ADVERTISEMENT

ತಾಳವಾಡಿಯನ್ನು ಕರ್ನಾಟಕಕ್ಕೆ ಸೇರಿಸಲು ಆಗ್ರಹಿಸಿ ಚಾಮರಾಜನಗರದಲ್ಲಿ ವಾಟಾಳ್‌ ಹೋರಾಟ

ಜಿಲ್ಲಾ ಕೇಂದ್ರಕ್ಕೆ ಮುಖ್ಯಮಂತ್ರಿ ಭೇಟಿ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 11:47 IST
Last Updated 17 ಜನವರಿ 2021, 11:47 IST
ತಾಳವಾಡಿಯನ್ನು ಕರ್ನಾಟಕಕ್ಕೆ ಸೇರಿಸಬೇಕು, ಯಡಿಯೂರಪ್ಪ ಅವರು ಚಾಮರಾಜನಗರಕ್ಕೆ ಬರಬೇಕು ಎಂದು ಆಗ್ರಹಿಸಿ ವಾಟಾಳ್‌ ನಾಗರಾಜ್‌ ಹಾಗೂ ಬೆಂಬಲಿಗರು ಭಾನುವಾರ ಪ್ರತಿಭಟನೆ ನಡೆಸಿದರು
ತಾಳವಾಡಿಯನ್ನು ಕರ್ನಾಟಕಕ್ಕೆ ಸೇರಿಸಬೇಕು, ಯಡಿಯೂರಪ್ಪ ಅವರು ಚಾಮರಾಜನಗರಕ್ಕೆ ಬರಬೇಕು ಎಂದು ಆಗ್ರಹಿಸಿ ವಾಟಾಳ್‌ ನಾಗರಾಜ್‌ ಹಾಗೂ ಬೆಂಬಲಿಗರು ಭಾನುವಾರ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ತಮಿಳುನಾಡಿನ ವ್ಯಾಪ್ತಿಗೆ ಬರುವ ತಾಳವಾಡಿಯನ್ನು ಕರ್ನಾಟಕಕ್ಕೆಸೇರಿಸಬೇಕು. ಚಾಮರಾಜನಗರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಬೇಕು ಎಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಮುಖಂಡ ವಾಟಾಳ್‌ ನಾಗರಾಜ್‌ ಅವರು ಭಾನುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬೆಂಗಲಿಗರೊಂದಿಗೆ ಭುವನೇಶ್ವರಿ ವೃತ್ತದಲ್ಲಿ ಸೇರಿದ ವಾಟಾಳ್‌ ನಾಗರಾಜ್‌ ಅವರು ವೃತ್ತದ ಮಧ್ಯೆ ಮಲಗಿ ಪ್ರತಿಭಟನೆ ನಡೆಸಿದರು. ‘ತಾಳವಾಡಿ ಕರ್ನಾಟಕಕ್ಕೆ ಸೇರಲಿ’, ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಾಮರಾಜನಗರಕ್ಕೆ ಬರಲಿ’ ಎಂದು ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್‌ ನಾಗರಾಜ್‌ ಅವರು, ‘ತಾಳವಾಡಿ ಕರ್ನಾಟಕಕ್ಕೆ ಸೇರಿದ್ದು. ಅಲ್ಲಿರುವವರೆಲ್ಲರೂ ಕನ್ನಡಿಗರು. ಆ ಪ್ರದೇಶವನ್ನು ರಾಜ್ಯಕ್ಕೆ ಸೇರಿಸಬೇಕು ಎಂಬ ಚಳವಳಿಯನ್ನು 1969ರಲ್ಲಿ ಚಾಮರಾಜನಗರದಲ್ಲಿ ಮಾಡಲಾಗಿತ್ತು. ಆ ಸಮಯದಲ್ಲಿ ನನ್ನನ್ನು ಬಂಧಿಸಲಾಗಿತ್ತು. ಆ ಮೇಲೆ ಆಯ್ಕೆಯಾದ ಶಾಸಕರು, ಸಂಸದರು, ಸರ್ಕಾರ ಈ ಬಗ್ಗೆ ಗಮನ ಹರಿಸಿಲ್ಲ. ತಾಳವಾಡಿಯನ್ನು ರಾಜ್ಯಕ್ಕೆ ಸೇರಿಸಲೇಬೇಕು. ಅದಕ್ಕಾಗಿ ನಿರಂತರ ಹೋರಾಟ ಮಾಡಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರ ತಕ್ಷಣ ಆ ಪ್ರದೇಶವನ್ನು ಸರ್ವೆ ನಡೆಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಕೆಲವು ದಿನಗಳ ಹಿಂದೆ ಸತ್ಯಮಂಗಲ ರಸ್ತೆಯ ಕೋಳಿ ಪಾಳ್ಯದ ಬಳಿ ತಾಳವಾಡಿ ತಿರುವಿನಲ್ಲಿ ತಮಿಳು ಫಲಕ ತೆರವುಗೊಳಿಸಿದ್ದನ್ನು ಸಮರ್ಥಿಸಿಕೊಂಡ ಅವರು, ‘ಆ ಪ್ರದೇಶ ನಮ್ಮ ರಾಜ್ಯದ್ದು. ಫಲಕ ತೆರವು ಗೊಳಿಸಿದ ನಂತರ ಮುಂಬೈ, ಮಲೇಷ್ಯಾ, ತಮಿಳುನಾಡುಗಳಿಂದ ಬೆದರಿಕೆ ಕರೆಗಳು ಬರುತ್ತಿವೆ. ತಾಳವಾಡಿಯಲ್ಲಿ ನನ್ನ ವಿರುದ್ಧ ಎಫ್‌ಐಆರ್‌ ಕೂಡ ದಾಖಲಾಗಿದೆ. ಇದಕ್ಕೆಲ್ಲ ನಾನು ಹೆದರುವುದಿಲ್ಲ. ನಮ್ಮನ್ನು ಕೆಣಕುವುದಕ್ಕೆ ಬಂದರೆ ಸುಮ್ಮನಿರುವುದಿಲ್ಲ. ಉಗ್ರ ಹೋರಾಟ ನಡೆಸುತ್ತೇವೆ. ತಮಿಳುನಾಡಿನ ಕ್ರಮವನ್ನು ಖಂಡಿಸಿ ಫೆ.13ರಂದು ಪುಣಜನೂರು ರಸ್ತೆ ಬಂದ್‌ ಮಾಡಲಾಗುವುದು’ ಎಂದು ಘೋಷಿಸಿದರು.

