ADVERTISEMENT

ಯಳಂದೂರು: ನಿಸರ್ಗದಲ್ಲಿ ಪಲ್ಲವಿಸಿದ ‘ಚೈತ್ರದ ಚಿಗುರು’

ಮನೆ ಮನೆಗಳಲ್ಲಿ ಹೊಸ ವರ್ಷದ ಸಂಭ್ರಮ; ಮತ್ತೆ ಹಾಡಿತು ಕೋಗಿಲೆ!

ನಾ.ಮಂಜುನಾಥ ಸ್ವಾಮಿ
Published 1 ಏಪ್ರಿಲ್ 2022, 19:31 IST
Last Updated 1 ಏಪ್ರಿಲ್ 2022, 19:31 IST
ಹೊಸ ಸಂವತ್ಸರಕ್ಕೆ ನಾಂದಿ ಹಾಡುವ ಯುಗಾದಿ ಹಬ್ಬದ ಹೊಸ್ತಿಲಲ್ಲಿ ಚಾಮರಾಜನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಚಿಗುರು–ಹೂವಿನೊಂದಿಗೆ ಕಂಗೊಳಿಸುತ್ತಿರುವ ಕೊನ್ನೆ ಮರ
ಹೊಸ ಸಂವತ್ಸರಕ್ಕೆ ನಾಂದಿ ಹಾಡುವ ಯುಗಾದಿ ಹಬ್ಬದ ಹೊಸ್ತಿಲಲ್ಲಿ ಚಾಮರಾಜನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಚಿಗುರು–ಹೂವಿನೊಂದಿಗೆ ಕಂಗೊಳಿಸುತ್ತಿರುವ ಕೊನ್ನೆ ಮರ   

ಯಳಂದೂರು:ಜೀವನ ಎಂದರೆ ಸುಂದರ ಸ್ವಪ್ನ ಅಲ್ಲ. ಕಹಿ ಬೇವೂ ಅಲ್ಲ. ಅದು ಬೇವು–ಬೆಲ್ಲದ ಮಿಶ್ರಣ. ಅರೆ ಕಹಿ, ಅರೆ ಸಿಹಿ, ಸ್ವಲ್ಪ ನಗು, ಕೊಂಚ ಅಳು, ತುಸು ಕೋಪ, ನಸು ತಾಪ. ನೀನದನ್ನು ನಗುನಗುತ್ತಾ ನುಂಗಬೇಕು. ನೋವನ್ನು ನಗೆಯಾಗಿ ಪರಿವರ್ತಿಸಬೇಕು... ಎಂದು ಹೇಳುತ್ತಾರೆ ನಾಡಿಗೇರಕೃಷ್ಣರಾಯರು. ಇದನ್ನು ಬಿಂಬಿಸು ವಂತೆ ಯುಗಾದಿ ಮತ್ತೆ ನಮ್ಮ ಮುಂದೆ ಬಂದಿದೆ.

ಪ್ರಕೃತಿಗೂ ವಸಂತಾಗ ಮನ ಸಾರುವ ಸಂಭ್ರಮ ಇದು. ಇಳೆಗೆ ಹಸಿರುಡುಗೆ ತೊಡುವ ತವಕ. ಖಗ ಮೃಗ, ಕೋಗಿಲೆಗಳಿಗೆ ಚೈತ್ರದಚಿಗುರನ್ನು ಸ್ಪರ್ಶಿಸುವ ಧಾವಂತ. ಮಂಜು ಮತ್ತು ಹೊಂಜುಗಳನ್ನು ಹೊಸಕಿ ನಿಸರ್ಗಕ್ಕೆ ರಂಗು ತುಂಬುವ ನೇಸರನ ಓಘ. ಫಲ, ಪುಷ್ಪಗಳತ್ತ ಚಿತ್ತ ಹರಿಸುವಜೇನು, ದುಂಬಿಗಳ ಸೆಳೆತ, ಹೊಸ ವಸ್ತ್ರ ತೊಟ್ಟು ಸಂಭ್ರಮಿಸುವ ಜನಪದರು... ಹೀಗೆಹತ್ತಾರು ಜೀವನ್ಮುಖಿ ಗಳಿಗೆಗಳಿಗೆ ಕಾರಣವಾಗುವ ಯುಗಾದಿ ಧರೆಯ ಪ್ರತಿ ಜೀವಿಗೂ, ಋತುವಿಗೂ ಮುನ್ನುಡಿ ಬರೆಯುತ್ತದೆ.

