ADVERTISEMENT

ರಾಜ್ಯದಲ್ಲಿ ಹಿಂದಿ ಹೇರಿಕೆ ಬೇಡ: ವಾಟಾಳ್ ನಾಗರಾಜ್

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 2:37 IST
Last Updated 27 ಸೆಪ್ಟೆಂಬರ್ 2021, 2:37 IST
ರಾಜ್ಯದ ಮೇಲೆ ಹಿಂದಿ ಹೇರಿಕೆಯ ವಿರುದ್ಧ ವಾಟಾಳ್‌ ನಾಗರಾಜ್‌ ಅವರು ಬೆಂಬಲಿಗರೊಂದಿಗೆ ಭಾನುವಾರ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು
ರಾಜ್ಯದ ಮೇಲೆ ಹಿಂದಿ ಹೇರಿಕೆಯ ವಿರುದ್ಧ ವಾಟಾಳ್‌ ನಾಗರಾಜ್‌ ಅವರು ಬೆಂಬಲಿಗರೊಂದಿಗೆ ಭಾನುವಾರ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಕೇಂದ್ರ ಸರ್ಕಾರವು ರಾಜ್ಯದ ಮೇಲೆ ನಿರಂತರವಾಗಿ ಹಿಂದಿ ಹೇರಿಕೆ ಮಾಡುತ್ತಿದ್ದು, ಇದೇ ರೀತಿ ಮುಂದುವರೆದರೆ ರಾಜ್ಯದಾದ್ಯಂತ ಪಕ್ಷದ ವತಿಯಿಂದ ಹೋರಾಟ ಮಾಡಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌ ಅವರು ಭಾನುವಾರ ಹೇಳಿದರು.

ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗ ಹಿಂದಿ ಹೇರಿಕೆ ವಿರುದ್ಧ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ ಅವರು, ‘ಬ್ಯಾಂಕುಗಳಲ್ಲಿ ಚೆಕ್‌ಗಳು ಹಿಂದಿ ಭಾಷೆಯಲ್ಲಿದೆ.ಕನ್ನಡವೂ ರಾಷ್ಟ್ರೀಯ ಭಾಷೆಯೇ. ಅದನ್ನು ಬೆಳೆಸಬೇಕಾದ ಅವಶ್ಯಕತೆ ಇದೆ. ಗುಜರಾತ್‌ ಸೇರಿದಂತೆ ಬೇರೆ ರಾಜ್ಯಗಳಿಂದ ಬರುವವರು ಕನ್ನಡವನ್ನು ಕಲಿಯಬೇಕೇ ವಿನಾ, ಹಿಂದಿ ಒಲವು ಬಿಡಬೇಕು. ಕನ್ನಡ ಕಲಿತರೆ ಇಲ್ಲಿ ಇರಬಹುದು ಇಲ್ಲದಿದ್ದರೆ, ರಾಜ್ಯ ಬಿಟ್ಟು ಹೋಗಬಹುದು’ ಎಂದರು.

ಬೆಲೆ ಏರಿಕೆಗೆ ಖಂಡನೆ: ‘ದೇಶದ ಉದ್ದಗಲಕ್ಕೂ ಕೋವಿಡ್‌ ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ಇದೇ ಸಮಯದಲ್ಲಿ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸದನದಲ್ಲಿ ವಿರೋಧ ಪಕ್ಷ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ’ ಎಂದು ಅವರು ಆರೋಪಿಸಿದರು.

ADVERTISEMENT

ಅದ್ಧೂರಿ ದಸರಾ ಆಗಬೇಕು: ‘ಮೈಸೂರು ದಸರಾ ಯಾವುದೇ ಕಾರಣಕ್ಕೂ ನಾಮ್‌ಕಾವಸ್ಥೆಯಾಗಬಾರದು. ಅರಮನೆ ಪ್ರವೇಶ ಟಿಕೆಟ್‌ ದರ ಕಡಿಮೆಯಾಗಬೇಕು. ಚಿತ್ರಮಂದಿರ, ಬಾರ್‌ಗಳು ತೆರೆದಿದ್ದು, ಎಲ್ಲ ನಿಬಂದನೆಗಳನ್ನು ಸರ್ಕಾರ ತೆರವುಗೊಳಿಸಿದೆ. ದಸರಾ ನಿಂತು ಎರಡು ವರ್ಷಗಳಾಗಿವೆ. ಆದ್ದರಿಂದ ಅರಮನೆಯಿಂದ ಬನ್ನಿಮಂಟಪದವರೆ ಸಂಪೂರ್ಣ ಮೆರವಣಿಗೆಯಾಗಿ ಅದ್ಧೂರಿ ದಸರಾ ಆಯೋಜಿಸಬೇಕು. ಆಗುವುದಿಲ್ಲ ಎಂದರೆ ಸರ್ಕಾರ ರಾಜೀನಾಮೆ ನೀಡಲಿ’ ಎಂದರು.

ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಗಡಿನಾಡು ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ರಾ.ಕುಮಾರ್, ಶಿವಲಿಂಗಮೂರ್ತಿ, ಹುಂಡಿ ಬಸವಣ್ಣ, ಗು.ಪುರುಷೋತ್ತಮ್, ಮಹೇಶ್, ಲೋಕೇಶ್, ಅಜಯ್, ನಿಂಗಶೆಟ್ಟಿ, ಲಿಂಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.