ADVERTISEMENT

ಗುಂಡ್ಲುಪೇಟೆ: ಗಂಡನ ಶವಕ್ಕಾಗಿ ಪತ್ನಿಯರ ಕಿತ್ತಾಟ

ಅನಾರೋಗ್ಯದಿಂದ ವಕೀಲ ನಿಧನ

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 4:14 IST
Last Updated 1 ಜನವರಿ 2022, 4:14 IST
ಪಾಪಣ್ಣಶೆಟ್ಟಿ ಅವರ ಕುಟುಂಬದ ಸದಸ್ಯರೊಂದಿಗೆ ಸಬ್‌ಇನ್‌ಸ್ಪೆಕ್ಟರ್‌ ರಾಜೇಂದ್ರ ಅವರು ಮಾತನಾಡುತ್ತಿರುವುದು
ಪಾಪಣ್ಣಶೆಟ್ಟಿ ಅವರ ಕುಟುಂಬದ ಸದಸ್ಯರೊಂದಿಗೆ ಸಬ್‌ಇನ್‌ಸ್ಪೆಕ್ಟರ್‌ ರಾಜೇಂದ್ರ ಅವರು ಮಾತನಾಡುತ್ತಿರುವುದು   

ಗುಂಡ್ಲುಪೇಟೆ: ಮೃತಪಟ್ಟ ಗಂಡನ ಶವಕ್ಕಾಗಿ ಮೊದಲ ಪತ್ನಿ ಹಾಗು ಎರಡನೇ ಪತ್ನಿ ನಡುವೆ ಕಿತ್ತಾಟ ನಡೆದಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪ್ರಕರಣ ಕೊನೆಗೂ ಪೊಲೀಸರ ಮಧ್ಯಪ್ರವೇಶದಿಂದ ಇತ್ಯರ್ಥವಾಯಿತು. ಮೊದಲ ಪತ್ನಿಗೆ ಶವವನ್ನು ಹಸ್ತಾಂತರಿಸಲಾಯಿತು.

ದೊಡ್ಡತುಪ್ಪೂರು ಗ್ರಾಮದ ವಕೀಲ ಪಾಪಣ್ಣಶೆಟ್ಟಿಅವರು ಅನಾರೋಗ್ಯದಿಂದ ಬುಧವಾರ ಮೃತಪಟ್ಟಿದ್ದರು. ಪಾಪಣ್ಣಶೆಟ್ಟಿ ಅವರು ಮೊದಲಪತ್ನಿ ನಿಮಿತ ಎಂಬುವವರಿಂದ ದೂರವಿದ್ದು, ಮಹದೇವಮ್ಮ ಎಂಬ ಎರಡನೇ ಪತ್ನಿ ಜೊತೆಗೆ ವಾಸವಿದ್ದರು.

ADVERTISEMENT

ಪಾಪಣ್ಣಶೆಟ್ಟಿ ಅವರು ನಿಮಿತ ಎಂಬುವವರನ್ನು ಈ ಹಿಂದೆ ಮದುವೆಯಾಗಿದ್ದರು. ಅವರ ತಂದೆ ತಮ್ಮ ಆಸ್ತಿಯನ್ನು ಪಾಪಣ್ಣ ಅವರಿಗೆ ಬರೆದಿದ್ದರು ಎನ್ನಲಾಗಿದೆ. ದಂಪತಿ ನಡುವೆ ಭಿನ್ನಾಭಿಪ್ರಾಯ ಬಂದು ಪಾಪಣ್ಣ ಶೆಟ್ಟಿ ಅವರು ನಿಮಿತ ಅವರಿಂದ ದೂರವಾಗಿದ್ದರು. ನಂತರ ಮಹದೇವಮ್ಮ ಎಂಬುವವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಒಬ್ಬ ಮಗ ಇದ್ದಾನೆ.

ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಪಾಪಣ್ಣಶೆಟ್ಟಿ ತನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ನಿಮಿತ ಅವರು ಕೆಲವು ತಿಂಗಳ ಹಿಂದೆ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಬುಧವಾರ ಪಾಪಣ್ಣ ಶೆಟ್ಟಿ ಅವರು ದೊಡ್ಡತುಪ್ಪೂರಿನ ಮನೆಯಲ್ಲಿ ನಿಧನರಾದ ವಿಷಯ ತಿಳಿಯುತ್ತಿದ್ದಂತೆ ನಿಮಿತ ಅವರು ಗುರುವಾರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಾಗಿದ್ದರಿಂದ ಪೊಲೀಸರು ಶವಪರೀಕ್ಷೆ ನಡೆಸಿದರು.

ಆ ಬಳಿಕ, ಶವವನ್ನು ತಮಗೆ ಹಸ್ತಾಂತರಿಸಬೇಕು ಎಂದು ನಿಮಿತ ಒತ್ತಾಯ ಮಾಡಿದ್ದಕ್ಕೆ ಮಹದೇವಮ್ಮ ಅವರು ಆಕ್ಷೇಪಿಸಿದರು. ಇದರಿಂದ ಪೊಲೀಸರು ಇಕ್ಕಟ್ಟಿಗೆ ಸಿಲಿಕಿದರು. ಪ್ರಕರಣ ಇತ್ಯರ್ಥ ಆಗದೇ ಇದ್ದುದರಿಂದ ಶವವನ್ನು ಗುರುವಾರ ಸಂಜೆ ಜಿಲ್ಲಾಸ್ಪತ್ರೆಗೆ ತಂದು ಶವಾಗಾರದಲ್ಲಿ ಇರಿಸಲಾಗಿತ್ತು.

ಶುಕ್ರವಾರ ಬೆಳಿಗ್ಗೆ ಮತ್ತೆ ಪೊಲೀಸರ ಮಧ್ಯಪ್ರವೇಶದಿಂದ ಶವವನ್ನು ಮೊದಲ ಪತ್ನಿ ನಿಮಿತ ಅವರಿಗೆ ಹಸ್ತಾಂತರಿಸಲಾಯಿತು. ಪೊಲೀಸರ ಉಪಸ್ಥಿತಿಯಲ್ಲೇ ಅಂತ್ಯಕ್ರಿಯೆಯನ್ನು ನಡೆಸಲಾಯಿತು.

ಇನ್‌ಸ್ಪೆಕ್ಟರ್‌ ಮಹದೇವಸ್ವಾಮಿ ಅವರು ಇದನ್ನು ‘ಪ್ರಜಾವಾಣಿ’ಗೆ ಖಚಿತ ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.