‘ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವುದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಹರಿಹಾಯ್ದ ನಾಗರಾಜ್‌ ಅವರು, ‘ಪ್ರಾಧಿಕಾರ ರಚನೆಚುನಾವಣೆ ಗಿಮಿಕ್ ಅಗಿದೆ. ಅನುಭವ ಮಂಟಪ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡುವ ಅರ್ಹತೆ ಅವರಿಗಿಲ್ಲ. ಇಡೀ ಬಸವ ಕಲ್ಯಾಣ ಬೆಳವಣಿಗೆಗಾಗಿ ಸರ್ಕಾರ 10 ಸಾವಿರ ಕೋಟಿ ಮೀಸಲಿಡಬೇಕು. ಅನುಭವ ಮಂಟಪ ಸೇರಿದಂತೆ ಬಸವಣ್ಣ ಅವರ ನೆಲೆಸಿದ ಎಲ್ಲ ಸ್ಥಳವನ್ನು ಅಭಿವೃದ್ಧಿ ಪಡಿಸಬೇಕು’ ಎಂದು ಆಗ್ರಹಿಸಿದರು.

ಜ.30 ರಂದು ರೈಲ್ವೆ ಸತ್ಯಾಗ್ರಹ: ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದುಪಡಿಸುವಂತೆ ಆಗ್ರಹಿಸಿ ಇದೇ 30 ರಂದು ರೈಲ್ವೆ ಸತ್ಯಾಗ್ರಹ ನಡೆಸಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಕಾರ್ ನಾಗೇಶ್, ಗು.ಪುರುಷೋತ್ತಮ, ಶಿವಲಿಂಗಮೂರ್ತಿ, ಲೋಕೇಶ್, ವರದನಾಯಕ, ಮಲ್ಲಣ್ಣ, ಹುಂಡಿ ಬಸವಣ್ಣ, ಬೆಳ್ಳನಾಯಕ, ಅಜಯ್, ಪಾರ್ಥಸಾರಥಿ, ಚಾ.ರಾ.ಕುಮಾರ್‌, ರಾಮು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.