ADVERTISEMENT

21ರಂದು ಹಿಂದಿ ವಿರೋಧಿ ಚಳವಳಿ: ವಾಟಾಳ್‌

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 16:58 IST
Last Updated 15 ನವೆಂಬರ್ 2021, 16:58 IST
ರಾಜ್ಯದಲ್ಲಿ ಹಿಂದಿ ಹೇರಿಕೆ ವಿರುದ್ಧ ವಾಟಾಳ್‌ ನಾಗರಾಜ್‌ ಅವರು ಸೋಮವಾರ ತಮ್ಮ ಬೆಂಬಲಿಗರೊಂದಿಗೆ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು
ರಾಜ್ಯದಲ್ಲಿ ಹಿಂದಿ ಹೇರಿಕೆ ವಿರುದ್ಧ ವಾಟಾಳ್‌ ನಾಗರಾಜ್‌ ಅವರು ಸೋಮವಾರ ತಮ್ಮ ಬೆಂಬಲಿಗರೊಂದಿಗೆ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು   

ಚಾಮರಾಜನಗರ:‘ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಹಿಂದಿಭಾಷೆಗೆ ಅವಕಾಶ ಕೊಡಬಾರದೆಂದು ಒತ್ತಾಯಿಸಿ ಪಕ್ಷದ ವತಿಯಿಂದ ಇದೇ 21ರಂದು ರಾಜ್ಯದಾದ್ಯಂತ ಹಿಂದಿ ವಿರೋಧಿ ಚಳುವಳಿ ನಡೆಸಲಾಗುವುದು‌’ ಎಂದುಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಸೋಮವಾರ ಹೇಳಿದರು.

ಕರ್ನಾಟಕದಲ್ಲಿ ಹಿಂದಿ ಹೇರಿಕೆ ಮಾಡುವ ಯತ್ನವನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ ನಂತರ ಮಾತನಾಡಿದ ಅವರು, ‘ಅಂದು ಬೆಂಗಳೂರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಕೃತಿ ದಹನ ಮತ್ತು ಬ್ಯಾಂಕ್‌ಗಳು, ರೈಲ್ವೆ, ಅಂಚೆ ಕಚೇರಿಗಳ ಹಿಂದಿ ನಾಮಫಲಕಕ್ಕೆ ಮಸಿ ಬಳಿಯಲಾಗುವುದು’ ಎಂದರು.

‘ಹಿಂದಿ ವಿರುದ್ಧ ನಮ್ಮ ಪಕ್ಷ ನಿರಂತರವಾಗಿ ಚಳವಳಿಯನ್ನು ಆರಂಭ ಮಾಡಿದೆ. ಬ್ಯಾಂಕ್‌ಗಳಲ್ಲಿ ಇಂದು ಚೆಕ್‌ಗಳು ಹಿಂದಿಯಲ್ಲಿ ಇದೆಯೇ ವಿನಾ, ಕನ್ನಡದಲ್ಲಿ ಇಲ್ಲ. ಬ್ಯಾಂಕ್‌ಗಳಲ್ಲಿ ಇಟ್ಟಿರುವ ಠೇವಣಿ, ಬಡ್ಡಿ ಕನ್ನಡಿಗರದ್ದು. ಸಂಸ್ಥೆ ನಡೆಯುತ್ತಿರುವುದು ಕನ್ನಡಿಗರಿಂದ’ ಎಂದರು.

