ಚಾಮರಾಜನಗರ: ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಶಕ್ತಿಯನ್ನು ಕುಂದಿಸಲು ಹೊರಟವರ ವಿರುದ್ಧ ಹೋರಾಟ ರೂಪಿಸಲು ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನಿಸಲಾಗಿದೆ ಎಂದು ಶ್ರಮಿಕ ವರ್ಗಗಳ ಒಕ್ಕೂಟದ ಮುಖಂಡ ಪು.ಶ್ರೀನಿವಾಸನಾಯಕ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಚಿಂತನಾ ಸಭೆಯಲ್ಲಿ ಹಿಂದುಳಿದ ವರ್ಗಗಳ ಮುಖಂಡರೊಂದಿಗೆ ಚರ್ಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಜಿಲ್ಲೆಯಿಂದಲ್ಲೇ ಹೋರಾಟ ಆರಂಭಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಬಿಜೆಪಿ, ಜೆಡಿಎಸ್ ಪಕ್ಷಗಳ ನಾಯಕರು ಸಿದ್ದರಾಮಯ್ಯ ಅವರನ್ನು ಮುಡಾ ಹಗರಣದಲ್ಲಿ ಸಿಲುಕಿಸಿ ರಾಜಕೀಯದಿಂದ ಹೊರಹಾಕುವ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಹುನ್ನಾರ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ರಾಜೀನಾಮೆಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಇದರ ವಿರುದ್ಧ ಶ್ರಮಿಕ ವರ್ಗಗಳು ಒಗ್ಗೂಡಿ ಪ್ರತಿ ಹೋರಾಟ ನಡೆಸಲಿವೆ ಎಂದರು.
ಚಾಮರಾಜನಗರದಿಂದಲ್ಲೇ ಹೋರಾಟ ಆರಂಭಿಸಿ ರಾಜ್ಯ ವ್ಯಾಪಿ ನಡೆಸಲಾಗುವುದು. ಕಾಯಕ ಸಮಾಜಗಳ ದುಡಿಮೆಯ ಫಲದಿಂದ ಬಲಿಷ್ಠ ಸಮಾಜಗಳು ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಬಲಾಢ್ಯರಾಗಿದ್ದಾರೆ. ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂ ಕಾಯಕ ಸಮಾಜಗಳ ಮೇಲಿನ ಶೋಷಣೆ ನಿಂತಿಲ್ಲ.
ಪ್ರಸ್ತುತ ಹಿಂದುಳಿದ ಸಮುದಾಯಕ್ಕೆ ಸೇರಿರುವ ಸಿದ್ದರಾಮಯ್ಯ ಅವರ ರಾಜಕೀಯ ಶಕ್ತಿ ಕುಂದಿಸಲು ಹೊರಟಿದ್ದಾರೆ. ಇದಕ್ಕೆ ಕಾಯಕ ಸಮಾಜ ಅವಕಾಶ ನೀಡುವುದಿಲ್ಲ ಎಂದು ಪು.ಶ್ರೀನಿವಾಸನಾಯಕ ಹೇಳಿದರು.
ಕೇಕ್ ಕತ್ತರಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಆಚರಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ, ಮಾಜಿ ಸದಸ್ಯ ರಮೇಶ್, ಮಧುವನಹಳ್ಳಿ ಶಿವಕುಮಾರ್, ಎಲ್.ನಾಗರಾಜು, ಕಮಲ್, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜು, ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಬಸವನಪುರ ರಾಜಶೇಖರ, ಎಂ.ಶಿವಮೂರ್ತಿ, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಲಿಂಗರಾಜು, ಸಿದ್ದರಾಮಯ್ಯ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಬೆಳ್ಳೇಗೌಡ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎನ್. ನಂಜೇಗೌಡ, ಮುಖಂಡರಾದ ಮೂಳ್ಳೂರು ಶಿವಮಲ್ಲು, ಸುಭಾಷ್ ಮಾಡ್ರಹಳ್ಳಿ, ಸೋಮಣ್ಣೇಗೌಡ, ಜನ್ನೂರು ಮಹದೇವು, ಸಿ.ಎಂ.ಶಿವಣ್ಣ, ದೊಡ್ಡಿಂದುವಾಡಿ ಸಿದ್ದರಾಜು ಸೇರಿದಂತೆ ಹಲವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.