ADVERTISEMENT

ಬಿಆರ್‌ಟಿ: ಬೇಡಗುಳಿ ಕಾಫಿ ಎಸ್ಟೇಟ್‌ನಲ್ಲಿ ಟಿವಿಎಸ್‌ ಸಮೂಹದ ಅಧ್ಯಕ್ಷರ ವಾಸ್ತವ್ಯ

ಪರಿಸರ ಸೂಕ್ಷ್ಮ ವಲಯದಲ್ಲಿ ಇಳಿದ ಹೆಲಿಕಾಪ್ಟರ್‌; ವನ್ಯಪ್ರೇಮಿಗಳ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 11:07 IST
Last Updated 25 ಡಿಸೆಂಬರ್ 2020, 11:07 IST
ಪುಣಜನೂರು ಸಮೀಪ ಹೆಲಿಕಾಪ್ಟರ್‌ ಇಳಿದಿರುವುದು
ಪುಣಜನೂರು ಸಮೀಪ ಹೆಲಿಕಾಪ್ಟರ್‌ ಇಳಿದಿರುವುದು   

ಚಾಮರಾಜನಗರ: ದೇಶದ ಪ್ರಮುಖ ಕೈಗಾರಿಕೋದ್ಯಮಿ ಹಾಗೂ ಟಿವಿಎಸ್‌ ಸಮೂಹದ ಅಧ್ಯಕ್ಷ ವೇಣು ಶ್ರೀನಿವಾಸನ್‌ ಅವರು ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಬೇಡಗುಳಿಯಲ್ಲಿರುವ ಕಂಪನಿಗೆ ಸೇರಿದ ಕಾಫಿ ಎಸ್ಟೇಟ್‌ನಲ್ಲಿ ಎರಡು ದಿನಗಳಿಂದ ವಾಸ್ತವ್ಯ ಹೂಡಿದ್ದಾರೆ.

ಬೇಡಗುಳಿಯಲ್ಲಿ ಟಿವಿಎಸ್‌ ಕಂಪನಿ ಮಾಲೀಕತ್ವದ ಎಮರಾಲ್ಡ್‌ ಹೆವನ್‌ ಕಾಫಿ ಎಸ್ಟೇಟ್‌ ಇದ್ದು, ಗುರುವಾರ ಅವರು ಇಲ್ಲಿಗೆ ಬಂದಿದ್ದಾರೆ. ಇನ್ನೂ ಎರಡು ದಿನಗಳ ಕಾಲ ಎಸ್ಟೇಟ್‌ನಲ್ಲೇ ತಂಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶ್ರೀನಿವಾಸನ್‌ ಅವರು ಹೆಲಿಕಾಪ್ಟರ್‌ ಮೂಲಕ ಜಿಲ್ಲೆಗೆ ಬಂದಿದ್ದಾರೆ. ತಾಲ್ಲೂಕಿನ ಕೋಳಿಪಾಳ್ಯ ಹಾಗೂ ಪುಣಜನೂರು ನಡುವೆ ಇರುವ ಬೆಜ್ಜಲುಪಾಳ್ಯ ಎಂಬಲ್ಲಿ ಖಾಸಗಿ ಜಮೀನಿನಲ್ಲಿ ತಾತ್ಕಾಲಿಕ ಹೆಲಿಪ್ಯಾಡ್‌ ನಿರ್ಮಿಸಲಾಗಿದ್ದು, ಅಲ್ಲಿ ಹೆಲಿಕಾಪ್ಟರ್‌‌ ಇಳಿದಿದೆ. ಅಲ್ಲಿಂದ ಎಸ್ಟೇಟ್‌ಗೆ ಅವರು ರಸ್ತೆ ಮಾರ್ಗದಲ್ಲಿ ತೆರಳಿದ್ದಾರೆ.

