ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರ ಬೆಟ್ಟದ ದುರ್ಗಮ ಗುಡ್ಡಗಾಡು ಪ್ರದೇಶದಲ್ಲಿ ವಾಸವಾಗಿರುವ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿ ₹ 4.77 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲು ಮಲೆ ಮಹದೇಶ್ವರ ಸ್ವಾಮಿ ಕೃಪಾ ಶಿಕ್ಷಣ ಸಂಸ್ಥೆ ಮುಂದಾಗಿದೆ.
ಸಾಲೂರು ಮಠದ ಶಿಕ್ಷಣ ದಾಸೋಹ ಕಾರ್ಯಕ್ಕೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸಂಸ್ಥೆಯು ಕಾರ್ಪೋರೆಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯಡಿ ಆರ್ಥಿಕ ನೆರವು ನೀಡುತ್ತಿದೆ. ವಸತಿ ನಿಲಯ ಸ್ಥಾಪನೆ ಸಂಬಂಧ ಶನಿವಾರ ಸಾಲೂರು ಮಠ ಹಾಗೂ ಎಚ್‌ಎಎಲ್ ನಡುವೆ ಒಡಂಬಡಿಕೆ ನಡೆಯಿತು.
ಆಧುನಿಕ ಯುಗದಲ್ಲೂ ಮಲೆ ಮಹದೇಶ್ವರ ಬೆಟ್ಟ ಪ್ರದೇಶ ವ್ಯಾಪ್ತಿಯಲ್ಲಿರುವ ಹಲವು ಹಳ್ಳಿಗಳಿಗೆ ಇಂದಿಗೂ ವಿದ್ಯುತ್ ಸಂಪರ್ಕ ಹಾಗೂ ರಸ್ತೆಯಂತಹ ಮೂಲಸೌಲಭ್ಯಗಳು ದೊರೆತಿಲ್ಲ. ಈ ಭಾಗದ ವಿದ್ಯಾರ್ಥಿಗಳು ಕಾಡಿನ ದಾರಿಯಲ್ಲಿ, ಬೆಟ್ಟಗುಡ್ಡಗಳನ್ನು ಹತ್ತಿ ಇಳಿದು ಶಿಕ್ಷಣ ಪಡೆಯಲು ಮಲೆ ಮಹದೇಶ್ವರ ಬೆಟ್ಟಕ್ಕೆ ಬರಬೇಕಾದ ಅನಿವಾರ್ಯತೆ ಇದೆ.
ಶೈಕ್ಷಣಿಕ ಅವಕಾಶಗಳ ಕೊರತೆಯಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮೊಟಕುಗೊಳಿಸುತ್ತಿದ್ಡಾರೆ. ಮಹದೇಶ್ವರ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ನೂತನ ವಸತಿ ನಿಲಯ ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಲಿದೆ. ವಿಶೇಷವಾಗಿ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಗುಡ್ಡಗಳಲ್ಲಿ ನೆಲೆಸಿರುವ 18 ಹಳ್ಳಿಗಳ ಬೇಡಗಂಪಣ, ಸೋಲಿಗ ಸಮುದಾಯಗಳ ವಿದ್ಯಾರ್ಥಿಗಳಿಗೆ ವಸತಿಯುತ ಶಿಕ್ಷಣ ದೊರೆಯಲಿದೆ.
ವಸತಿ ನಿಲಯದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಅವಕಾಶ ದೊರೆಯಲಿದ್ದು ಜಿಲ್ಲೆಯ ಶಿಕ್ಷಣ ಕ್ಷೇತ್ರದ ಬೆಳವಣಿಗೆಯ ದೃಷ್ಟಿಯಿಂದಲೂ ಹೆಚ್ಚು ಮಹತ್ವ ಪಡೆದುಕೊಳ್ಳಲಿದೆ. ಎಚ್‌ಎಎಲ್ ಸಂಸ್ಥೆಯ ಅನುದಾನ ಬಳಸಿಕೊಂಡು ಮೂರು ವರ್ಷಗಳಲ್ಲಿ ಸುಸಜ್ಜಿತ ವಸತಿ ನಿಲಯ ನಿರ್ಮಿಸಲಾಗುವುದು ಎಂದು ಸಾಲೂರು ಮಠ ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.
1964ರಲ್ಲಿ ಆರಂಭಗೊಂಡ ಮಲೆ ಮಹದೇಶ್ವರ ಸ್ವಾಮಿ ಕೃಪಾ ಶಿಕ್ಷಣ ಸಂಸ್ಥೆ ಬೆಟ್ಟ ವ್ಯಾಪ್ತಿಯಲ್ಲಿ ಶಿಕ್ಷಣದ ಬೆಳಕು ಪಸರಿಸುತ್ತ ಬಂದಿದೆ. 21 ಶಿಕ್ಷಣ ಸಂಸ್ಥೆಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನೀಡಲಾಗುತ್ತಿದೆ. ಸಂಸ್ಕೃತ, ಯೋಗ, ಲಲಿತ ಕಲೆ, ಸಾಂಸ್ಕೃತಿಕ ಅಧ್ಯಯನವೂ ನಡೆಯುತ್ತಿದೆ.
