ADVERTISEMENT

ಶ್ರದ್ಧಾ ಭಕ್ತಿಯ ವೈಕುಂಠ ಏಕಾದಶಿ

ನಾರಾಯಣ ದೇವಾಲಯಗಳಲ್ಲಿ ಭಕ್ತರ ದಂಡು, ವಿಶೇಷ ಪೂಜೆ, ಅಲಂಕಾರ

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 16:04 IST
Last Updated 2 ಜನವರಿ 2023, 16:04 IST
ವೈಕುಂಠ ಏಕಾದಶಿ ಪ್ರಯುಕ್ತ ಚಾಮರಾಜನಗರದ ಕೊಳದ ಬೀದಿಯಲ್ಲಿರುವ ಕಾಡು ನಾರಾಯಣ ಸ್ವಾಮಿ ದೇವಾಲಯದಲ್ಲಿ ಭಕ್ತರು ನಾರಾಯಣಸ್ವಾಮಿ ದರ್ಶನ ಪಡೆದರು
ವೈಕುಂಠ ಏಕಾದಶಿ ಪ್ರಯುಕ್ತ ಚಾಮರಾಜನಗರದ ಕೊಳದ ಬೀದಿಯಲ್ಲಿರುವ ಕಾಡು ನಾರಾಯಣ ಸ್ವಾಮಿ ದೇವಾಲಯದಲ್ಲಿ ಭಕ್ತರು ನಾರಾಯಣಸ್ವಾಮಿ ದರ್ಶನ ಪಡೆದರು   

ಚಾಮರಾಜನಗರ: ಜಿಲ್ಲೆಯಾದ್ಯಂತ ಸೋಮವಾರ ವೈಕುಂಠ ಏಕಾದಶಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಕೋವಿಡ್‌ ಕಾರಣದಿಂದ ಕಳೆದ ವರ್ಷ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಆಚರಣೆ ಪೂಜಾ ವಿಧಿ ವಿಧಾನಗಳಿಗಷ್ಟೇ ಸೀಮಿತವಾಗಿತ್ತು. ಭಕ್ತರ ಭೇಟಿಗೆ ಅವಕಾಶ ಇರಲಿಲ್ಲ. ‌ಈ ಬಾರಿ ಯಾವುದೇ ನಿರ್ಬಂಧ ಇಲ್ಲದೇ ಇದ್ದುದರಿಂದ ಎಲ್ಲ ದೇವಾಲಯಗಳಲ್ಲಿ ಅದರಲ್ಲಿ ವಿಶೇಷವಾಗಿ ವೆಂಕಟರಮಣಸ್ವಾಮಿ, ರಂಗನಾಥ, ಶ್ರೀನಿವಾಸ, ನಾರಾಯಣ ದೇಗುಲಗಳಲ್ಲಿ ಭಕ್ತರ ಸಂದಣಿ ಹೆಚ್ಚಿತ್ತು.

ಮನೆಗಳಲ್ಲೂ ಭಕ್ತರು ಉಪವಾಸವಿದ್ದು, ವೈಕುಂಠ ಏಕಾದಶಿ ಆಚರಿಸಿದರು. ಕುಟುಂಬ ಸಮೇತರಾಗಿ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ADVERTISEMENT

ವೈಕುಂಠ ಏಕಾದಶಿ ಅಂಗವಾಗಿ ವೆಂಕಟೇಶ್ವರ, ನಾರಾಯಣಸ್ವಾಮಿ, ರಂಗನಾಥಸ್ವಾಮಿ ದೇವಾಲಯಗಳನ್ನು ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.

ಬೆಳಿಗ್ಗೆಯಿಂದಲೇ ವಿವಿಧ ಪೂಜಾ ವಿಧಿ ವಿಧಾನಗಳು ನಡೆದವು. ದೇವರ ವಿಗ್ರಹಗಳಿಗೂ ವಿಶೇಷ ಅರ್ಚನೆ, ಅಭಿಷೇಕ ಮಾಡಲಾಯಿತು. ಹೂವು, ಆಭರಣಗಳಿಂದ ವಿಶೇಷ ಅಲಂಕಾರ ಮಾಡಿ ಮಂಗಳಾರತಿ ನೆರವೇರಿಸಲಾಯಿತು.

ಚಾಮರಾಜನಗರದ ಕೊಳದ ಬೀದಿಯಲ್ಲಿರುವ ಕಾಡುನಾರಾಯಣಸ್ವಾಮಿ ದೇವಾಲಯ, ಉಮ್ಮತ್ತೂರಿನ ರಂಗನಾಥಸ್ವಾಮಿ ದೇವಾಲಯ, ವೆಂಕಟಯ್ಯನ ಛತ್ರದ ವೆಂಕಟೇಶ್ವರ ದೇಗುಲ, ಹರದನಗಳ್ಳಿಯ ವೇಣುಗೋಪಾಲಸ್ವಾಮಿ ದೇವಾಲಯಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ, ಉತ್ಸವಗಳು ನೆರವೇರಿದವು.

ಭಕ್ತರಿಂದ ದರ್ಶನ: ನಗರದ ಕೊಳದ ಬೀದಿ ಸಮೀಪದಲ್ಲಿರುವ ಕಾಡು ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಬೆಳಗಿನ ಜಾವದಿಂದಲೇ ಹೋಮ ಹವನ, ವಿಶೇಷ ಪೂಜೆ ನಡೆಯಿತು. ನೂರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಊರಿನ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನಡೆಯಿತು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.