ADVERTISEMENT

ಆಕ್ಷೇಪ:ಹೆಲಿಪ್ಯಾಡ್‌ ನಿರ್ಮಿಸಿರುವ ಪ್ರದೇಶ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಸೂಕ್ಷ ಪರಿಸರ ವಲಯದ (ಇಎಸ್‌ಝಡ್‌) ವ್ಯಾಪ್ತಿಯಲ್ಲಿದ್ದು, ಹೆಲಿಕಾಪ್ಟರ್‌ ಇಳಿಯಲು ಅರಣ್ಯ ಇಲಾಖೆ ಅನುಮತಿ ಹೇಗೆ ನೀಡಿತು ಎಂದು ಪರಿಸರವಾದಿಗಳು ಪ್ರಶ್ನಿಸಿದ್ದಾರೆ.

‘ಈ ಹಿಂದೆ, ಬಿಳಿಗಿರಿರಂಗನಬೆಟ್ಟದಲ್ಲಿ ರಾಷ್ಟ್ರಪತಿಯವರ ಹೆಲಿಕಾಪ್ಟರ್‌ ಇಳಿಸುವುದಕ್ಕೂ ಅರಣ್ಯ ಇಲಾಖೆ ಒಪ್ಪಿಗೆ ನೀಡಿರಲಿಲ್ಲ. ಖಾಸಗಿ ಜಮೀನಿನಲ್ಲೇ ಹೆಲಿಪ್ಯಾಡ್‌ ನಿರ್ಮಿಸಿದ್ದರೂ, ಸಂರಕ್ಷಿತ ಪ್ರದೇಶದ ಸೂಕ್ಷ್ಮ ಪರಿಸರ ವಲಯದ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಹೆಲಿಕಾಪ್ಟರ್‌ ಇಳಿಸುವುದಕ್ಕೆ ಅವಕಾಶ ಇಲ್ಲ’ ಎಂದು ವನ್ಯಜೀವಿ ಪ್ರೇಮಿಗಳು ಹೇಳಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ‘ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪೊಲೀಸರು, ಲೋಕೋಪಯೋಗಿ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲರಿಂದಲೂ ಅಭಿಪ್ರಾಯ ಪಡೆದು ಅನುಮತಿ ನೀಡಲಾಗಿದೆ. ಅರಣ್ಯ ಭಾಗದಲ್ಲಿ ಹೆಲಿಕಾಪ್ಟರ್‌ ಇಳಿದಿಲ್ಲ. ಹೆಲಿಪ್ಯಾಡ್‌ ಅನ್ನು ಕಂದಾಯ ಜಮೀನಿನಲ್ಲಿ ನಿರ್ಮಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ ಕುಮಾರ್‌ ಅವರು, ‘ಅವರು ಎಸ್ಟೇಟ್‌ನಲ್ಲೇ ಹೆಲಿಕಾಪ್ಟರ್‌ ಇಳಿಸಲು ಬಯಸಿದ್ದರು. ಅದಕ್ಕೆ ಅವಕಾಶ ನೀಡಿಲ್ಲ. ಈಗ ಹೆಲಿಪ್ಯಾಡ್‌ ನಿರ್ಮಿಸಿರುವ ಜಾಗ ಖಾಸಗಿ ಜಮೀನು. ಸಂರಕ್ಷಿತ ಪ್ರದೇಶದಿಂದ ಹೊರಗಿದೆ. ಅರಣ್ಯದ ಗಡಿಯಿಂದ ಸಾಕಷ್ಟು ದೂರದಲ್ಲಿದೆ. ಅವರು ಜಿಲ್ಲಾಧಿಕಾರಿ, ಪೊಲೀಸ್‌ ಇಲಾಖೆ ಹಾಗೂ ಪರಿಸರ ಸೂಕ್ಷ ವಲಯಕ್ಕೆ ಸಂಬಂಧಿಸಿದ ಸಮಿತಿಯ ಅನುಮತಿ ಪಡೆದಿದ್ದಾರೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.