ADVERTISEMENT

ಸಮಸ್ಯೆಗಳ ಸುಳಿಯಲ್ಲಿ ಕಾಡಿನ ಗ್ರಾಮಗಳು

ಮಹದೇಶ್ವರ ಬೆಟ್ಟ: 25 ವರ್ಷಗಳಾದರೂ ಸಿಕ್ಕಿಲ್ಲ ಸೌಕರ್ಯ, ಸುಧಾರಿಸದ ಜನರ ಜೀವನ ಮಟ್ಟ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 16:26 IST
Last Updated 1 ಆಗಸ್ಟ್ 2022, 16:26 IST
ಮಹದೇಶ್ವರಬೆಟ್ಟ ಪಂಚಾಯಿತಿ ವ್ಯಾಪ್ತಿಯ ನಾಗಮಲೆ ಗ್ರಾಮದ ರಸ್ತೆಯ ನೋಟ
ಮಹದೇಶ್ವರಬೆಟ್ಟ ಪಂಚಾಯಿತಿ ವ್ಯಾಪ್ತಿಯ ನಾಗಮಲೆ ಗ್ರಾಮದ ರಸ್ತೆಯ ನೋಟ   

ಮಹದೇಶ್ವರ ಬೆಟ್ಟ: ಜಿಲ್ಲೆ ರಚನೆಯಾಗಿ 25 ವರ್ಷಗಳು ಸಂದರೂ, ಪವಾಡ ಪುರುಷ ಮಹದೇಶ್ವರಸ್ವಾಮಿ ನೆಲೆಸಿರುವ ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳು ಇನ್ನೂ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ.

ಮಹದೇಶ್ವರಸ್ವಾಮಿ ಓಡಾಡಿದ ಕಾಡಿನೊಳಗೆ ಈ ಹಳ್ಳಿಗಳಿರುವುದೇ ಅವುಗಳಿಗೆ ಶಾಪವಾಗಿ ಪರಿಣಮಿಸಿದೆ. ರಸ್ತೆ, ನೀರು, ವಿದ್ಯುತ್‌ನಂತಹ ಕನಿಷ್ಠ ಮೂಲಸೌಕರ್ಯಗಳೂ ಈ ಊರುಗಳ ಜನರ ಪಾಲಿಗೆ ಮರೀಚಿಕೆ. ಆರೋಗ್ಯ, ಶಿಕ್ಷಣದಂತಹ ಸೇವೆಗಳೂ ಸಮರ್ಪಕವಾಗಿ ತಲುಪುತ್ತಿಲ್ಲ. ಸಮಾಜದಲ್ಲಿ ಕನಿಷ್ಠ ಗೌರವದಿಂದ ಬದುಕಲು ಬೇಕಾದ ಸೌಲಭ್ಯಗಳು ಇಲ್ಲಿನ ನಿವಾಸಿಗಳಿಗೆ ಲಭ್ಯವಿಲ್ಲ.

ತಮಿಳುನಾಡಿನ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 18 ಹಳ್ಳಿಗಳು ಬರುತ್ತವೆ. ಭೌಗೋಳಿಕವಾಗಿ ಇದು ದೊಡ್ಡ ಪಂಚಾಯಿತಿ. ಮಹದೇಶ್ವರಸ್ವಾಮಿ ದೇವಾಲಯದ ಕಾರಣಕ್ಕೆ ಮಹದೇಶ್ವರ ಬೆಟ್ಟ ಕೊಂಚ ಅಭಿವೃದ್ಧಿಯಾಗಿದೆ. ಗ್ರಾಮಸ್ಥರಿಗೆ ಸರ್ಕಾರಿ ಸೌಲಭ್ಯಗಳೂ ಸಿಗುತ್ತಿವೆ.

ADVERTISEMENT

ಆದರೆ,ದೊಡ್ಡಾಣೆ, ಕೊಂಬುಡಿಕ್ಕಿ, ತೋಕರೆ, ತುಳಸಿಕೆರೆ, ಪಡಸಲನತ್ತ, ಕೊಂಗನೂರು, ಗೊರಸಾಣೆ, ಹಳೆಯೂರು, ಶಾಂತಿನಗರ, ತಂಬಡಿಗೇರಿ, ನಾಗಮಲೆ, ಮಾರಿಹೊಲ, ಕೀರನಹೊಲ, ತೇಕಣೆ, ಇಂಡಿಗನತ್ತ, ಮೆಂದರೆ, ಹಣೆ ಹೊಲಗಳಲ್ಲಿ ಮೂಲಸೌಕರ್ಯಗಳಿಲ್ಲ. ತುರ್ತು ಆರೋಗ್ಯ ಪರಿಸ್ಥಿತಿಯಲ್ಲಿ ರೋಗಿಗಳು, ಗರ್ಭಿಣಿಯರನ್ನು ಡೋಲಿಯಲ್ಲಿ ಹೊತ್ತೊಯ್ಯಬೇಕಾಗಿದೆ.

