ADVERTISEMENT

ಹನೂರು | ಚಿರತೆ ಕಾಟ; ಗ್ರಾಮಸ್ಥರಲ್ಲಿ ಆತಂಕ

ಹನೂರು: ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ, ಕ್ಯಾಮೆರಾ ಟ್ರಾಪ್‌ನಲ್ಲಿ ಚಿರತೆ ಚಿತ್ರ ಸೆರೆ

ಬಿ.ಬಸವರಾಜು
Published 5 ಅಕ್ಟೋಬರ್ 2022, 21:00 IST
Last Updated 5 ಅಕ್ಟೋಬರ್ 2022, 21:00 IST
ಹನೂರು ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದ ಬಳಿ ಅರಣ್ಯ ಇಲಾಖೆ ಅಳವಡಿಸಿರುವ ಕ್ಯಾಮೆರಾದಲ್ಲಿ ಸೆರೆಯಾಗಿರುವ ಚಿರತೆಯ ಚಿತ್ರ
ಹನೂರು ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದ ಬಳಿ ಅರಣ್ಯ ಇಲಾಖೆ ಅಳವಡಿಸಿರುವ ಕ್ಯಾಮೆರಾದಲ್ಲಿ ಸೆರೆಯಾಗಿರುವ ಚಿರತೆಯ ಚಿತ್ರ   

ಹನೂರು:ತಾಲ್ಲೂಕಿನಕೆವಿಎನ್ದೊಡ್ಡಿಗ್ರಾಮದಲ್ಲಿ ದನಗಾಹಿಯನ್ನು ಕೊಂದಿದ್ದ ಚಿರತೆ, ಈಗ ಸುತ್ತಮುತ್ತಲ ಗ್ರಾಮಗಳಲ್ಲೂ ಕಾಣಿಸಿಕೊಳ್ಳುತ್ತಿದ್ದು ಅರಣ್ಯದಂಚಿನ ಗ್ರಾಮಗಳ ಜನರು ಭಯಭೀತರಾಗಿದ್ದಾರೆ.

ದನಗಾಹಿ ಗೋವಿಂದಯ್ಯ ಅವರನ್ನು ‌ಚಿರತೆ ಕೊಂದಿದ್ದು, ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿತ್ತು. ಘಟನೆಯಿಂದ ಹೆದರಿದ್ದ ಸ್ಥಳೀಯರು ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಒತ್ತಾಯಿಸಿದ್ದರು.

ಮರು ದಿನವೇ ಕಾರ್ಯಾಚರಣೆ ಆರಂಭಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಬೋನು ಇರಿಸಿದ್ದರು. ಅಲ್ಲದೇ, ಅದರ ಚಲನವಲನದ ಮೇಲೆ ನಿಗಾ ಇಡುವುದಕ್ಕಾಗಿ ಕ್ಯಾಮೆರಾಗಳನ್ನೂ ಅಳವಡಿಸಿದ್ದರು.

ADVERTISEMENT

ಸಿಗದ ಚಿರತೆ: ಅರಣ್ಯ ಇಲಾಖೆಯು ಐದು ಕಡೆಗಳಲ್ಲಿ ಬೋನು ಇಟ್ಟಿದ್ದರೂ, ಚಿರತೆ ಅವುಗಳ ಒಳಗೆ ಬಿದ್ದಿಲ್ಲ. ಸೆ.25ರಂದು ಗೋವಿಂದಯ್ಯ ಅವರ ಮೇಲೆ ದಾಳಿ ಮಾಡಿ ಕೊಂದಿದ್ದ ಚಿರತೆ ಎರಡು ದಿನಗಳ ಬಳಿಕ ಕೆವಿಎನ್‌ ದೊಡ್ಡಿಯ ಮನೆಯೊಂದರ ಮುಂಭಾಗ ಇದ್ದ ನಾಯಿಯನ್ನು ಎಳೆದುಕೊಂಡು ಹೋಗಿತ್ತು. ಮಾರನೇ ದಿನ ಗ್ರಾಮದ ಗಂಗಮ್ಮ ಎಂಬುವವರ ಕಣ್ಣಿಗೆ ಬಿದ್ದಿತ್ತು. ಅವರು ಭಯದಿಂದ ಕಿರುಚಿಕೊಂಡಿದ್ದರು. ಆಯುಧ ಪೂಜೆಯ ದಿನವಾದ ಮಂಗಳವಾರ ಕೆಂಚಯ್ಯನದೊಡ್ಡಿ ಗ್ರಾಮದಲ್ಲಿ ಚಿರತೆಯು ಹಸುವಿನ ಮೇಲೆ ದಾಳಿ ನಡೆಸಿದೆ.

