ADVERTISEMENT

ಹುಲಿ ಉಗುರು ಮಾರಾಟ ಯತ್ನ; ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 15:52 IST
Last Updated 17 ಆಗಸ್ಟ್ 2022, 15:52 IST
ಬಂಧಿತ ಆರೋಪಿಗಳು ಹಾಗೂ ವಶಕ್ಕೆ ಪಡೆದಿರುವ ಹುಲಿ ಉಗುರುಗಳು
ಬಂಧಿತ ಆರೋಪಿಗಳು ಹಾಗೂ ವಶಕ್ಕೆ ಪಡೆದಿರುವ ಹುಲಿ ಉಗುರುಗಳು   

ಚಾಮರಾಜನಗರ: ಹುಲಿ ಉಗುರುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ನಗರದ ಸೈಬರ್‌, ಆರ್ಥಿಕ ಅಪರಾಧ ಹಾಗೂ ಮಾದಕ ದ್ರವ್ಯ ಅಪರಾಧ ತಡೆ (ಸಿಇಎನ್‌) ಪೊಲೀಸರು ಬುಧವಾರ ನಗರದಲ್ಲಿ ಬಂಧಿಸಿದ್ದಾರೆ. ಆರೋಪಗಳ ಬಳಿಯಿಂದ ₹3.50 ಲಕ್ಷ ಮೌಲ್ಯದ ಎಂಟು ಹುಲಿ ಉಗುರುಗಳನ್ನು ವಶಕ್ಕೆ ಪಡೆಯಲಾಗಿದೆ.

ನಗರದ ಕೆ.‍ಪಿ.ಮೊಹಲ್ಲಾ ನಿವಾಸಿ ನಾಸಿರ್‌ ಅಹಮದ್‌ (19) ಹಾಗೂ ಮುಬಾರಕ್‌ ಮೊಹಲ್ಲಾ ನಿವಾಸಿ ಪರ್ಹಾದ್‌ ಉರ್‌ ರೆಹಮಾನ್‌ (33) ಬಂಧಿತ ಆರೋಪಿಗಳು.

ನಗರದ ಕರಿನಂಜನಪುರ ರಸ್ತೆಯಲ್ಲಿ ಅಂಬೇಡ್ಕರ್‌ ಭವನದ ಬಳಿ ಬುಧವಾರ ಬೆಳಿಗ್ಗೆ 11.30ರ ಸುಮಾರಿಗೆ ಆರೋಪಿಗಳು ಹುಲಿ ಉಗುರುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಇಎನ್‌ ಠಾಣೆ ಇನ್‌ಸ್ಪೆಕ್ಟರ್‌ ಮಹದೇವಶೆಟ್ಟಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಬಂಧಿಸಿ, ಹುಲಿ ಉಗುರುಗಳನ್ನು ವಶಕ್ಕೆ ಪಡೆಯಿತು.

ADVERTISEMENT

‘ಒಬ್ಬ ಆರೋಪಿಯ ಬಳಿ ಐದು ಹಾಗೂ ಇನ್ನೊಬ್ಬನ ಬಳಿ ಮೂರು ಹುಲಿ ಉಗುರುಗಳು ಇದ್ದವು. ಅವರಿಗೆ ಈ ಉಗುರುಗಳು ಎಲ್ಲಿಂದ ಸಿಕ್ಕಿತು ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ. ತಮ್ಮ ಅಜ್ಜಂದಿರ ಕಾಲದಲ್ಲೇ ಇವು ಮನೆಯಲ್ಲಿತ್ತು ಎಂದು ಅವರು ಹೇಳುತ್ತಿದ್ದಾರೆ. ತನಿಖೆ ನಡೆಸುತ್ತಿದ್ದೇವೆ. ಹುಲಿ ಉಗುರುಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ’ ಎಂದು ಇನ್‌ಸ್ಪೆಕ್ಟರ್‌ ಮಹದೇವಶೆಟ್ಟಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾರ್ಯಾಚರಣೆಯಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಮಾದೇಶ್‌, ಸಿಬ್ಬಂದಿ ರಾಜು, ಮಂಜುನಾಥ, ಜಗದೀಶ್‌, ಉಪ ವಲಯ ಅರಣ್ಯಾಧಿಕಾರಿಗಳಾದ ಹೇಮಂತ್‌ ಕುಮಾರ್‌, ಜಗದೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.