ADVERTISEMENT

ಚಾಮರಾಜನಗರ | ‌ತನ್ನ ಮರಿಗೆ ತಡೆಗೋಡೆ ದಾಟುವುದನ್ನು ಹೇಳಿಕೊಟ್ಟ ಆನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 16:32 IST
Last Updated 3 ಜುಲೈ 2020, 16:32 IST
   

ಚಾಮರಾಜನಗರ: ಆನೆಯೊಂದು ತನ್ನ ಮರಿಗೆ ರಸ್ತೆ ಬದಿಯ ತಡೆಗೋಡೆ ದಾಟುವುದನ್ನು ಹೇಳಿಕೊಟ್ಟು, ಮರಿಗೆ ದಾಟಲು ಸಾಧ್ಯವಾಗದೇ ಇದ್ದಾಗ ಸೊಂಡಿಲ ಮೂಲಕ ಅದಕ್ಕೆ ತಡೆಗೋಡೆ ಹತ್ತಲು ನೆರವಾಗುತ್ತಿರುವ ವಿಡಿಯೊವೊಂದು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಲ್ಲಿ ವೈರಲ್‌ ಆಗಿದೆ.

ಜಿಲ್ಲೆಯ ಗಡಿ ಭಾಗ ತಮಿಳುನಾಡಿನ ಗೂಡಲೂರಿನಿಂದ ನೀಲಂಬೂರಿಗೆ ಹೋಗುವ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ವಾಹನ ಸವಾರರು ಈ ದೃಶ್ಯಾವಳಿಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಹೆಣ್ಣಾನೆ ಹಾಗೂ ಎರಡು ಮರಿಗಳು ತಿರುವೊಂದರಲ್ಲಿ ರಸ್ತೆ ದಾಟಿ, ರಸ್ತೆ ಬದಿಯ ತಡೆಗೋಡೆಯತ್ತ ಬರುತ್ತವೆ. ತಾಯಿ ಆನೆ ಹಾಗೂ ದೊಡ್ಡ ಮರಿಯೊಂದು ತಡೆಗೋಡೆ ದಾಟುತ್ತವೆ. ಪುಟ್ಟದಾದ ಮರಿ ದಾಟಲು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ತಾಯಿ ಆನೆ ವಾಪಸ್‌ ರಸ್ತೆಯತ್ತ ಬಂದು, ತಡೆಗೋಟೆ ಮೇಲೆ ಕಾಲಿಟ್ಟು ದಾಟುವ ವಿಧಾನವನ್ನು ಮರಿಗೆ ತಿಳಿಸಿಕೊಡುತ್ತದೆ. ಹಾಗಿದ್ದರೂ ಅದಕ್ಕೆ ಸಾಧ್ಯವಾಗುವುದಿಲ್ಲ. ಕೊನೆಗೆ ತನ್ನ ಸೊಂಡಿಲಿನಿಂದ ಮರಿಯ ಬೆನ್ನನ್ನು ಕೊಂಚ ಎತ್ತಿ, ತಡೆಗೋಡೆ ಹತ್ತಲು ನೆರವಾಗುವ ದೃಶ್ಯ ವಿಡಿಯೊದಲ್ಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.