ಚಿರತೆ ಹಾವಳಿಯಿಂದ ತತ್ತರಿಸಿರುವ ಕಾಡಂಚಿನ ಗ್ರಾಮಸ್ಥರು ಭಯಗೊಂಡಿದ್ದಾರೆ. ಸಾಮಾನ್ಯವಾಗಿ ಚಿರತೆ ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ. ಆದರೆ ಇಲ್ಲಿ, ವ್ಯಕ್ತಿಯೊಬ್ಬರನ್ನು ಅದು ಕೊಂದಿದೆ. ಇದು ಗ್ರಾಮಸ್ಥರ ಆತಂಕವನ್ನು ಹೆಚ್ಚಿಸಿದೆ. ಅರಣ್ಯ ಇಲಾಖೆಯು ಆದಷ್ಟು ಶೀಘ್ರದಲ್ಲಿ ಚಿರತೆಯನ್ನು ಸೆರೆ ಹಿಡಿಯಬೇಕು ಎಂಬುದು ಅವರ ಒತ್ತಾಯ.

ಕ್ಯಾಮೆರಾದಲ್ಲಿ ಸೆರೆ: ಚಿರತೆಯ ಚಲನವಲನದ ಮೇಲೆ ನಿಗಾ ಇಡುವುದಕ್ಕಾಗಿ ಅರಣ್ಯ ಇಲಾಖೆ ಅಳವಡಿಸಿರುವ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಚಿರತೆ ಸೆರೆಯಾಗಿದೆ.

ಕೆವಿಎನ್ ದೊಡ್ಡಿ ಗ್ರಾಮದ ಅರಣ್ಯದಂಚಿನಲ್ಲಿ ಸೆ.28 ರಂದು ಚಿರತೆ ಓಡಾಡುತ್ತಿರುವ ಚಿತ್ರ ಸೆರೆಯಾಗಿದೆ. ಚಿರತೆ ಮುಂಭಾಗದ ಹೊಟ್ಟೆಯ ಭಾಗದಲ್ಲಿ ತರಚಿದ ಗಾಯಗಳಾಗಿವೆ. ಇದೇ ಚಿರತೆ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

ಕೆಂಚಯ್ಯನದೊಡ್ಡಿಗೆ ಬೋನು ಸ್ಥಳಾಂತರ

ಚಿರತೆಯ ಸೆರೆಗಾಗಿ ಕೆವಿಎನ್ ದೊಡ್ಡಿ ಗ್ರಾಮದಲ್ಲಿ ಐದು ಬೋನುಗಳನ್ನು ಇರಿಸಲಾಗಿತ್ತು. 12 ದಿನಗಳಾದರೂ ಚಿರತೆ ಸೆರೆ ಸಿಕ್ಕಿಲ್ಲ. ಈ ಮಧ್ಯೆ ಮಂಗಳವಾರ ರಾತ್ರಿ ಕೆಂಚಯ್ಯನದೊಡ್ಡಿ ಗ್ರಾಮದಲ್ಲಿ ಹಸುವಿನ ಮೇಲೆ ದಾಳಿ ಚಿರತೆ ದಾಳಿ ಮಾಡಿದೆ. ಹೀಗಾಗಿ ಇಲಾಖೆಯು ಎರಡು ಬೋನುಗಳನ್ನು ಕೆಂಚಯ್ಯನದೊಡ್ಡಿ ಗ್ರಾಮಕ್ಕೆ ಸ್ಥಳಾಂತರ ಮಾಡಿದೆ.

--

12 ದಿನಗಳಿಂದಲೂ ಕಾರ್ಯಚರಣೆ ನಡೆಸಲಾಗುತ್ತಿದೆ. ಚಿರತೆ ಕ್ಯಾಮರಾದಲ್ಲಿ ಕಾಣಿಸಿಕೊಂಡಿದೆ ಶೀಘ್ರದಲ್ಲೇ ಅದನ್ನು ಸೆರೆಹಿಡಿಯಲಾಗುವುದು

- ನಂದೀಶ್, ಡಿಸಿಎಫ್‌, ಕಾವೇರಿ ವನ್ಯಧಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.