
ಚಾಮರಾಜನಗರ: ಹನೂರು ತಾಲ್ಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ 6 ದನಗಳು ಹಾಗೂ ಗುನ್ನೂರು ಬಯಲು ಪಳನಿಮೇಡು ಗ್ರಾಮದಲ್ಲಿ 5 ದನಗಳ ಸಾವಿಗೆ ಯೂರಿಯಾ ಮಿಶ್ರಿತ ವಿಷಕಾರಿ ನೀರು ಸೇವನೆ ಕಾರಣ ಎಂಬ ಅಂಶ ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ.
ಜಾನುವಾರುಗಳ ಸಾವಿಗೆ ಕಾರಣ ತಿಳಿಯಲು ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ (ಐಎಎಚ್ ಮತ್ತು ವಿಬಿ) ತಜ್ಞರ ತಂಡ ನಡೆಸಿದ ಪರೀಕ್ಷೆಯಲ್ಲಿ ವಿಷಯುಕ್ತ ನೀರು ನೀರು ಸೇವನೆ ಜಾನುವಾರು ಸಾವಿಗೆ ಕಾರನ ಎಂಬ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪಾ ಸ್ಪಷ್ಟಪಡಿಸಿದ್ದಾರೆ.
ಸಾಂಕ್ರಮಿಕ ರೋಗಗಳು ಜಾನುವಾರುಗಳ ಸಾವಿಗೆ ಕಾರಣವಲ್ಲ ಎಂಬುದು ಸ್ಪಷ್ಟವಾಗಿದ್ದು ರೈತರು ಹಾಗೂ ಜಾನುವಾರು ಸಾಕಣೆದಾರರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸರಣಿ ಸಾವು: ಫೆ.4 ರಂದು ಹನೂರು ತಾಲ್ಲೂಕಿನ ಶೆಟ್ಟಳ್ಳಿ ಗ್ರಾಮದ ಪರಶಿವಮೂರ್ತಿ ಅವರ 6 ಹಳ್ಳಿಕಾರ್ ದನಗಳು ಹಾಗೂ ಫೆ.5ರಂದು ಗುನ್ನೂರು ಬಯಲು ಪಳನಿಮೇಡು ಗ್ರಾಮದ ತಂಗರಾಜು ಅವರ 5 ದನಗಳು ಮೇಯಲು ಹೋಗಿದ್ದಾಗ ಹಠಾತ್ ಸಾವನ್ನಪ್ಪಿದ್ದವು. ಕೇವಲ ಎರಡು ದಿನಗಳ ಅವಧಿಯಲ್ಲಿ 11 ಜಾನುವಾರುಗಳು ಮೃತಪಟ್ಟಿದ್ದು ಹೈನುಗಾರರ ಆತಂಕಕ್ಕೆ ಕಾರಣವಾಗಿತ್ತು. ಸಾವಿಗೆ ಸಾಂಕ್ರಮಿಕ ರೋಗಗಳು ಕಾರಣವಾ ಅಥವಾ ವಿಷಾಹಾರ ಸೇವನೆ ಕಾರಣವಾ ಎಂಬ ಪ್ರಶ್ನೆಗಳು ಎದ್ದಿದ್ದವು. ಈಗ ಪ್ರಯೋಗಾಲದಯ ವರದಿಯಿಂದ ಸಾವಿಗೆ ಕಾರಣ ಬಹಿರಂಗವಾಗಿದೆ.
ಯೂರಿಯಾದಿಂದ ಸಾವು: ಜಾನುವಾರು ಕುಡಿದಿದ್ದ ನೀರಿನಲ್ಲಿ ಕೃಷಿಗೆ ಬಳಸುವ ‘ಯೂರಿಯಾ’ ಅಂಶ ಇರುವುದು ವರದಿಯಲ್ಲಿ ಬಹಿರಂಗವಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜಾನುವಾರು ಕುಡಿಯುವ ನೀರಿಗೆ ಯೂರಿಯಾ ಬೆರೆತಿದ್ದು ಹೇಗೆ ? ಇದು ದುರುದ್ದೇಶಪೂರಿತ ದುಷ್ಕೃತ್ಯವೇ, ಅಥವಾ ಬೆಳೆಗಳಿಗೆ ಸಿಂಪಡಿಸಲು ತಂದಿದ್ದ ಯೂರಿಯಾ ಆಕಸ್ಮಿಕವಾಗಿ ನೀರಿನ ಮೂಲಗಳಿಗೆ ಸೇರಿ ಅವಘಡ ಸಂಭವಿಸಿತೇ ಎಂಬ ಅನುಮಾನಗಳು ಎದ್ದಿವೆ.