ಜಿಲ್ಲೆಯಾದ್ಯಂತ ಈ ಬಾರಿ ಹಬ್ಬದ ಹುರುಪು ತುಸು ಹೆಚ್ಚಾಗಿಯೇ ಇದೆ. ಎರಡು ವರ್ಷದಿಂದ ಕೋವಿಡ್ ಕಾರಣಕ್ಕೆ ಯುಗಾದಿ ಸಡಗರ ಮಂಕಾಗಿತ್ತು. ಮನೆಗಳ ಆಚರಣೆಗಷ್ಟೇ ಸೀಮಿತವಾಗಿತ್ತು. ಈ ವರ್ಷ ಕೋವಿಡ್‌ ಹಾವಳಿ ಇಲ್ಲದಿರುವುದರಿಂದ ಹಬ್ಬದ ಉತ್ಸಾಹ ಕಳೆಗಟ್ಟಿದೆ. ಗ್ರಾಮೀಣ ಭಾಗ ದಲ್ಲಿಹೊನ್ನೇರು ಕಟ್ಟುವ ಪರಂಪರೆಯ ಉತ್ಸುಕತೆ ಹೆಚ್ಚಾಗಿದೆ. ಮನೆಗೆ ಸುಣ್ಣ, ಬಣ್ಣ ಬಳಿದು ಸಿಂಗರಿಸುವ ಕಾಯಕಕ್ಕೆ ಚಾಲನೆ ದೊರೆತಿದೆ. ಮಹಿಳೆಯರ ಸಾಂಗತ್ಯದಲ್ಲಿ ಹೊಸಮಡಕೆ, ಹೊಸ ನೀರು ತರುವ ಸಂಪ್ರದಾಯ ಎಲ್ಲೆಡೆ ಇದೆ.

ADVERTISEMENT

'ಹಬ್ಬಕ್ಕೂ ಮುನ್ನಾ ದಿನ ಮಂಟೇಸ್ವಾಮಿ ಒಕ್ಕಲಿ ನವರು ಶಿಶು ಮಕ್ಕಳ ಗದ್ದುಗೆ ದರ್ಶನಮಾಡುತ್ತಾರೆ. ಹಬ್ಬದ ದಿನ ಕಾವೇರಿ ನದಿಯಲ್ಲಿ ಜಳಕ ಮಾಡಿ ಪೂಜೆ ಸಲ್ಲಿಸುತ್ತಾರೆ.ನಂತರ ಊರುಗಳಿಗೆ ತೆರಳುತ್ತಾರೆ. ಕೃಷಿ ಕರು ಮಳೆ, ಬೆಳೆ ಸಮೃದ್ಧಿಗಾಗಿ ಇಷ್ಟದೈವಗಳನ್ನು ಪ್ರಾರ್ಥಿಸುತ್ತಾರೆ. ಜೋಡಿ ಎತ್ತುಗಳಿಗೆ ವಿಶೇಷ ಹೂವು ಗಳಿಂದ ಸಿಂಗರಿಸಿ,ಒಂದೆರಡು ಸುತ್ತು ಭೂಮಿಯನ್ನು ಹರಗುತ್ತಾರೆ’ ಎಂದು ರೈತ ಅಂಬಳೆ ಶಿವಕುಮಾರ್ ಹೇಳಿದರು.

