ಚಾಮರಾಜನಗರ: ನಗರದಲ್ಲಿ ಯುಜಿಡಿ ಮ್ಯಾನ್‌ಹೋಲ್‌ಗಳು ನಿರ್ವಹಣೆಯ ಕೊರತೆಯಿಂದ ಅಪಾಯಕಾರಿ ಸ್ಥಿತಿ ತಲುಪಿದ್ದು ಸಾರ್ವಜನಿಕರ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ.
ನಗರದ ಹಲವು ಬಡಾವಣೆಗಳಲ್ಲಿ ಅವೈಜ್ಞಾನಿಕವಾಗಿ ನಡುರಸ್ತೆಯಲ್ಲೇ ನಿರ್ಮಾಣ ಮಾಡಿರುವ ಮ್ಯಾನ್‌ಹೋಲ್‌ಗಳು ನಿರ್ವಹಣೆಯ ಕೊರತೆಯಿಂದ ಶಿಥಿಲಗೊಂಡಿದ್ದು ಅಲ್ಲಲ್ಲಿ ಮುಚ್ಚಳಗಳು ಮುರಿದು ಹೋಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಜೀವಹಾನಿಯಾಗುವ ಮುನ್ನ ದುರಸ್ತಿ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸ್ಪಂದನೆ ದೊರೆಯುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಎಲ್ಲೆಲ್ಲಿ ಸಮಸ್ಯೆ ಗಂಭೀರ:
ರಾಮಸಮುದ್ರದ ಕುಲುಮೆ ರಸ್ತೆಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮ್ಯಾನ್‌ಹೋಲ್ ಮುಚ್ಚಳ ಮುರಿದು ಬಿದ್ದಿದೆ. ಸರಿಯಾಗಿ ರಸ್ತೆಯ ಮಧ್ಯೆಯೇ ಯುಜಿಡಿ ಗುಂಡಿ ಇದ್ದು ಈ ಭಾಗದ ಸಾರ್ವಜನಿಕರು ನಿತ್ಯವೂ ಆತಂಕದಲ್ಲಿ ಓಡಾಡುವಂತಾಗಿದೆ. ರಸ್ತೆಯ ಆಸುಪಾಸಿನಲ್ಲಿ ಸುಮಾರು 30 ರಿಂದ 40 ಮನೆಗಳಿದ್ದು ನಿತ್ಯವೂ ಇದೇ ರಸ್ತೆಯಲ್ಲೇ ಸಂಚರಿಸುತ್ತಾರೆ.
ಮುಕ್ತ ವಿಶ್ವವಿದ್ಯಾಲಯಕ್ಕೆ ಬರುವ ವಿದ್ಯಾರ್ಥಿಗಳು, ಸಿಬ್ಬಂದಿಯೂ ಇದೇ ರಸ್ತೆಯಲ್ಲಿ ಸಾಗಬೇಕಿದೆ. ಸುತ್ತಮುತ್ತಲಿನ ನಿವಾಸಿಗಳು ಮಕ್ಕಳನ್ನು ಹೊರಗೆ ಬಿಡಲು ಭಯಪಡುವ ಸ್ಥಿತಿ ಇದೆ ಎನ್ನುತ್ತಾರೆ ಸ್ಥಳೀಯರಾದ ಪರಮೇಶ್ವರಪ್ಪ.
ಬಡಾವಣೆಯ ನಾಗರಿಕರು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಾರೆ. ಮಕ್ಕಳು ಸೈಕಲ್ ತುಳಿಯುತ್ತಾರೆ. ರಾತ್ರಿಯ ಹೊತ್ತು ಸರಿಯಾಗಿ ಬೀದಿ ದೀಪಗಳು ಉರಿಯುವುದಿಲ್ಲ. ಈ ವೇಳೆಯಲ್ಲಿ ಸಾರ್ವಜನಿಕರು ರಸ್ತೆಯ ಮಧ್ಯೆ ಬಾಯ್ತೆರೆದಿರುವ ಯುಜಿಡಿ ಗುಂಡಿಗೆ ಬಿದ್ದು ಪ್ರಾಣಕ್ಕೆ ಕುತ್ತು ತಂದುಕೊಳ್ಳುವ ಆತಂಕ ಹೆಚ್ಚಾಗಿದೆ ಎನ್ನುತ್ತಾರೆ ಸ್ಥಳೀಯರು.
