ADVERTISEMENT

ವಿಷ್ಣುವರ್ಧನ್‌ ಜಯಂತಿ: ಘೋಷಣೆಗೆ ಒತ್ತಾಯ

ಅಭಿಮಾನಿ ಸ್ನೇಹ ಬಳಗದಿಂದ ಹುಟ್ಟುಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 4:26 IST
Last Updated 19 ಸೆಪ್ಟೆಂಬರ್ 2021, 4:26 IST
ನಟ ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬದ ಅಂಗವಾಗಿ ಉಮ್ಮತ್ತೂರು ಇಂದುಶೇಖರ್‌ ಅವರು ಕೇಕ್‌ ಕತ್ತರಿಸಿದರು
ನಟ ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬದ ಅಂಗವಾಗಿ ಉಮ್ಮತ್ತೂರು ಇಂದುಶೇಖರ್‌ ಅವರು ಕೇಕ್‌ ಕತ್ತರಿಸಿದರು   

ಚಾಮರಾಜನಗರ: ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ, ಏಳುಬಾರಿ ರಾಜ್ಯ ಪ್ರಶಸ್ತಿ ಪಡೆದು ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಡಾ.ವಿಷ್ಣುವರ್ಧನ್ ಅವರು ಹುಟ್ಟಿದ ದಿನದಂದುರಾಜ್ಯ ಸರ್ಕಾರವು ವಿಷ್ಣುವರ್ಧನ್ ಜಯಂತಿ ಆಚರಿಸಬೇಕು ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹಾಗೂ ಡಾ.ವಿಷ್ಣುವರ್ಧನ್‌ ಅಭಿಮಾನಿ ಸ್ನೇಹ ಬಳಗದ ಉಮ್ಮತ್ತೂರು ಇಂದುಶೇಖರ್ ಅವರು ಶನಿವಾರ ಒತ್ತಾಯಿಸಿದರು.

ನಗರದ ನ್ಯಾಯಾಲಯ ರಸ್ತೆಯಲ್ಲಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಷ್ಣುವರ್ಧನ್ ಅವರ 71ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಡಾ. ವಿಷ್ಣು ಜಾತ್ಯತೀತ ವ್ಯಕ್ತಿ, ತಮ್ಮ ನಟನೆಯ ಮೂಲಕ ಅಸಂಖ್ಯಾತ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ. ಕರ್ನಾಟಕ ಸರ್ಕಾರವು ಕನ್ನಡ ಸಂಸ್ಕೃತಿ ಇಲಾಖೆ ಮತ್ತು ವಾರ್ತಾ ಇಲಾಖೆಯ ಮೂಲಕ ವಿಷ್ಣು ಅವರು ನಾಡಿಗೆ ನೀಡಿರುವ ಕೊಡುಗೆಗಳನ್ನು ಸ್ಮರಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು’ ಎಂದು ಆಗ್ರಹಿಸಿದರು.

ಉಪನ್ಯಾಸಕ ಸುರೇಶ್ ಎನ್.ಋಗ್ವೇದಿ ಅವರು ಮಾತನಾಡಿ,‘ವಿಷ್ಣುವರ್ಧನ್ ಅವರು ತಮ್ಮ ನಡೆ ನುಡಿ ಹಾಗೂ ತನ್ಮೂಲಕ ಅಮರತ್ವ ಪಡೆದಿದ್ದಾರೆ. ಅವರ ಹೆಸರು ಶಾಶ್ವತವಾಗಿ ಕರ್ನಾಟಕದಲ್ಲಿ ಉಳಿದಿದೆ. ರೈತನಾಗಿ, ಸ್ನೇಹಿತನಾಗಿ, ಸೈನಿಕನಾಗಿ, ವೈದ್ಯನಾಗಿ, ಪೋಲೀಸ್ ಅಧಿಕಾರಿಯಾಗಿ... ಹೀಗೆ ಹತ್ತು ಹಲವು ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಿದ ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದ ಅಮೂಲ್ಯ ರತ್ನವಿದ್ದಂತೆ’ ಎಂದು ಬಣ್ಣಿಸಿದರು.

ADVERTISEMENT

ಹೋರಾಟಗಾರ ಆಲೂರುಮಲ್ಲು, ಚುಡಾ ಸದಸ್ಯ ಕರಿನಂಜನಪುರ ಕೂಸಣ್ಣ, ವಕೀಲ ಆರ್.ಅರುಣ್‌ಕುಮಾರ್, ಜಾನಪದ ಗಾಯಕ ಜ.ಸುರೇಶ್‌ನಾಗ್, ಅಮಚವಾಡಿ ಪ್ರಕಾಶ್, ಎಚ್.ಜಿ.ಕುಮಾರಸ್ವಾಮಿ, ಹರಿಪ್ರಸಾದ್, ಸಿ.ಆರ್.ಮಹೇಶ್‌ಕುಮಾರ್, ವಕೀಲರಾದ ಆರ್.ಗಿರೀಶ್, ಎಚ್.ಎಸ್.ಮಹೇಂದ್ರ, ಎಚ್.ಬಿ.ಲೋಕೇಶ್, ಎಸ್.ಸುಂದರ್‌ರಾಜ್, ಜಿ.ಎನ್.ಸಂಪತ್ತು, ಆರ್.ಕೆಂಪರಾಜು, ಪುಟ್ಟುವರ್ಧನ್, ಕಾಳನಹುಂಡಿ ಬಸವರಾಜು, ಸಿದ್ದಯ್ಯನಪುರ ಮನು, ಬಸವಣ್ಣ, ಮಿಲ್ಕ್ ಮಂಜು, ಆಟೋ ನಾಗರಾಜು, ನವೀನ್‌ಕುಮಾರ್, ಮಹದೇವಸ್ವಾಮಿ, ಹಾಗೂ ವಿಷ್ಣು ಅಭಿಮಾನಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.