುಮತಿ ನೀಡದೆ ಕೆರೆಯ ಬಳಿ ವಾಹನ ಸಮೇತ ಹೋಗಲು ಆಗುವುದಿಲ್ಲ. ಪ್ರವಾಸಿಗರನ್ನು ಯಾರು ಒಳಗೆ ಬಿಟ್ಟಿದ್ದಾರೆ ಎಂಬುದನ್ನು ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು’ ಎಂದು ರೈತರಾದ ಚಿನ್ನಸ್ವಾಮಿ ಮತ್ತು ದಿಲೀಪ್ ಒತ್ತಾಯಿಸಿದರು.

ರೈತರು ಜಾನುವಾರುಗಳನ್ನು ಕಾಡಂಚಿನ ಭಾಗದಲ್ಲಿ ಮೇಯಿಸುವಾಗ ದನಕರುಗಳಿಗೆ ನೀರು ಕುಡಿಸಲು ಬಿಡದ ಸಿಬ್ಬಂದಿ, ಕೆರೆಯ ಬಳಿ ಮದ್ಯಪಾನ ಮಾಡಲು ಹೇಗೆ ಅವಕಾಶ ಮಾಡಿಕೊಟ್ಟರು? ವಾಹನ ಒಳಗೆ ಬಿಡುವಂತೆ ಚೆಕ್‌ಪೋಸ್ಟ್‌ ಸಿಬ್ಬಂದಿಗೆ ಹೇಳಿದವರು ಯಾರು ಎಂಬುದುತನಿಖೆಯಲ್ಲಿ ಬಯಲಾಗಬೇಕು. ಇಲ್ಲವಾದಲ್ಲಿ ಜಾನುವಾರುಗಳ ಸಮೇತವಾಗಿ ಸ್ಥಳೀಯರು ಕೆರೆಗೆ ಹೋಗಿ ಬರಲು ಅನುಮತಿ ನೀಡಬೇಕು’ ಎಂದು ಒತ್ತಾಯಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲುಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ರಮೇಶ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಕಾರಿ ನವೀನ್ ಹಾಗೂ ವಲಯಾರಣ್ಯಾಧಿಕಾರಿ ಮಂಜುನಾಥ್ ಅವರಿಗೆ ಕರೆ ಮಾಡಿದರೆ, ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.