ಯುಜಿಡಿ ಗುಂಡಿ ಐದಾರು ಅಡಿ ಆಳವಿದ್ದು ಚಿಕ್ಕ ಮಕ್ಕಳು ಆಕಸ್ಮಿಕವಾಗಿ ಬಿದ್ದರೆ ಪ್ರಾಣಕ್ಕೆ ಕುತ್ತು ಖಚಿತ. ಅವಘಡಗಳು ಸಂಭವಿಸುವ ಮುನ್ನ ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸುತ್ತಾರೆ ಬಡಾವಣೆಯ ನಿವಾಸಿಗಳು.
ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಭಾರತ್ ಪೆಟ್ರೋಲ್ ಬಂಕ್ ಪಕ್ಕದ ಕಚ್ಛಾರಸ್ತೆಯಲ್ಲಿ ಯುಜಿಡಿ ಗುಂಡಿಗಳು ರಸ್ತೆಯ ಮಟ್ಟದಿಂದ ಅಡಿಯಷ್ಟು ಮೇಲಿದ್ದು ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ರಸ್ತೆಯ ಮಧ್ಯೆ ಯುಜಿಡಿ ಗುಂಡಿಗಳಿದ್ದು ಸಾರ್ವಜನಿಕರ ಸುಗಮ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ. ರಾತ್ರಿಯ ಹೊತ್ತು ವಾಹನಗಳು ಯುಜಿಡಿ ಮೇಲೆ ಹರಿದು ನಿಯಂತ್ರಣ ತಪ್ಪಿ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರಾದ ಮಹದೇವ್ ದೂರಿದರು.
ಹೌಸಿಂಗ್ ಬೋರ್ಡ್ ಬಡಾವಣೆ, ಬುದ್ಧನಗರ, ಪ್ರಶಾಂತ್ ನಗರ, ಪ್ರಗತಿ ನಗರ ಸಹಿತ ನಗರದ ಬಹುತೇಕ ಬಡಾವಣೆಗಳಲ್ಲಿ ಯುಜಿಡಿ ಗುಂಡಿಗಳು ಶಿಥಿಲಗೊಂಡಿದ್ದು ಕೆಲವು ಕಡೆಗಳಲ್ಲಿ ರಸ್ತೆಗಿಂತ ಕೆಳಮಟ್ಟದಲ್ಲಿದ್ದರೆ, ಕೆಲವು ಕಡೆಗಳಲ್ಲಿ ರಸ್ತೆಗಿಂತ ಮೇಲ್ಮಟ್ಟದಲ್ಲಿದ್ದು ಸಮಸ್ಯೆ ಸೃಷ್ಟಿಸುತ್ತಿವೆ. ನಗರಕ್ಕೆ ನೂತನ ಯುಜಿಡಿ ವ್ಯವಸ್ಥೆ ಕಲ್ಪಿಸುವವರೆಗೆ ತಾತ್ಕಾಲಿಕವಾಗಿ ದುರಸ್ತಿ ಮಾಡಿಕೊಡಬೇಕು ಎಂದು ಆಗ್ರಹಿಸುತ್ತಾರೆ ಸಾರ್ವಜನಿಕರು.
ವಾಹನಗಳು ನಿಯಂತ್ರಣ ತಪ್ಪಿ ಅಪಘಾತ ಹೆಚ್ಚಳ ರಾತ್ರಿಯ ಹೊತ್ತು ಸಂಚಾರ ಹೆಚ್ಚು ಅಪಾಯಕಾರಿ ತುರ್ತು ದುರಸ್ತಿಗೆ ಸಾರ್ವಜನಿಕರ ಒತ್ತಾಯ
‘ನಿರ್ವಹಣೆಗೆ ಟೆಂಡರ್ ಅಂತಿಮ’
ನಗರದ ಯುಜಿಡಿ ವ್ಯವಸ್ಥೆಯ ನಿರ್ವಹಣೆಗೆ ಖಾಸಗಿ ವ್ಯಕ್ತಿಯೊಬ್ಬರಿಗೆ ₹ 50 ಲಕ್ಷಕ್ಕೆ ಟೆಂಡರ್ ನೀಡಲಾಗಿದೆ. ವರ್ಕ್ ಆರ್ಡ್‌ರ್ ದೊರೆತ ಕೂಡಲೇ ಯುಜಿಡಿ ದುರಸ್ತಿ ಕಾರ್ಯ ಆರಂಭವಾಗಲಿದೆ. ಸಮಸ್ಯೆ ಗಂಭೀರವಾಗಿರುವ ಬಡಾವಣೆಗಳಲ್ಲಿ ಆದ್ಯತೆ ಮೇರೆಗೆ ಕಾಮಗಾರಿ ಮಾಡಲಾಗುವುದು. –ಸುರೇಶ್ ನಗರಸಭೆ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.