ಚಾಮರಾಜನಗರ: ಜಿಲ್ಲೆಯಲ್ಲಿ503 ಗ್ರಾಮಗಳಿದ್ದು, ಈ ಪೈಕಿ 210 ಗ್ರಾಮಗಳು ಕೋವಿಡ್ ಮುಕ್ತ ಗ್ರಾಮಗಳಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಮಂಗಳವಾರ ಹೇಳಿದರು.
ಹನೂರು ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾಮದ ಜೀರಿಗದ್ದೆ ಗ್ರಾಮದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮದ ಮುಖಂಡರೊಂದಿಗೆ ಸಭೆ ನಡೆಸಿದ ಅವರು, ‘ಇತ್ತೀಚಿನ ದಿನಗಳಲ್ಲಿ ನಗರಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಕೋವಿಡ್ ನಿಯಂತ್ರಣ ಮಾಡುವುದು ಆದ್ಯ ಕರ್ತವ್ಯ. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯಿತಿ ಆಡಳಿತ ಕೋವಿಡ್ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮೂಲಕ ಪಿ.ಜಿ ಪಾಳ್ಯ ಗ್ರಾಮ ಪಂಚಾಯಿತಿಯನ್ನು ಕೊರೊನಾ ಮುಕ್ತವನ್ನಾಗಿಸಬೇಕು’ ಎಂದು ಸೂಚಿಸಿದರು.
‘ಪಿ.ಜಿ.ಪಾಳ್ಯ ಗ್ರಾಮ ಪಂಚಾಯಿತಿಯಲ್ಲಿ 23 ಗ್ರಾಮಗಳಿದ್ದು, ಇದರಲ್ಲಿ 16 ಗ್ರಾಮಗಳಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗಿಲ್ಲ. ಕೆಲವು ಗ್ರಾಮಗಳಲ್ಲಿ ಕೋವಿಡ್ ನಿಯಮ ಪಾಲಿಸದ ಪರಿಣಾಮ ಸೋಂಕು ಕಂಡು ಬಂದಿದೆ. ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ನೀಡಿ ಸೋಂಕು ತಡೆಯಲು ಮುಂದಾಗಬೇಕು ಎಂದರು.
ಪಿ.ಜಿ.ಪಾಳ್ಯ ಆಸ್ಪತ್ರೆಗೆ ಆಂಬುಲೆನ್ಸ್ ನೀಡುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಮೂರ್ತಿ ಅವರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಈ ಬಗ್ಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ವಿವಿಧ ಕಡೆ ಭೇಟಿ: ಸಚಿವ ಸುರೇಶ್ ಕುಮಾರ್ ಅವರು ಮಂಗಳವಾರ ಹನೂರು ತಾಲ್ಲೂಕಿನ ವಿವಿಧ ಗಿರಿಜನರ ಹಾಡಿಗಳು ಹಾಗೂ ಗ್ರಾಮಗಳಿಗೆ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಿದರು. ಕೋವಿಡ್ ನಿಯಂತ್ರಣ ಸಂಬಂಧ ಪರಿಶೀಲಿಸಿದರು. ಹಲವು ಗ್ರಾಮಗಳಲ್ಲಿ ಸಭೆ ನಡೆಸಿದರು.
ಲೊಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೇಬಿನಕೋಬೆ ಗಿರಿಜನರ ಹಾಡಿಗೆ ಭೇಟಿ ನೀಡಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಗಿರಿಜನರಿಗೆ ನೀಡಲಾಗುತ್ತಿರುವ ಪೌಷ್ಟಿಕ ಆಹಾರದ ಬಗ್ಗೆ ಖುದ್ದು ಪರಿಶೀಲಿಸಿದರು. ಆಹಾರ ಇಲಾಖೆಯಿಂದ ವಿತರಿಸಲಾಗಿರುವ ಪಡಿತರ ಪದಾರ್ಥಗಳ ಬಗ್ಗೆಯೂ ಗ್ರಾಮಸ್ಥರಿದಂಲೇ ಮಾಹಿತಿ ಪಡೆದರು.
ಕಾಮಗೆರೆಗೆ ಭೇಟಿ ನೀಡಿದ ಸಚಿವರು, ಅಲ್ಲಿನ ವೈದ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಮಾಲೋಚಿಸಿದರು. ಸಿಂಗನಲ್ಲೂರು ಗ್ರಾಮಕ್ಕೂ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಿದರು. ಮಧುವಿನಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಟಾಸ್ಕ್ ಫೋರ್ಸ್ ಸಭೆ ನಡೆಸಿದರು.
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬದೋಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ. ರವಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ,ತಹಶೀಲ್ದಾರರಾದ ಜಿ.ಹೆಚ್ ನಾಗರಾಜು, ಕೆ. ಕುನಾಲ್, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ, ಬಿಇಒ ಟಿ.ಆರ್.ಸ್ವಾಮಿ ಇದ್ದರು.
ಕೋವಿಡ್ ಲಸಿಕೆ ಆಂದೋಲನಕ್ಕೆ ಸೂಚನೆ
ಹಾಡಿಗಳಲ್ಲಿ ಗಿರಿಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದರಿಂದ, ಅವರಿಗಾಗಿ ಪ್ರತ್ಯೇಕ ಲಸಿಕೆ ನೀಡುವ ವಿಶೇಷ ಆಂದೋಲನ ಕೈಗೊಳ್ಳಬೇಕು ಎಂದು ಸಚಿವ ಎಸ್.ಸುರೇಶ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್‌ನಿಂದ ತಪ್ಪಿಸಿಕೊಳ್ಳಲು ರೋಗ ನಿರೋಧಕ ಲಸಿಕೆಯನ್ನು ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.
ಶಾಸಕ ಆರ್.ನರೇಂದ್ರ ಅವರು ಮಾತನಾಡಿ, ‘ಕೋವಿಡ್ ಲಸಿಕೆ ಪಡೆಯುವುದರಿಂದ ಸುರಕ್ಷಿತವಾಗಿರಬಹುದು. ಸೋಂಕನ್ನು ತಡೆಗಟ್ಟುವ ಉದ್ದೇಶದಿಂದ ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು. ಇದರಲ್ಲಿ ಯಾವುದೇ ಹಿಂಜರಿಕೆ ಬೇಡ. ಇದರಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ’ ಎಂದು ಗಿರಿಜನರಿಗೆ ಮನವಿ ಮಾಡಿದರು.
‘ಲಸಿಕೆ ನೀಡುವ ಪ್ರಗತಿಯಲ್ಲಿ ಹಿಂದೆ ಉಳಿಯಬಾರದು. ಅರ್ಹರೆಲ್ಲರಿಗೂ ಲಸಿಕೆ ಪಡೆಯಲು ಅನುಕೂಲ ಕಲ್ಪಿಸಬೇಕು’ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.