ADVERTISEMENT

ಬಿಜೆಪಿ ಸರ್ಕಾರಕ್ಕೆ ಎರಡು ವರ್ಷ: ಸಿ.ಎಂ ಬರಲಿಲ್ಲ, ದೊಡ್ಡ ಯೋಜನೆ ಕೊಡಲಿಲ್ಲ

ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರಕ್ಕೆ ಎರಡು ವರ್ಷ: ಜಿಲ್ಲೆಗೆ ಸಿಕ್ಕಿದ್ದೇನು?

ಸೂರ್ಯನಾರಾಯಣ ವಿ
Published 26 ಜುಲೈ 2021, 3:08 IST
Last Updated 26 ಜುಲೈ 2021, 3:08 IST
ಮಹದೇಶ್ವರ ಬೆಟ್ಟದಲ್ಲಿ 2020ರ ನವೆಂಬರ್‌ 26ರಂದು ನಡೆದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಭಾಗವಹಿಸಿದ್ದರು
ಮಹದೇಶ್ವರ ಬೆಟ್ಟದಲ್ಲಿ 2020ರ ನವೆಂಬರ್‌ 26ರಂದು ನಡೆದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಭಾಗವಹಿಸಿದ್ದರು   

ಚಾಮರಾಜನಗರ: ಕಾಂಗ್ರೆಸ್ ಜೆಡಿಎಸ್ ಸರ್ಕಾರ ಪತನವಾಗಿ ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷಗಳಾದರೂ ಗಡಿ ಜಿಲ್ಲೆ ಚಾಮರಾಜನಗರಕ್ಕೆ ದೊಡ್ಡ ಯೋಜನೆಗಳನ್ನು ನೀಡಿಲ್ಲ.

ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಮೆಟ್ಟಿಲು ನಿರ್ಮಾಣ ಸೇರಿದಂತೆ ₹119 ಕೋಟಿ‌ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿದ್ದು ಮಾತ್ರ ಜಿಲ್ಲೆಯ ಮಟ್ಟಿಗೆ ಬಿಜೆಪಿ ಸರ್ಕಾರ ನೀಡಿರುವ ಕೊಡುಗೆ. ಸರ್ಕಾರ ಯೋಜನೆಗೆ ಅನುಮೋದನೆ‌ ಕೊಟ್ಟಿದ್ದರೂ, ಇವೆಲ್ಲವೂ ಮಲೆ‌ಮಹದೇಶ್ವರಸ್ವಾಮಿ‌ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರೂಪಿಸಿರುವ ಯೋಜನೆಗಳು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲಾ ಕೇಂದ್ರಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ. ಮಹದೇಶ್ವರ ಬೆಟ್ಟದಲ್ಲಿ ವಿವಿಧ ಯೋಜನೆಗಳಿಗೆ ಶಂಕು ಸ್ಥಾಪನೆ‌ ನೆರವೇರಿಸುವುದಕ್ಕೆ ಬಂದಿರುವುದೇ (2020ರ ನವೆಂಬರ್‌ 26ರಂದು) ಜಿಲ್ಲೆಗೆ ಅವರು ನೀಡಿದ ಮೊದಲ ಮತ್ತು ಕೊನೆಯ ಭೇಟಿ. ಇದೇ ವಿಚಾರವನ್ನು‌ ಮುಂದಿಟ್ಟುಕೊಂಡು ವಿರೋಧ ಪಕ್ಷದ ಮುಖಂಡರು ಮುಖ್ಯಮಂತ್ರಿ ಅವರನ್ನು ಟೀಕಿಸುತ್ತಲೇ ಇದ್ದಾರೆ.

ADVERTISEMENT

ಯಡಿಯೂರಪ್ಪ ಅವರ ಸಂಪುಟದ ಸಚಿವರಲ್ಲಿ ಎಲ್ಲರೂ ಜಿಲ್ಲೆಗೆ ಭೇಟಿ ನೀಡಿಲ್ಲ. ಉಪ‌ಮುಖ್ಯಮಂತ್ರಿಗಳಾದ ಸಿ.ಎಸ್.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ, ಗೃಹ ಸಚುವ ಬಸವರಾಜ ಬೊಮ್ಮಾಯಿ ಅವರು ಇದುವರೆಗೂ ಭೇಟಿ‌ ಕೊಟ್ಟಿಲ್ಲ. ಮತ್ತೊಬ್ಬ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಮುಖ್ಯಮಂತ್ರಿ ಅವರೊಂದಿಗೆ ಮಹದೇಶ್ವರ ಬೆಟ್ಟಕ್ಕೆ ಬಂದಿದ್ದರೇ ವಿನಾ ಜಿಲ್ಲಾ‌ ಕೇಂದ್ರಕ್ಕೆ ಬಂದಿಲ್ಲ.