ಜಾನುವಾರು ಕೊಲ್ಲಲ್ಲು ಉದ್ದೇಶಪೂರ್ವಕವಾಗಿ ನೀರಿನ ಮೂಲಗಳಿಗೆ ವಿಷ ಬೆರೆಸಲಾಗಿತ್ತೇ ಎಂಬ ನಿಟ್ಟಿನಲ್ಲಿ ಪೊಲೀಸ್ ಹಾಗೂ ಅರಣ್ಯ ಇಲಾಖೆ ತನಿಖೆ ನಡೆಸಬೇಕು. ತಪ್ಪೆಸಗಿರುವುದು ಕಂಡುಬಂದರೆ ಕಾನೂನು ಕ್ರಮ ಜರುಗಿಸಬೇಕು, ಜಾನುವಾರು ಕಳೆದುಕೊಂಡಿರುವವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಜಲಮೂಲ ಪರೀಕ್ಷೆಗೊಳಪಡಿಸಿ: ಕಾಡಂಚಿನ ಸಮೀಪದಲ್ಲೇ ಜಾನುವಾರುಗಳು ವಿಷಯುಕ್ತ ನೀರು ಸೇವಿಸಿ ಸಾವನ್ನಪ್ಪಿವೆ. ದುರದೃಷ್ಟವಶಾತ್ ಕಾಡು ಪ್ರಾಣಿಗಳು ವಿಷಪೂರಿತ ನೀರು ಸೇವಿಸಿದ್ದರೆ ವನ್ಯಜೀವಿಗಳ ಮಾರಣ ಹೋಮವೇ ನಡೆಯುತ್ತಿತ್ತು. ಈ ಸಂಬಂಧ ಅರಣ್ಯ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ಜಲಮೂಲಗಳಲ್ಲಿ ಸಂಗ್ರಹವಾಗಿರುವ ನೀರು ಕುಡಿಯುಲು ಯೋಗ್ಯವಾಗಿದೆಯೇ ಎಂಬ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಎರಡು ದಿನಗಳಲ್ಲಿ 11 ಜಾನುವಾರುಗಳ ಸಾವು ರೈತರ ಎದುರೇ ವಿಲವಿಲ ಒದ್ದಾಡಿ ಜೀವಬಿಟ್ಟಿದ್ದ ದನಗಳು ಆತಂಕದಲ್ಲಿ ಹೈನುಗಾರರು; ತನಿಖೆಗೆ ಒತ್ತಾಯ
ಪ್ರಯೋಗಾಲಯದ ವರದಿಯಲ್ಲಿ ಏನಿದೆ ?
ಜಾನುವಾರುಗಳ ಸರಣಿ ಸಾವು ಸಂಭವಿಸುತ್ತಿದ್ದಂತೆ ಎಚ್ಚೆತ್ತುಕೊಂಡು ಜಿಲ್ಲೆಯ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಎರಡೂ ಪ್ರಕರಣಗಳಲ್ಲಿ ಮೃತಪಟ್ಟ ಜಾನುವಾರುಗಳ ಅಂಗಾಂಗಗಳನ್ನು ದಕ್ಷಿಣ ವಲಯ ರೋಗಪತ್ತೆ ಪ್ರಯೋಗಾಲಯ ಸಂಸ್ಥೆಯಾದ ಅನಿಮಲ್ ಹೆಲ್ತ್ ಅಂಡ್ ವೆಟರ್ನರಿ ಬಯಾಲಜಿಕಲ್ಸ್ ಡಯಾಗ್ನಸ್ಟಿಕ್ ಬಯೋಕೆಮಿಸ್ಟ್ರಿ ಟಾಕ್ಸಿಕಾಲಜಿಗೆ ರವಾನಿಸಿದ್ದರು. ಅಂಗಾಂಗಗಳಲ್ಲಿ ಹೈಡ್ರೋಸೈನಿಕ್ ಆ್ಯಸಿಡ್ ನೈಟ್ರೇಟ್ ಜಿಂಕ್ ಫಾಸ್ಫೇಟ್ ಆರ್ಗಾನೊ ಫಾಸ್ಫರಸ್ ಹಾಗೂ ಕ್ಲೋರಿನ್ ಕಂಪೌಂಡ್ ಹಾಗೂ ಯೂರಿಯಾ ಅಂಶಗಳ ಇರುವಿಕೆ ಬಗ್ಗೆ ಪರೀಕ್ಷೆ ನಡೆಸಿದಾಗ ವಿಷಕಾರಿ ಯೂರಿಯಾ ಅಂಶ ಪತ್ತೆಯಾಗಿದ್ದು ಸಾವಿಗೆ ಕಾರಣ ಬಹಿರಂಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.