'ಮೂರು ತಿಂಗಳಿಂದ ನೂರಾರು ಉತ್ಸವ ನಡೆದಿವೆ. ಕೊಂಡೋತ್ಸವ ಮುಗಿದಿದೆ. ಮುಂದೆ ಉತ್ತುವುದು ಬಿತ್ತುವುದು ಇದ್ದೇ ಇದೆ.ಹಾಗಾಗಿ, ವರ್ಷಾರಂಭದಲ್ಲಿ ಯುಗಾದಿ ಮುಗಿಸಿ,ಜಾತ್ರೋತ್ಸವ ಸಂಪನ್ನಗೊಳಿಸಿ, ಕೃಷಿ ಚಟುವಟಿಕೆಯಲ್ಲಿ ತೊಡಗಲು ಹಬ್ಬವೇದಿಕೆಯಾಗಲಿದೆ. ಹಬ್ಬದಂದು ಸಿಹಿ ಊಟದ ಖಾದ್ಯವೂ ಇರುತ್ತದೆ. ಹಬ್ಬದ ಮರು ದಿನ ಮಾಂಸ ಪ್ರಿಯರಿಗೆ ಮೀಸಲು' ಎನ್ನುತ್ತಾರೆ ಮಾಂಬಳ್ಳಿ ಮಹೇಶ್.

ವಿಶೇಷ ಪೂಜೆ: ಹಬ್ಬದ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರಸ್ವಾಮಿ ರಥೋತ್ಸವ ಜರುಗಲಿದೆ. ನಗರ, ಪಟ್ಟಣ, ಹಳ್ಳಿ ಎನ್ನದೆ ಮನೆಗಳಲ್ಲಿ ವಿಶೇಷ ಪೂಜೆ ಪುನಸ್ಕಾರ ನಡೆಯಲಿವೆ. ಜನರು ಬೇವು–ಬೆಲ್ಲ ಹಂಚಿಕೊಳ್ಳಲಿದ್ದಾರೆ. ಹಬ್ಬದ ಊಟವನ್ನು ಸಿದ್ಧಪಡಿಸಿ ಕುಟುಂಬ, ನೆಂಟರಿಷ್ಟರ ಜೊತೆಗೆ ಸವಿಯಲಿದ್ದಾರೆ.

ಚಾಂದ್ರಮಾನ ಯುಗಾದಿ
ಪಂಚಾಂಗ ಪದ್ಧತಿಯಂತೆ ಚಾಂದ್ರಮಾನ ಯುಗಾದಿ ಚೈತ್ರ ಮಾಸದ ಮೊದಲ ದಿನ. ಶುದ್ಧ ಪಾಡ್ಯದಲ್ಲಿಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್‌ ಪ್ರಕಾರ ಹೊಸ ವರ್ಷ ಆರಂಭವಾಗುವ ದಿನ. ಜಿಲ್ಲೆ ಸೇರಿದಂತೆ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಚಾಂದ್ರಮಾನ ಯುಗಾದಿಯನ್ನು ಆಚರಿಸಲಾಗುತ್ತದೆ.

ಆದರೆ, ಕರಾವಳಿ ಅದರಲ್ಲೂ ವಿಶೇಷವಾಗಿ ದಕ್ಷಿಣ ಕನ್ನಡದಲ್ಲಿ ಸೌರಮಾನ ಯುಗಾದಿ ಆಚರಿಸಲಾಗುತ್ತದೆ.

ಮನೆಯ ಅಧಿದೇವತೆಯ ಪೂಜೆ, ನವ ವಸ್ತ್ರಧಾರಣೆ, ಪಂಚಾಂಗ ಶ್ರವಣ, ದಾನ ನೀಡುವ ಪದ್ಧತಿ ಇದೆ.ಸುಖ ದುಃಖಗಳ ಸಂಕೇತವಾಗಿ ಬೇವು ಬೆಲ್ಲ ಸೇವಿಸಿ, ವಸಂತ ನವರಾತ್ರಿಯನ್ನು ಸ್ವಾಗತಿಸುವಪರಂಪರೆ ಬೆಳೆದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.