ಅಧಿಕಾರಕ್ಕೆ ಬಂದ‌ ನಂತರ ಯಡಿಯೂರಪ್ಪ ಅವರು ಎರಡು ಬಜೆಟ್‌ಗಳನ್ನು ಮಂಡಿಸಿದ್ದಾರೆ. ಎರಡರಲ್ಲೂ ಜಿಲ್ಲೆಯ ಪಾಲಿಗೆ ದೊಡ್ಡ ಕೊಡುಗೆಗಳಿರಲಿಲ್ಲ. ಕಳೆದ ವರ್ಷಕ್ಕೆ‌ ಹೋಲಿಸಿದರೆ, ಈ ಬಾರಿಯ ಬಜೆಟ್‌ನಲ್ಲಿ ಮೂರು ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ಈ ಪೈಕಿ ಎರಡು ಪರಿಸರ ಪ್ರವಾಸೋದ್ಯಮಕ್ಕೆ‌ ಸಂಬಂಧಿಸಿದ ಯೋಜನೆಗಳು. ಇನ್ನೊಂದು ಕೃಷಿಗೆ ಸಂಬಂಧಿಸಿದ್ದು.

ಗೋಪಿನಾಥಂ ಪ್ರದೇಶದಲ್ಲಿ‌ ಸಫಾರಿ ಸೌಲಭ್ಯ ಆರಂಭಕ್ಕೆ ₹5 ಕೋಟಿ, ಬಿಆರ್‌ಟಿ ವ್ಯಾಪ್ತಿಯಲ್ಲಿ ₹1 ಕೋಟಿ ವೆಚ್ಚದಲ್ಲಿ ಆನೆ ಶಿಬಿರ ನಿರ್ಮಾಣ ಹಾಗೂ ಅರಿಸಿನ ಮಾರುಕಟ್ಟೆ ಅಭಿವೃದ್ಧಿ.. ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಯೋಜನೆಗಳು.

ಕೋವಿಡ್ ನೆಪದಲ್ಲಿ ಒಂದಷ್ಟು ಸೌಲಭ್ಯ: ಕೋವಿಡ್ ಹಾವಳಿಯ ನೆಪದಲ್ಲಿ ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ಒಂದಷ್ಟು ಸೌಲಭ್ಯ ಸಿಕ್ಕಿವೆ. ಇವು ರಾಜ್ಯದ‌ ಎಲ್ಲ ಜಿಲ್ಲೆಗಳಿಗೂ ದೊರೆತಿವೆ.

₹1.79 ಕೋಟಿ‌ ವೆಚ್ಚದಲ್ಲಿ ಆರ್‌ಟಿಪಿಆರ್ ಪ್ರಯೋಗಾಲಯ ಸ್ಥಾಪನೆಯಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಐಸಿಯು, ವೆಂಟಿಲೇಟರ್ ಸೌಲಭ್ಯ ಹೆಚ್ಚಿಸಲಾಗಿದೆ. ತಾಲ್ಲೂಕು ಆಸ್ಪತ್ರೆಗಳಿಗೂ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 6000 ಲೀಟರ್ ಸಾಮರ್ಥ್ಯದ ಆಮ್ಲಜನಕ ಘಟಕ ಆರಂಭವಾಗಿದೆ. ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲೂ ಆಮ್ಲಜನಕ ಜನರೇಟರ್ ಸ್ಥಾಪಿಸಲಾಗುತ್ತಿದೆ.

ಉಳಿದಂತೆ ಕೇಂದ್ರ ಸರ್ಕಾರದ ಸಹಯೋಗದಲ್ಲಿ ₹460 ಕೋಟಿ ವೆಚ್ಚದಲ್ಲಿ‌ ಜಲ ಜೀವನ್ ಮಿಷನ್‌ ಅನುಷ್ಠಾನಗೊಳ್ಳುತ್ತಿದೆ. ಕೊಳ್ಳೇಗಾಲ, ಯಳಂದೂರು, ಹನೂರು ತಾಲ್ಲೂಕುಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಮಂಜೂರಾಗಿವೆ.

