ADVERTISEMENT

ನಿಲ್ಲದ ಸಾವಿನ ಸರಣಿ, ಮೃತರ ಸಂಖ್ಯೆ 17ಕ್ಕೆ

ಕೋವಿಡ್‌: 1000ದ ಸನಿಹಕ್ಕೆ ಗುಣಮುಖರ ಸಂಖ್ಯೆ, ಹೊ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 16:14 IST
Last Updated 12 ಆಗಸ್ಟ್ 2020, 16:14 IST
ಚಾಮರಾಜನಗರದ 26ನೇ ವಾರ್ಡ್‌ನ ರಸ್ತೆಯ ಒಂದು ಭಾಗವನ್ನು ಕಂಟೈನ್‌ಮೆಂಟ್‌ ವಲಯ ಎಂದು ಘೋಷಿಸಿರುವುದು
ಚಾಮರಾಜನಗರದ 26ನೇ ವಾರ್ಡ್‌ನ ರಸ್ತೆಯ ಒಂದು ಭಾಗವನ್ನು ಕಂಟೈನ್‌ಮೆಂಟ್‌ ವಲಯ ಎಂದು ಘೋಷಿಸಿರುವುದು   

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌–19ನಿಂದಾಗಿ ಸಾವಿಗೀಡಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಬುಧವಾರವೂ ಇಬ್ಬರು ಮೃತಪಟ್ಟಿದ್ದಾರೆ.

ಇಬ್ಬರೂ ಕೋವಿಡ್‌ ಕಾರಣದಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 17ಕ್ಕೆ ಏರಿದೆ. ಸೋಂಕು ದೃಢಪಟ್ಟಿದ್ದರೂ, ಬೇರೆ ಅನಾರೋಗ್ಯದಿಂದ ಒಂಬತ್ತು ಮಂದಿ ಪ್ರಾಣಕಳೆದುಕೊಂಡಿದ್ದಾರೆ.

ಜಿಲ್ಲೆಯಲ್ಲಿ ಸತತ ನಾಲ್ಕು ದಿನಗಳಿಂದ ಸಾವಿನ ಪ್ರಕರಣಗಳು ವರದಿಯಾಗುತ್ತಿವೆ. ಒಂದು ದಿನ ಒಬ್ಬರು ಮೃತಪ‍ಟ್ಟಿದ್ದರೆ, ಉಳಿದ ಮೂರು ದಿನಗಳಲ್ಲಿ ತಲಾ ಇಬ್ಬರು ಅಸುನೀಗಿದ್ದಾರೆ.

ADVERTISEMENT

ಯಳಂದೂರು ತಾಲ್ಲೂಕಿನ ಕಂದಳ್ಳಿ ನಿವಾಸಿ 69 ವರ್ಷದ ವೃದ್ಧ (ರೋಗಿ ಸಂಖ್ಯೆ–1,89,253) ಬುಧವಾರ ಕೋವಿಡ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರು ಆಗಸ್ಟ್‌8ರಂದು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಕೊಳ್ಳೇಗಾಲದ ದೇವಾಂಗ ಪೇಟೆಯ 80 ವರ್ಷದ ವೃದ್ಧ (ರೋಗಿ ಸಂಖ್ಯೆ 1,44,439) ಮೃತಪಟ್ಟ ಮತ್ತೊಬ್ಬ ವ್ಯಕ್ತಿ. ಆಗಸ್ಟ್‌ 4ರಂದು ಇವರು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಹೊಸದಾಗಿ ಜಿಲ್ಲೆಯ 52 ಮಂದಿಯಲ್ಲಿ ಕೋವಿಡ್‌–19 ಇರುವುದು ಪತ್ತೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ ವರದಿಯಾಗಿರುವ ಪ್ರಕರಣಗಳ ಸಂಖ್ಯೆ 1,372ಕ್ಕೆ ಏರಿದೆ.

ಬುಧವಾರ 67 ಮಂದಿ ಸೋಂಕು ಮುಕ್ತರಾಗಿ ಮನೆಗೆ ತೆರಳಿದ್ದು, ಇದರೊಂದಿಗೆ ಗುಣಮುಖರಾದವರ ಸಂಖ್ಯೆ 925ಕ್ಕೆ ತಲುಪಿದೆ. ಸದ್ಯ 421 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 112 ಮಂದಿ ಮನೆಯಲ್ಲೇ ಪ್ರತ್ಯೇಕವಾಗಿದ್ದುಕೊಂಡು (ಹೋಂ ಐಸೋಲೇಷನ್‌) ಚಿಕಿತ್ಸೆ ಪಡೆಯುತ್ತಿದ್ದಾರೆ (ಬುಧವಾರ 7 ಮಂದಿ ಇದನ್ನು ಆಯ್ಕೆ ಮಾಡಿದ್ದಾರೆ). ಉಳಿದವರು ಕೋವಿಡ್‌ ಆಸ್ಪತ್ರೆ/ಕೇರ್‌ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 23 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬುಧವಾರ 545 ಗಂಟಲು ದ್ರವ ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಎಲ್ಲವನ್ನೂ ಆರ್‌ಟಿಪಿಸಿಆರ್‌ ಪ್ರಯೋಗಾಲಯದಲ್ಲಿ ನಡೆಸಲಾಗಿದೆ. 494 ಮಂದಿಯ ವರದಿ ನೆಗೆಟಿವ್‌ ಬಂದಿದೆ. 51 ಪ್ರಕರಣ ಇಲ್ಲಿ ದೃಢಪಟ್ಟರೆ, ಒಂದು ಮೈಸೂರಿನಲ್ಲಿ ದೃಢಪಟ್ಟಿದೆ.

ಜಿಲ್ಲೆಯಲ್ಲಿ ಈವರೆಗೆ 28,778 ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗಿದೆ. 27,444 ಮಂದಿಯ ವರದಿ ನೆಗೆಟಿವ್‌ ಬಂದಿವೆ.

52 ಪ್ರಕರಣಗಳ ಪೈಕಿ ಚಾಮರಾಜನಗರ ತಾಲ್ಲೂಕಿನಲ್ಲಿ 23, ಕೊಳ್ಳೇಗಾಲ 17, ಹನೂರು ಏಳು, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಮೂರು ಹಾಗೂ ಯಳಂದೂರು ತಾಲ್ಲೂಕಿನಲ್ಲಿ ಎರಡು ಪ್ರಕರಣಗಳು ದೃಢಪಟ್ಟಿವೆ.

ಗುಣಮುಖರಾದ 67 ಜನರಲ್ಲಿ ಕೊಳ್ಳೇಗಾಲ ತಾಲ್ಲೂಕಿನ 26, ಚಾಮರಾಜನಗರದ 16, ಗುಂಡ್ಲುಪೇಟಯ 13, ಯಳಂದೂರಿನ 11 ಹಾಗೂ ಹನೂರು ತಾಲ್ಲೂಕಿನ ಒಬ್ಬರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.