ADVERTISEMENT

ಓಮೈಕ್ರಾನ್‌: ಶಾಲಾ ಕಾಲೇಜು ಬಂದ್‌ಗೆ ಆಗ್ರಹ

ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ– ವಾಟಾಳ್‌ ನಾಗರಾಜ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 16:10 IST
Last Updated 7 ಡಿಸೆಂಬರ್ 2021, 16:10 IST
ಶಾಲಾ ಕಾಲೇಜುಗಳನ್ನು ಬಂದ್‌ ಮಾಡುವಂತೆ ಆಗ್ರಹಿಸಿ ವಾಟಾಳ್‌ ನಾಗರಾಜ್‌ ಅವರು ಬೆಂಬಲಿಗರೊಂದಿಗೆ ಮಂಗಳವಾರ ಜಿಲ್ಲಾಡಳಿತ ಭವನದ ಎದುರು ಘೋಷಣೆ ಕೂಗಿದರು
ಶಾಲಾ ಕಾಲೇಜುಗಳನ್ನು ಬಂದ್‌ ಮಾಡುವಂತೆ ಆಗ್ರಹಿಸಿ ವಾಟಾಳ್‌ ನಾಗರಾಜ್‌ ಅವರು ಬೆಂಬಲಿಗರೊಂದಿಗೆ ಮಂಗಳವಾರ ಜಿಲ್ಲಾಡಳಿತ ಭವನದ ಎದುರು ಘೋಷಣೆ ಕೂಗಿದರು   

ಚಾಮರಾಜನಗರ: ‘ರಾಜ್ಯದಲ್ಲಿ ಓಮೈಕ್ರಾನ್‌ ವೈರಸ್ ಹರಡುತ್ತಿದ್ದು, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ ಕಾಲೇಜುಗಳನ್ನು ಬಂದ್‌ ಮಾಡಬೇಕು’ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಆಗ್ರಹಿಸಿದರು.

ಜಿಲ್ಲಾಡಳಿತ ಭವನದ ಎದುರು ಮಂಗಳವಾರ ಬೆಂಬಲಿಗರೊಂದಿಗೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್‌ ಹರಡುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತೀರ್ಮಾನ ಕೈಗೊಳ್ಳಬೇಕು. ಹೊಸ ವೈರಸ್‌ ಹೆಚ್ಚು ತೀವ್ರತೆ ಇಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಎಚ್ಚರ ವಹಿಸಬೇಕಾಗಿದ್ದು ಆದ್ಯ ಕರ್ತವ್ಯ’ ಎಂದರು.

‘18 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಲಸಿಕೆ ಹಾಕಿಸಿಕೊಂಡಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಇನ್ನೂ ಹಾಕಿಸಿಕೊಂಡಿಲ್ಲ. ಅವರಿಗೂ ಲಸಿಕೆ ಕೊಡಲು ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು.ಲಸಿಕೆ ಹಾಕದೇ ಶಾಲೆ ಆರಂಭಿಸಿದ್ದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಲಾಕ್‌ಡೌನ್‌ ಬೇಡ: ‘ಲಾಕ್‌ಡೌನ್‌ ಬಡವರ ವಿರೋಧಿ. ಮತ್ತೊಮ್ಮೆ ಜಾರಿ ಮಾಡಿದರೆ ಜನರು ತೊಂದರೆಗೆ ಸಿಲುಕುತ್ತಾರೆ. ಹಾಗಾಗಿ, ಯಾವುದೇ ಕಾರಣಕ್ಕೂ ಹೇರಬಾರದು’ ಎಂದು ವಾಟಾಳ್‌ ನಾಗರಾಜ್‌ ಅವರು ಆಗ್ರಹಿಸಿದರು.

ಚಾ.ರಂ.ಶ್ರೀನಿವಾಸಗೌಡ, ಶಿವಲಿಂಗಮೂರ್ತಿ, ಹರೀಶ್, ಪಾರ್ಥಸಾರಥಿ, ರಾಮ್, ವರದನಾಯಕ, ಶಿವಶಂಕರ್ ನಾಯಕ, ಸಾಗರ್ ಸಾವತ್ ಇತರರು ಇದ್ದರು.

‘ಹಣದ ದಂಧೆ ತಡೆಗೆ ಆಯೋಗ ವಿಫಲ’

‘ವಿಧಾನ ಪರಿಷತ್ ಚುನಾವಣೆಯಲ್ಲಿ ಎಲ್ಲ ಪಕ್ಷಗಳೂ ಶ್ರೀಮಂತರನ್ನು ಅಭ್ಯರ್ಥಿಗಳಾಗಿ ಕಣಕ್ಕಿಳಿಸಿದ್ದಾರೆ. ಇತಿಹಾಸ ಇಲ್ಲದವರನ್ನು ಮೇಲ್ಮನೆಗೆ ಆಯ್ಕೆ ಮಾಡಲು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಹೊರಟಿದೆ. ಒಂದು ಮತಕ್ಕೆ ಲಕ್ಷ ರೂಪಾಯಿವರೆಗೆ ನಡೆಯುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ’ ಎಂದು ವಾಟಾಳ್‌ ನಾಗರಾಜ್‌ ಹೇಳಿದರು.

‘ರಾಜ್ಯದ 25 ಕ್ಷೇತ್ರಗಳಲ್ಲೂ ₹ 3 ಕೋಟಿಗೂ ಹೆಚ್ಚಿನ ಅಕ್ರಮ ನಡೆಯುತ್ತಿದೆ. ಇದನ್ನು ತಡೆಯುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ. ವಿಧಾನ ಪರಿಷತ್ ಕಲುಷಿತವಾಗಬಾರದು ಎಂದಿದ್ದರೆ ಹಣದ ಹೆಸರಿನಲ್ಲಿ ನಡೆಯುತ್ತಿರುವ ದಂಧೆಯನ್ನು ತಡೆಯಲು ಆಯೋಗ ಸಜ್ಜಾಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.