ಇತ್ತೀಚೆಗೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಒಟ್ಟಾಗಿ ಈ ಗ್ರಾಮಗಳನ್ನು ಸಂಪರ್ಕಿಸಲು ಜನ ವನ ಸೇತುವೆ ಎಂಬ ಸಾರಿಗೆ ವ್ಯವಸ್ಥೆ ಮಾಡಿರುವುದರಿಂದ ಇಲ್ಲಿನ ಜನರಿಗೆ ಕೊಂಚ ಅನುಕೂಲವಾಗಿದೆ.

ಕಾಡು ಕಾರಣ: ಇಷ್ಟೂ ಹಳ್ಳಿಗಳು ಮಲೆ ಮಹದೇಶ್ವರ ವನ್ಯಧಾಮದ ಒಳಗಡೆ ಇವೆ. ಇದು ರಕ್ಷಿತಾರಣ್ಯ ಆಗಿರುವುದರಿಂದ ಅರಣ್ಯ ಇಲಾಖೆಯ ನಿಯಮಗಳು ಅನ್ವಯವಾಗುತ್ತವೆ. ಇದೇ ಕಾರಣಕ್ಕೆ ಈ ಗ್ರಾಮಗಳಿಗೆ ಉತ್ತಮ ರಸ್ತೆ ನಿರ್ಮಾಣವಾಗಿಲ್ಲ. ವಿದ್ಯುತ್‌ ಸಂಪರ್ಕ ಇಲ್ಲ. ಸೋಲಾರ್‌ ವಿದ್ಯುತ್‌ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಅವುಗಳು ಜನರಿಗೆ ಪೂರ್ಣ ಪ್ರಮಾಣದಲ್ಲಿ ಪ್ರಯೋಜನಕ್ಕೆ ಬರುತ್ತಿಲ್ಲ. ಆ ಗ್ರಾಮಗಳಲ್ಲಿ ಆರೋಗ್ಯ ಸೇವೆ ಸಿಗುತ್ತಿಲ್ಲ. ಬೆಟ್ಟ ಇಲ್ಲವೇ ಬೇರೆ ಕಡೆಗಳಿಗೆ ಹೋಗಬೇಕು. ಇರುವ ಕೊಳವೆ ಬಾವಿಗಳು ಹಾಳಾಗಿವೆ. ಹಾಗಾಗಿ, ಕುಡಿಯುವ ನೀರಿಗೆ ಹಳ್ಳಿಗಳ ಜನರು ತೆರೆದ ಬಾವಿಗಳ ನೀರನ್ನೇ ಅವಲಂಬಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಇಲಾಖೆಯ ಕುಡಿಯುವ ನೀರಿನ ಯೋಜನೆಗಳು ಇನ್ನೂ ಇಲ್ಲಿಗೆ ತಲುಪಿಲ್ಲ.ಗ್ರಾಮಗಳಿಗೆ ಸರಿಯಾದ ರಸ್ತೆ ಇಲ್ಲದಿರುವ ಕಾರಣಕ್ಕೆ ಕಲ್ಲು ಮುಳ್ಳಿನ ದಾರಿಯಲ್ಲಿ ಜನರು ಓಡಾಡಬೇಕು. ದಿನನಿತ್ಯದ ಸಾಮಾನುಗಳು ಹಾಗೂ ಆರೋಗ್ಯ ಸಂಬಂದಿತ ಸೇವೆಗಳಿಗೆ ಮಹದೇಶ್ವರ ಬೆಟ್ಟಕ್ಕೆ ಬರಬೇಕು. ಸಮಯಕ್ಕೆ ಸರಿಯಾಗಿ ವಾಹನಗಳು ಇಲ್ಲವಾದರೆ ಕಾಲ್ನಡಿಗೆಯೇ ಗತಿ.

ಪೂರ್ಣಗೊಳ್ಳದ ಮನೆ:ವಸತಿ ಯೋಜನೆಯಡಿ ಕೆಲ ಹಳ್ಳಿಗಳಿಗೆ ಮನೆಗಳು ಮಂಜೂರಾಗಿದ್ದರೆ, ಕೆಲ ಹಳ್ಳಿಗಳ ಗ್ರಾಮಸ್ಥರು ಇಂದಿಗೂ ಗುಡಿಸಲಿನಲ್ಲಿ ವಾಸಮಾಡುತ್ತಿದ್ದಾರೆ. ಮಂಜೂರಾಗಿರುವ ಮನೆಗಳು ಸಹ ಅರ್ಧಕ್ಕೆ ನಿಂತು ಇತ್ತ ಗುಡಿಸಲು ಇಲ್ಲ ಮನೆಯೂ ಇಲ್ಲದಂತಾಗಿದೆ ಎಂಬುದು ಗ್ರಾಮಸ್ಥರ ಅಳಲು.

