ADVERTISEMENT

ಅಳಿವಿನಂಚಿನ ಸಸ್ಯಗಳ ಉಳಿವಿಗೆ ವನ ಸಂವರ್ಧನ ಯೋಜನೆ: ಅನಂತ ಹೆಗಡೆ ಅಶೀಸರ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 11:13 IST
Last Updated 22 ಜುಲೈ 2021, 11:13 IST
ಅನಂತ ಹೆಗಡೆ ಅಶೀಸರ
ಅನಂತ ಹೆಗಡೆ ಅಶೀಸರ   

ಚಾಮರಾಜನಗರ: ಅಳಿವಿನ ಅಂಚಿನಲ್ಲಿರುವ ಸಸ್ಯಗಳ ಸಂರಕ್ಷಣೆಗಾಗಿ, ಚಾಮರಾಜನಗರ ಸೇರಿದಂತೆ ರಾಜ್ಯದ ಐದು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ‘ವನ ಸಂವರ್ಧನ’ ಯೋಜನೆ ಜಾರಿಗೊಳಿಸಲಾಗುವುದು ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಗುರುವಾರ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ‘ಚಾಮರಾಜನಗರ, ಬೀದರ್‌, ಮಂಡ್ಯ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಆಯಾ ಭಾಗದಲ್ಲಿ ವಿನಾಶದ ಅಂಚಿನಲ್ಲಿರುವ ಸಸ್ಯಗಳನ್ನು ಪೋಷಿಸಲು ಆದ್ಯತೆ ನೀಡಲಾಗುವುದು. ಚಾಮರಾಜನಗರದಲ್ಲಿ ರಕ್ತ ಚಂದನ ಸಂರಕ್ಷಣೆಗೆ ಒತ್ತು ನೀಡಲಾಗುವುದು’ ಎಂದರು.

‘ಮಂಡಳಿಯ ವತಿಯಿಂದ ಪ್ರತಿ ಜಿಲ್ಲೆಗೂ ₹10 ಲಕ್ಷ ನೀಡಲಾಗುವುದು. ಅರಣ್ಯ ಇಲಾಖೆಯು 50ರಿಂದ 100 ಎಕರೆಗಷ್ಟು ಜಾಗ ಗುರುತಿಸಿ, ಅಲ್ಲಿ ಸಸಿಗಳನ್ನು ನೆಟ್ಟು ಪೋಷಿಸಬೇಕು. ಜಾಗವನ್ನು ಗುರುತಿಸಲು ಆಯಾ ಜಿಲ್ಲೆಯ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶೀಘ್ರದಲ್ಲಿ ಯೋಜನೆ ಅನುಷ್ಠಾನಕ್ಕೆ ಬರಲಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘ರಾಜ್ಯದ ಎಲ್ಲ ಕಡೆಗಳಲ್ಲೂ ಜೀವ ವೈವಿಧ್ಯ ದಾಖಲಾತಿ ನಡೆಸಿದ್ದೇವೆ. ತಳಮಟ್ಟದಿಂದ ಹಿಡಿದು ಜಿಲ್ಲಾ ಪಂಚಾಯಿತಿವರೆಗೂ ಜೀವ ವೈವಿಧ್ಯ ಸಮಿತಿಗಳನ್ನು ಬಲಪಡಿಸುವ ಪ್ರಯತ್ನವೂ ನಡೆಯುತ್ತಿದೆ’ ಎಂದು ಅನಂತ ಹೆಗಡೆ ಅಶೀಸರ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.