₹32 ಕೋಟಿ: ಇತ್ತೀಚೆಗೆ ಮುಖ್ಯಮಂತ್ರಿ ಅವರು 130 ವಿಧಾನಸಭಾ ಕ್ಷೇತ್ರಗಳಿಗೆ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯ ಅಡಿ ₹1,277 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಇದರಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ ₹32 ಕೋಟಿ ಸಿಕ್ಕಿದೆ. ಬಿಜೆಪಿ ಶಾಸಕರು ಇರುವ ಗುಂಡ್ಲುಪೇಟೆ ಕ್ಷೇತ್ರಕ್ಕೆ ₹22 ಕೋಟಿ, ಚಾಮರಾನಗರ, ಕೊಳ್ಳೇಗಾಲ ಮತ್ತು ಹನೂರು ಕ್ಷೇತ್ರಗಳಿಗೆ ತಲಾ ₹5 ಕೋಟಿ ಬಿಡುಗಡೆಯಾಗಿದೆ.

ವೈದ್ಯಕೀಯ ಕಾಲೇಜಿನ ಹೊಸ ಭೋದನಾ ಆಸ್ಪತ್ರೆ ಕಾಮಗಾರಿ, ಆಲಂಬೂರು ಏತ ನೀರಾವರಿ ಯೋಜನೆಯ‌ ನಾಲ್ಕನೇ ಹಂತದ ಕಾಮಗಾರಿ, ಸುತ್ತೂರು ಏತ ನೀರಾವರಿ‌ ಯೋಜನೆಯ‌ ಕೆಲಸಗಳು ಪ್ರಗತಿಯಲ್ಲಿದೆಯಾದರೂ, ಇವೆಲ್ಲವೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಜೂರಾದವುಗಳು.

ಸರ್ಕಾರದ ಕೊಡುಗೆ ಶೂನ್ಯ: ಧ್ರುವನಾರಾಯಣ
‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಎರಡು ವರ್ಷಗಳಲ್ಲಿ ಜಿಲ್ಲಾ ಕೇಂದ್ರ ಚಾಮರಾಜನಗರಕ್ಕೆ ಒಂದು ಬಾರಿಯೂ ಭೇಟಿ ನೀಡದೇ ಇರುವುದು ಜಿಲ್ಲೆಯ ಜನತೆಗೆ ತೋರಿರುವ ಅಗೌರವ. ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ಬಂದಿರಲಿಲ್ಲ. ಈ ಸಲ ಮಹದೇಶ್ವರ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದಾರೆ. ಆದರೆ, ಜಿಲ್ಲಾ ಕೇಂದ್ರಕ್ಕೆ ಬಂದು ಪ್ರಗತಿ ಪರಿಶೀಲನೆ ಸಭೆಯಂತಹ ಕಾರ್ಯಕ್ರಮಗಳನ್ನು ಮಾಡಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಬಿಜೆಪಿ ಸರ್ಕಾರ ಜಿಲ್ಲೆಯ ಅಭಿವೃದ್ಧಿಗಾಗಿ ಏನೂ ಯೋಜನೆಗಳನ್ನು ಘೋಷಿಸಿಲ್ಲ. ಯಡಿಯೂರಪ್ಪ ಸರ್ಕಾರ ಶಿವಮೊಗ್ಗ ಜಿಲ್ಲೆಗೆ ಸೀಮಿತವಾಗಿದೆ. ಪ್ರತಿ ಸಂಪುಟ ಸಭೆಯಲ್ಲೂ ಶಿವಮೊಗ್ಗಕ್ಕೆ ಒಂದಿಲ್ಲೊಂದು ಯೋಜನೆಗಳನ್ನು ಮಂಜೂರು ಮಾಡಲಾಗುತ್ತಿದೆ. ಈ ಸರ್ಕಾರ ಜಿಲ್ಲೆಯ ಅಭಿವೃದ್ಧಿಗೆ ನೀಡಿರುವ ಕೊಡುಗೆ ಶೂನ್ಯ’ ಎಂದು ಹೇಳಿದರು.

***

ಯಡಿಯೂರಪ್ಪ ನೇತೃತ್ವದ ಸರ್ಕಾರ ಜಿಲ್ಲೆಯ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಪ್ರಮುಖವಾಗಿ ಜಿಲ್ಲೆಯ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಕ್ರಮ ಕೈಗೊಂಡಿದೆ.
-ಎಂ.ರಾಮಚಂದ್ರ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.