ADVERTISEMENT

ಚಾಮರಾಜನಗರ: 25 ಗ್ರಾಮೀಣ ಆಸ್ಪತ್ರೆಗೆ ವೈದ್ಯರ ಭಾಗ್ಯ

ಕೋವಿಡ್‌ ಅಬ್ಬರದ ನಡುವೆ ಆರೋಗ್ಯ ಇಲಾಖೆಯಿಂದ ನೇಮಕಾತಿ ಆದೇಶ, ಗ್ರಾಮೀಣ ಜನರಿಗೆ ಅನುಕೂಲ

ಸೂರ್ಯನಾರಾಯಣ ವಿ
Published 1 ಜೂನ್ 2021, 9:40 IST
Last Updated 1 ಜೂನ್ 2021, 9:40 IST
ಮಹದೇಶ್ವರ ಬೆಟ್ಟದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ
ಮಹದೇಶ್ವರ ಬೆಟ್ಟದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ   

ಚಾಮರಾಜನಗರ: ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕೋವಿಡ್‌ ಅಲೆ ನಿಯಂತ್ರಣಕ್ಕೆ ಸಿಗದೆ ಹರಡುತ್ತಿರುವುದರ ನಡುವೆಯೇ, ವಿವಿಧ ತಾಲ್ಲೂಕುಗಳ 25 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ (ಪಿಎಚ್‌ಸಿ) ಎಂಬಿಬಿಎಸ್‌ ವೈದ್ಯರನ್ನು ನಿಯುಕ್ತಿ ಮಾಡಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯದಾದ್ಯಂತ 1,048 ವೈದ್ಯರನ್ನು ಆರೋಗ್ಯ ಇಲಾಖೆ ನೇಮಕ ಮಾಡಿದ್ದು, ಜಿಲ್ಲೆಗೆ 25 ಮಂದಿಯನ್ನು ನಿಯುಕ್ತಿಗೊಳಿಸಲಾಗಿದೆ. ಹಲವು ತಿಂಗಳುಗಳಿಂದ ವೈದ್ಯರು ‌ಇಲ್ಲದೇ ಇದ್ದ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ತೀರಾ ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳಿಗೆ ವೈದ್ಯರ ನೇಮಕವಾಗಿದೆ.

ಆರೋಗ್ಯ ಇಲಾಖೆಯ ಈ ನಿರ್ಧಾರದಿಂದಾಗಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸೇವೆ ಇನ್ನಷ್ಟು ಸುಧಾರಿಸುವ ನಿರೀಕ್ಷೆಯನ್ನು ಹುಟ್ಟುಹಾಕಿದೆ. ವೈದ್ಯರ ಕೊರತೆಯಿಂದ ಬಳಲಿದ್ದ ಜಿಲ್ಲಾ ಆರೋಗ್ಯ ಇಲಾಖೆಗೂ ಇದರಿಂದ ಒಂದಷ್ಟು ಬಲ ಬಂದಿದೆ.

ADVERTISEMENT

ಭಾನುವಾರ (ಮೇ 30) ನೇಮಕಾತಿ ಆದೇಶ ಹೊರಡಿಸಲಾಗಿದ್ದು, 15 ದಿನಗಳ ಒಳಗಾಗಿ ನಿಗದಿತ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ.

ಜಿಲ್ಲೆಯಲ್ಲಿ 60 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಈ ಪೈಕಿ ಏಳು ಕೇಂದ್ರಗಳಲ್ಲಿ ವೈದ್ಯರೇ ಇರಲಿಲ್ಲ. ಉಳಿದ ಕೇಂದ್ರಗಳಲ್ಲಿ ಎಂಬಿಬಿಎಸ್‌ ವೈದ್ಯರು ಇಲ್ಲದ ಕಡೆಗಳಲ್ಲಿ ಆಯುಷ್‌ ವೈದ್ಯರನ್ನು ನೇಮಿಸಲಾಗಿತ್ತು. ಇನ್ನೂ ಕೆಲವು ಕಡೆಗಳಲ್ಲಿ ಬೇರೆ ಕೇಂದ್ರಗಳ ವೈದ್ಯರನ್ನು ತಾತ್ಕಾಲಿಕವಾಗಿ ಯೋಜಿಸಲಾಗಿತ್ತು.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದೇ ಗ್ರಾಮೀಣ ಜನರಿಗೆ ಸರಿಯಾದ ಚಿಕಿತ್ಸೆ ಲಭ್ಯವಾಗುತ್ತಿರಲಿಲ್ಲ. ಸಣ್ಣ ಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ತಾಲ್ಲೂಕು ಅಥವಾ ಜಿಲ್ಲಾಸ್ಪತ್ರೆಗಳಿಗೆ ಬರಬೇಕಿತ್ತು.