ಅನಾಥಾಶ್ರಮ, ವೃದ್ಧಾಶ್ರಮ, ಗೋಶಾಲೆಗಳನ್ನು ಮಠ ನಡೆಸುತ್ತಿದ್ದು ಲಕ್ಷಾಂತರ ಭಕ್ತರು ಮತ್ತು ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನ ಹಾಗೂ ಅಕ್ಷರ ದಾಸೋಹ ನೀಡಲಾಗುತ್ತಿದೆ. ಪರಿಸರ ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳಿಗೂ ಒತ್ತು ನೀಡುತ್ತಿದ್ದು, ಪಟ್ಟದ ಗುರುಸ್ವಾಮಿಗಳ ಮೌಲ್ಯಯುತ ಪರಂಪರೆ ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದು ಸಾಲೂರು ಮಠದ ಸ್ವಾಮೀಜಿ ತಿಳಿಸಿದರು.
ಒಡಬಂಡಿಕೆ ಪತ್ರಕ್ಕೆ ಸಹಿಹಾಕುವ ಕಾರ್ಯಕ್ರಮದಲ್ಲಿ ಎಚ್ಎಎಲ್ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಡಿ.ಕೆ.ಸುನಿಲ್, ಕಾರ್ಯಾಚರಣೆ ವಿಭಾಗದ ನಿರ್ದೇಶಕ ಕೆ.ರವಿ, ಹಣಕಾಸು ವಿಭಾಗದ ನಿರ್ದೇಶಕ ಬಿ.ಸೇನಾಪತಿ, ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಜಿ.ಬಾಲಸುಬ್ರಹ್ಮಣ್ಯ, ಬಾಹ್ಯಾಕಾಶ ಮತ್ತು ರಕ್ಷಣೆಯ ವಿಶ್ಲೇಷಕ ಗಿರೀಶ್ ಲಿಂಗಣ್ಣ, ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು, ಡಾ.ಶರತ್ ಚಂದ್ರ, ಮೈಸೂರು ವಿ.ವಿ ಪ್ರಾಧ್ಯಾಪಕ ಡಾ.ಡಿ.ಎಸ್.ಗುರು, ಶಿಕ್ಷಣ ಸಂಸ್ಥೆಯ ಸದಸ್ಯ ಪೊನ್ನಾಚಿ ಮಹದೇವಸ್ವಾಮಿ ಇದ್ದರು.
ಶಿಕ್ಷಣ ದಾಸೋಹ
ಮೂಲಭೂತ ಸಮಸ್ಯೆಗಳಿಂದ ನರಳುತ್ತಿರುವ ಬುಡಕಟ್ಟು ಸಮುದಾಯಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಎಚ್‌ಎಎಲ್ ನೆರವಿನೊಂದಿಗೆ ವಸತಿ ನಿಲಯ ನಿರ್ಮಾಣ ಮಾಡಲಾಗುತ್ತಿದ್ದು ಲಿಂಗೈಕ್ಯ ಪಟ್ಟದ ಗುರುಗಳ ದೃಷ್ಟಿಕೋನಕ್ಕೆ ಪೂರಕವಾಗಿದೆ. ತಾಂತ್ರಿಕ ಸಾಮರ್ಥ್ಯ ಮತ್ತು ಆಧ್ಯಾತ್ಮಿಕ ಪರಂಪರೆಗಳ ನಡುವಿನ ಹೊಂದಾಣಿಕೆಗೆ ಇದು ಸಾಕ್ಷಿಯಾಗಿದೆ. –ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾಲೂರು ಮಠ
ಇಂದು ಗುರು ಸಂಸ್ಮರಣೋತ್ಸವ
ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದಲ್ಲಿ ಆ.2ರಂದು ಬೆಳಿಗ್ಗೆ 10 ಗಂಟೆಗೆ ಲಿಂ.ಪಟ್ಟದ ಗುರುಸ್ವಾಮಿಗಳ ಪುಣ್ಯ ಸಂಸ್ಮರಣೋತ್ಸವ ಗುರುಸ್ಮೃತಿ ಸಂಸ್ಮರಣ ಗ್ರಂಥ ಲೋಕಾರ್ಪಣೆ ಗುರು ಸನ್ನಿಧಿ ಯೋಗ–ಧ್ಯಾನ ಮಂದಿರ ಉದ್ಘಾಟನೆ ವಿದ್ಯಾರ್ಥಿ ನಿಯಲಯದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಲಿದೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಆದಿಚುಂಚನಗಿರಿಮಠದ ಡಾ.ನಿರ್ಮಲನಂದನಾಥ ಸ್ವಾಮೀಜಿ ಗುರುಸ್ಮೃತಿ ಸಂಸ್ಮರಣ ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ.
ಕನಕಪುರ ಶ್ರೀದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ದೇವನೂರು ಗುರುಮಲ್ಲೇಶ್ವರ ಮಠದ ಮಹಾಂತ ಸ್ವಾಮೀಜಿ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಕಾಗಿನೆಲೆ ಮಠದ ನಿರಂಜನಾನಂದಪುರಿ ಸ್ವಾಮೀಜಿ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾಜಿದೇವ ಮಠದ ಮಾಜಿದೇವ ಸ್ವಾಮೀಜಿ ಭಾಷ್ಯಂ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ. ಸಂಸದ ಸುನೀಲ್ ಬೋಸ್ ಶಾಸಕ ಎಂ.ಆರ್.ಮಂಜುನಾಥ್ ಸೇರಿದಂತೆ ಕ್ಷೇತ್ರದ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.