‘ಪಂಚಾಯಿತಿಯಿಂದ ಮನೆ ಮಂಜೂರಾಗಿದ್ದು ಏಳು ವರ್ಷಗಳಲ್ಲಿ ಎರಡು ಬಿಲ್ ಮಾತ್ರ ಕೈ ಸೇರಿದೆ. ಮನೆ ಇಲ್ಲದ ಕಾರಣ ಸಾಲ ಮಾಡಿ ಮನೆ ನಿರ್ಮಿಸಿದ್ದೇವೆ. ಈ ಆ ಸಾಲವನ್ನೂ ತೀರಿಸಲು ಸಾಧ್ಯವಾಗುತ್ತಿಲ್ಲ. ಕಾಡಂಚಿನಲ್ಲಿ ವಾಸವಾಗಿರುವ ನಮಗೆ ಸರ್ಕಾರ ಸೌಲಭ್ಯಗಳನ್ನು ನೀಡಬೇಕು’ ಎಂದು ಕೊಂಗನೂರಿನ ಗಿರಿಯ ಅವರು ಹೇಳಿದರು.

ಆರು ತಿಂಗಳು ಬೇರೆಡೆ ವಾಸ

ಗ್ರಾಮದಲ್ಲಿ ವ್ಯವಸಾಯವನ್ನೇ ನಂಬಿ ಜೀವನವನ್ನು ಸಾಗಿಸುತ್ತಿರುವ ಹಳ್ಳಿಗರು ವ್ಯವಸಾಯವಿಲ್ಲದ ಸಂದರ್ಭದಲ್ಲಿ ಕೊಡಗು, ತಮಿಳುನಾಡು ಮುಂತಾದ ಕಡೆಗಳಿಗೆ ಕೆಲಸ ಹುಡುಕಿಗೊಂಡು ವಲಸೆ ಹೋಗುತ್ತಾರೆ. ಕರಿಕಲ್ಲು ಕ್ವಾರಿಗಳಿಗೆ ಕೆಲಸಕ್ಕೆ ಹೋಗುವವರೂ ಇದ್ದಾರೆ. ವರ್ಷದಲ್ಲಿ 6 ತಿಂಗಳು ಬೇರೆಡೆ ಜೀವನವನ್ನು ಸಾಗಿಸುತ್ತಿದ್ದಾರೆ.

‘ನಮ್ಮ ಗ್ರಾಮದಲ್ಲಿ ಇಂದಿಗೂ ಮೂಲ ಸೌಕರ್ಯಗಳು ಪೂರ್ಣವಾಗಿ ದೊರೆತಿಲ್ಲ. ಕುಡಿಯುವ ನೀರು ಹಾಗೂ ರಸ್ತೆ ನಮಗೆ ಮುಖ್ಯವಾಗಿ ಬೇಕು. ವಿದ್ಯುತ್‌ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಕೊಳವೆ ಭಾವಿಯ ಯಂತ್ರ ಕೆಟ್ಟುನಿಂತು ವರ್ಷಗಳು ಕಳೆದರೂ ದುರಸ್ತಿಗೊಳಿಸಿಲ್ಲ. ಇನ್ನು ಮುಂದಾದರೂ ನಮ್ಮ ಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ’ ಎಂದು ಗೊರಸಾಣೆಯಬೋರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೌಕರ್ಯ ಒದಗಿಸಲು ಕ್ರಮ’

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಿರಣ್‌ ಅವರು, ‘ಕೆಟ್ಟುನಿಂತಿದ್ದ ಕೊಳವೆ ಬಾವಿಗಳನ್ನು ದುರಸ್ತಿ ಮಾಡಲಾಗಿದೆ. ಪಡಿಸಲನತ್ತ ಗ್ರಾಮದಲ್ಲಿ ಹಾಳಾಗಿದ್ದ ಸೋಲಾರ್‌ ವ್ಯವಸ್ಥೆಯನ್ನು ಕಳೆದವಾರವೇ ಸರಿ ಮಾಡಿ ನೀರು ಬಿಡಲು ಕ್ರಮ ವಹಿಸಲಾಗಿದೆ. ಅವಕಾಶ ಇರುವ ಕಡೆ ರಸ್ತೆ ಸೌಲಭ್ಯವನ್ನು ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ₹10 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುವುದು. ಗ್ರಾಮಸ್ಥರು ಏನೇ ಸಮಸ್ಯೆಗಳಿದ್ದರೂ ನೇರವಾಗಿ ಪಂಚಾಯಿತಿ ಕಾರ್ಯಾಲಯಕ್ಕೆ ಬಂದು ತಿಳಿಸಿದರೆ, ಅವುಗಳನ್ನು ಬಗೆಹರಿಸಲು ಕ್ರಮ ವಹಿಸಲಾಗುವುದು. ನರೇಗಾ ಯೋಜನೆ ಅಡಿಯಲ್ಲಿ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅವಕಾಶ ಇದ್ದು, ಗ್ರಾಮಸ್ಥರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.