ಲಕ್ಷಾಂತರ ಭಕ್ತರು ಬರುವ ಮಹದೇಶ್ವರ ಬೆಟ್ಟದಲ್ಲಿ ಹಲವು ತಿಂಗಳುಗಳಿಂದ ಪೂರ್ಣ ಪ್ರಮಾಣದಲ್ಲಿ ವೈದ್ಯರಿಲ್ಲದೇ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗಿತ್ತು. ಗುಂಡ್ಲುಪೇಟೆ ತಾಲ್ಲೂಕಿನ ‌ಹಂಗಳದ ಆರೋಗ್ಯ ಕೇಂದ್ರದಲ್ಲಿ ಒಂದೂವರೆ ವರ್ಷದಿಂದ ವೈದ್ಯರು ಇರಲಿಲ್ಲ. ಗಿರಿಜನರೇ ವಾಸವಿರುವ ಚಾಮರಾಜನಗರ ತಾಲ್ಲೂಕಿನ ಬೇಡಗುಳಿಯಲ್ಲಿ ಹಲವು ವರ್ಷಗಳಿಂದ ಕಾಯಂ ವೈದ್ಯರು ಇರಲಿಲ್ಲ. ಗಡಿ ಭಾಗ ಹನೂರು ತಾಲ್ಲೂಕಿನ ಮೀಣ್ಯಂ ಪ್ರಾಥಮಿಕ ಕೇಂದ್ರದಲ್ಲಿ ನಾಲ್ಕೈದು ವರ್ಷಗಳಿಂದ ವೈದ್ಯರ ಸೇವೆ ಲಭ್ಯವಿರಲಿಲ್ಲ. ಈಗ ಈ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಾಯಂ ವೈದ್ಯರ ನೇಮಕವಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು, ‘ಏಳು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಿಟ್ಟು ಉಳಿದ ಎಲ್ಲ ಕಡೆಗಳಲ್ಲಿ ವೈದ್ಯರು ಇದ್ದರು. ಎಂಬಿಬಿಎಸ್‌ ವೈದ್ಯರು ಇಲ್ಲದ ಕಡೆಗಳಲ್ಲಿ ಆಯುಷ್‌ ವೈದ್ಯರು ಇದ್ದರು. ಇನ್ನೂ ಕೆಲವು ಕಡೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದರು. ಗುತ್ತಿಗೆ ಆಧಾರದಲ್ಲಿರುವ ಕೆಲವು ವೈದ್ಯರ ಸೇವೆ ಈಗ ಕಾಯಂ ಆಗಿದೆ’ ಎಂದು ಹೇಳಿದರು.

‘15 ದಿನಗಳ ಒಳಗಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಇಲಾಖೆ ವೈದ್ಯರಿಗೆ ಸೂಚಿಸಿದೆ. ಎಷ್ಟು ಮಂದಿ ವೈದ್ಯರು ಸೂಚಿತ ಜಾಗದಲ್ಲಿ ಕರ್ತವ್ಯ ನಿರ್ವಹಿಸಲು ಮುಂದೆ ಬರುತ್ತಾರೆ ಎಂಬುದನ್ನು ನೋಡಬೇಕು’ ಎಂದು ಅವರು ಹೇಳಿದರು.

ಎಲ್ಲೆಲ್ಲಿಗೆ ವೈದ್ಯರ ನೇಮಕ?

ಚಾಮರಾಜನಗರ ತಾಲ್ಲೂಕು: ಬೇಡಗುಳಿ, ಹರವೆ, ಉಮ್ಮತ್ತೂರು, ಕೊತ್ತಕವಾಡಿ, ಅರಕಲವಾಡಿ, ಹರದನಹಳ್ಳಿ, ಹೊಂಗನೂರು

ಗುಂಡ್ಲುಪೇಟೆ ತಾಲ್ಲೂಕು: ಕೊಡಸೋಗೆ, ಹಂಗಳ‌, ಬರಗಿ, ಹುಂಡೀಪುರ, ಬೊಮ್ಮನಹಳ್ಳಿ, ಪಡಗೂರು, ಗುಂಡ್ಲುಪೇಟೆ,

ಕೊಳ್ಳೇಗಾಲ ತಾಲ್ಲೂಕು: ಚಿಲಕವಾಡಿ, ದೊಡ್ಡಿಂದುವಾಡಿ, ಸತ್ತೇಗಾಲ, ತೆಳ್ಳನೂರು

ಹನೂರು ತಾಲ್ಲೂಕು: ಪಿ.ಜಿ.ಪಾಳ್ಯ, ಮಹದೇಶ್ವರಬೆಟ್ಟ, ಕೌದಳ್ಳಿ, ಮಿಣ್ಯಂ, ಕೂಡ್ಲೂರು, ರಾಮಾಪುರ,

ಯಳಂದೂರು ತಾಲ್ಲೂಕು: ಹೊನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.