ADVERTISEMENT

ಅರಿಸಿನ ಧಾರಣೆ | ಒಂದು ಕ್ವಿಂಟಲ್‌ಗೆ ₹19 ಸಾವಿರ ದಾಟಿದ ಬೆಲೆ: ಸಾರ್ವಕಾಲಿಕ ದಾಖಲೆ

ಸೂರ್ಯನಾರಾಯಣ ವಿ
Published 14 ಮಾರ್ಚ್ 2024, 0:02 IST
Last Updated 14 ಮಾರ್ಚ್ 2024, 0:02 IST
ಗುಂಡ್ಲುಪೇಟೆ ತಾಲ್ಲೂಕಿನ ರೈತರೊಬ್ಬರ ಜಮೀನಿನಲ್ಲಿ ಕಟಾವು ಮಾಡಿದ ಅರಿಸಿನವನ್ನು ಟ್ರ್ಯಾಕ್ಟರ್‌ನಿಂದ ಇಳಿಸುತ್ತಿರುವುದು
ಗುಂಡ್ಲುಪೇಟೆ ತಾಲ್ಲೂಕಿನ ರೈತರೊಬ್ಬರ ಜಮೀನಿನಲ್ಲಿ ಕಟಾವು ಮಾಡಿದ ಅರಿಸಿನವನ್ನು ಟ್ರ್ಯಾಕ್ಟರ್‌ನಿಂದ ಇಳಿಸುತ್ತಿರುವುದು   

ಚಾಮರಾಜನಗರ: ಜಿಲ್ಲೆಯಲ್ಲಿ ಅರಿಸಿನ ಧಾರಣೆಯು ಒಂದು ಕ್ವಿಂಟಲ್‌ಗೆ ₹19 ಸಾವಿರ ದಾಟಿದೆ. ನೆರೆಯ ತಮಿಳುನಾಡಿನ ಈರೋಡ್‌ ಮಾರುಕಟ್ಟೆಯಲ್ಲಿ ₹20 ಸಾವಿರಕ್ಕೆ ಖರೀದಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಈ ತಿಂಗಳ ಆರಂಭದಲ್ಲಿ ₹13 ಸಾವಿರದಿಂದ ₹14,500ರವರೆಗೂ ದರ ಇತ್ತು. ಹತ್ತು ದಿನಗಳ ಅವಧಿಯಲ್ಲಿ ಕ್ವಿಂಟಲ್‌ಗೆ ₹5,000ದಿಂದ ₹6,500 ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಕಳೆದ ವರ್ಷ 8,200 ಹೆಕ್ಟೇರ್‌ ಪ್ರದೇಶದಲ್ಲಿ ಅರಿಸಿನ ಬೆಳೆಯಲಾಗಿದೆ. ಈಗ ಕಟಾವು ಶುರುವಾಗಿದ್ದು, ರೈತರು ಮಾರಾಟ ಮಾಡಲು ಆರಂಭಿಸಿದ್ದಾರೆ.

ADVERTISEMENT

ಕಳೆದ ಹಂಗಾಮಿನಲ್ಲಿ ಬೆಲೆ ತೀವ್ರವಾಗಿ ಕುಸಿದಿದ್ದರಿಂದ ರೈತರು ಹೆಚ್ಚು ಬಿತ್ತನೆ ಮಾಡಿಲ್ಲ. ಇಳುವರಿಯೂ ಕಡಿಮೆ ಬಂದಿದೆ. ಹೀಗಾಗಿ, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ.

ಸ್ಥಳೀಯ ವ್ಯಾಪಾರಿಗಳು ಮಾತ್ರವಲ್ಲದೆ ತಮಿಳುನಾಡು, ಕೇರಳದ ವ್ಯಾಪಾರಿಗಳೂ ರೈತರ ಜಮೀನಿಗೆ ಬಂದು ಅರಿಸಿನ ಖರೀದಿಸುತ್ತಿದ್ದಾರೆ.

‘ಮಾರ್ಚ್‌ ಮೊದಲ ವಾರಕ್ಕೆ ಹೋಲಿಸಿದರೆ ಬೆಲೆ ಮತ್ತಷ್ಟು ಹೆಚ್ಚಿದೆ. ಗುಣಮಟ್ಟದ ಅರಿಸಿನವನ್ನು ವ್ಯಾಪಾರಿಗಳು ₹19 ಸಾವಿರಕ್ಕೆ ಖರೀದಿಸುತ್ತಿದ್ದಾರೆ. ಉಂಡೆ ಅರಿಸಿನಕ್ಕೂ ಉತ್ತಮ ಬೆಲೆ ಇದ್ದು, ಸಾಮಾನ್ಯ ಅರಿಸಿನಕ್ಕಿಂತ ₹1,000ರಿಂದ ₹1,500 ಕಡಿಮೆ ಇದೆ’ ಎಂದು ಚಾಮರಾಜನಗರ ತಾಲ್ಲೂಕಿನ ರೈತ ರವಿಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘2010ರಲ್ಲಿ ಒಂದು ಕ್ವಿಂಟಲ್‌ಗೆ ₹18 ಸಾವಿರ ಗರಿಷ್ಠ ಬೆಲೆ ಸಿಕ್ಕಿತ್ತು. 2011ರಲ್ಲಿ ಧಾರಣೆಯು ₹3,000ಕ್ಕೆ ಕುಸಿದಿತ್ತು. 2012ರಲ್ಲಿ ಕೇಂದ್ರ ಸರ್ಕಾರ ಮೊದಲ ಬಾರಿಗೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ (ಎಂಐಎಸ್‌) ಪ್ರತಿ ಕ್ವಿಂಟಲ್‌ಗೆ ₹5,000  ದರ ನಿಗದಿಪಡಿಸಿ ಅರಿಸಿನವನ್ನು ಖರೀದಿಸಿತ್ತು’ ಎಂದು ಗುಂಡ್ಲುಪೇಟೆ ರೈತ ನಾಗಾರ್ಜುನ್‌ ಕುಮಾರ್‌ ಹೇಳಿದರು. 

2010ರಲ್ಲಿ ಗರಿಷ್ಠ ಧಾರಣೆ ದಾಖಲು 2011ರಲ್ಲಿ ಪಾತಾಳಕ್ಕೆ ಕುಸಿದಿದ್ದ ಬೆಲೆ 2012ರಲ್ಲಿ ಎಂಐಎಸ್‌ ಅಡಿ ಖರೀದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.