ADVERTISEMENT

‘ಹಿಂದಿ ನಾಮಫಲಕಗಳನ್ನು ತೆಗೆಯಲೇಬೇಕು. ರೈಲ್ವೆ ಹಿಂದಿ ಬಳಕೆ ನಿಲ್ಲಿಸಬೇಕು. ಅಂಚೆಯಲ್ಲಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಿಂದಿ ಬಳಕೆಯನ್ನು ನಿಲ್ಲಿಸಬೇಕು.ಹಿಂದಿ ವಿರುದ್ಧ ನಿರಂತರ ಹೋರಾಟ ಮಾಡಲಾಗುವುದು. ಇಡೀ ರಾಜ್ಯದ ಉದ್ದಗಲಕ್ಕೂ ಹಿಂದಿ ವಿರೋಧಿ ಕ್ರಿಯಾ ಸಮಿತಿಗಳು ನೇಮಕ ಆಗಬೇಕು. ಜಿಲ್ಲಾ ಮತ್ತು ತಾಲ್ಲೂಕು ಕ್ರಿಯಾ ಸಮಿತಿ ಆಗಬೇಕು. ಇಡೀ ರಾಜ್ಯದಾದ್ಯಂತ ತೀವ್ರ ಹೋರಾಟ ಮಾಡುವ ಕಾಲ ಬಂದಿದೆ. ಹಿಂದಿ ವಿರೋಧಿಸಿ ಅಂತಿಮವಾಗಿ ಜೈಲು ಭರೋ ಚಳವಳಿಗೂ ನಾವು ಸಿದ್ಧರಾಗಬೇಕಿದೆ’ ಎಂದರು.

ಸಿಬಿಐ ತನಿಖೆ ಸೂಕ್ತ: ‘ಬಿಟ್ ಕಾಯಿನ್ ದೇಶದಲ್ಲಿ ಹೊಸದು. ಇದು ಅಗೋಚರವಾದದ್ದು, ದಂಧೆ ಈಗ ಬೆಳಕಿಗೆ ಬಂದಿದೆ. ಈ ಪ್ರಕರಣದ ಬಗ್ಗೆ ಸಿಬಿಐನಿಂದ ಉನ್ನತ ತನಿಖೆ ನಡೆಸುವುದು ಸೂಕ್ತ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಲಕ್ಷ್ಮಿನರಸಿಂಹ, ಗಡಿನಾಡು ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ರಾ.ಕುಮಾರ್, ಶಿವಲಿಂಗಮೂರ್ತಿ, ಚಾ.ವೆಂ.ರಾಜ್ ಗೋಪಾಲ್, ಶಿವಶಂಕರನಾಯಕ, ಅಜಯ್, ನಾಗರಾಜಮೂರ್ತಿ, ವರದರಾಜು, ಪುರುಷೋತ್ತಮ್ ಇತರರು ಇದ್ದರು.

ವಿಧಾನಪರಿಷತ್ ಚುನಾವಣೆಗೆ ಸ್ಪರ್ಧೆ

‘ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತೇನೆ. ಇಲ್ಲಿ ಇಬ್ಬರನ್ನು ಆಯ್ಕೆ ಮಾಡುವುದಕ್ಕೆ ಅವಕಾಶ ಇದೆ’ಎಂದು ವಾಟಾಳ್ ನಾಗರಾಜ್‌ ಹೇಳಿದರು.

ಕಾಂಗ್ರೆಸ್‌ನ ಬೆಂಬಲ ಕೊಡಲಿ:ಕಾಂಗ್ರೆಸ್‌ಗೆ ಬಹಳಷ್ಟು ಸಹಾಯ ಮಾಡಿದ್ದೇನೆ. ಹಿಂದೆ ಧ್ರುವನಾರಾಯಣ ಅವರಿಗೆ ಸಂಸತ್ ಚುನಾವಣೆಯಲ್ಲಿ ನಾನು ಬೆಂಬಲ ನೀಡಿದ್ದೇನೆ. ರಾಜ್ಯಸಭೆಯಲ್ಲಿ ನಾನು ಅನೇಕರಿಗೆ ಬೆಂಬಲ ಕೊಟ್ಟಿದ್ದೇನೆ. ಸಿದ್ದರಾಮಯ್ಯನವರ ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದೇನೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಭ್ಯರ್ಥಿಯನ್ನು ಹಾಕದೆ ನನಗೆ ಬೆಂಬಲ ನೀಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.