ಚಾಮರಾಜನಗರ: ಚಾತುರ್ವರ್ಣ ಹಾಗೂ ವರ್ಣ ವ್ಯವಸ್ಥೆಯಿಂದ ಹುಟ್ಟಿದ ಅಸ್ಪೃಶ್ಯತೆಯು ಇಂದಿಗೂ ದೇಶದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಪ್ರಾಧ್ಯಾಪಕ ಬಸವಣ್ಣ ಮೂಕಹಳ್ಳಿ ಅಭಿಪ್ರಾಯಪಟ್ಟರು.
ಬೇಡರಪುರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗುರವಾರ ‘ನಾವು ಮನುಜರು- ಗಾಂಧಿ ಭಾರತ’ ಪರಿಕಲ್ಪನೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಸಾಮಾಜಿಕ ಅನಿಷ್ಠ ಪದ್ಧತಿಯಾಗಿರುವ ಅಸ್ಪೃಶ್ಯತೆಯನ್ನು ಅಳಿಸಿ ಹಾಕಲು ಶತಮಾನಗಳ ಹಿಂದೆಯೇ ಪ್ರಯತ್ನಗಳು ನಡೆದಿವೆ. ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ನಿರಂತರವಾಗಿ ಹೋರಾಟ ಮಾಡಿದ್ದಾರೆ ಎಂದರು.
ಗಾಂಧೀಜಿ ಶೋಷಿತ ಸಮುದಾಯಗಳನ್ನು ಹರಿಜನ ಎಂದು ಸಂಬೋಧಿಸಿ ಸಮಾಜ ಇವರನ್ನು ದೇವರ ಮಕ್ಕಳು ಎಂದು ಭಾವಿಸುವಂತೆ ಅಧ್ಯಾತ್ಮದ ನೆಲೆಯಲ್ಲಿ ವಿಶ್ಲೇಷಣೆ ಮಾಡಿದರು. ಅಸ್ಪೃಶ್ಯತೆಯನ್ನು ಅಳಿಸಲು ಹರಿಜನ ಸೇವಾ ಸಂಘಗಳನ್ನು ಸ್ಥಾಪಿಸಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದರು. ಹರಿಜನ ಪತ್ರಿಕೆ ಆರಂಭಿಸಿ ಶೋಷಿತರ ಪರ ಹೋರಾಟ ಮಾಡಿದರು. ಅಸ್ಪೃಶ್ಯತೆ ಹಿಂದೂ ಧರ್ಮಕ್ಕೆ ಅಂಟಿದ ಕಳಂಕ ಎಂದು ಬಲವಾಗಿ ನಂಬಿದ್ದರು ಎಂದರು.
ಬಸವಾದಿ ಶರಣರಿಂದ ಹಿಡಿದು ಇಲ್ಲಿಯವರೆಗೂ ಹಲವು ಮಹನೀಯರು ಅಸ್ಪೃಶ್ಯತೆಯನ್ನು ಅಳಿಸಲು ಹೋರಾಟ ಮಾಡಿದ್ದರೂ ಸಾಮಾಜಿಕ ಪಿಡುಗು ನಿರ್ಮೂಲನೆಯಾಗದಿರುವುದು ವಿಪರ್ಯಾಸ. ಸ್ವತಃ ಅಸ್ಪೃಶ್ಯತೆಯ ನೋವುಂಡ ಅಂಬೇಡ್ಕರ್ ಜಾತೀಯತೆಯ ವಿನಾಶವಾಗದ ಹೊರತು ಅಸ್ಪೃಶ್ಯತೆ ನಿರ್ಮೂಲನೆ ಸಾಧ್ಯವಿಲ್ಲ ಎಂದು ಬಲವಾಗಿ ನಂಬಿದ್ದರು.
ಅಸ್ಪೃಶ್ಯತೆ ಹೋಗಲಾಡಿಸಲು ಸಂವಿಧಾನ ರಚನೆಯ ಸಂದರ್ಭ 17ನೇ ವಿಧಿಯನ್ನು ರೂಪಿಸಿದ ಅಂಬೇಡ್ಕರ್ ಶೋಷಿತರ ಪಾಲಿನ ಬೆಳಕಾಗಿದ್ದಾರೆ. ಅಸ್ಪೃಶ್ಯತೆ ವಿರೋಧಿ ಕಾನೂನು ಜಾರಿಯಲ್ಲಿದ್ದು, ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧ. ಕಾನೂನುಗಳ ಬಗ್ಗೆ ಜನರು ಜಾಗೃತವಾಗಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಮಧು, ಕುಲಸಚಿವ ಮಹದೇವ ಜೆ., ಪ್ರಾಧ್ಯಾಪಕ ಶ್ರೀನಿವಾಸ್, ರೇಖಾ ಹಾಗೂ ಆಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.