ಚಾಮರಾಜನಗರ: ಅದ್ಭುತ ವಾಸ್ತುಶಿಲ್ಪ ಹಾಗೂ ಆಕರ್ಷಕ ಮೂರ್ತಿಗಳ ಕೆತ್ತನೆಯ ಮೂಲಕ ದೇವತೆಗಳ ಪರಿಕಲ್ಪನೆ ನೀಡಿರುವ ವಿಶ್ವಕರ್ಮ ಸಮುದಾಯ ಭಾರತೀಯ ಶಿಲ್ಪಕಲೆಗೆ ನೀಡಿರುವ ಕೊಡುಗೆ ಅಪಾರ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.
ನಗರದ ವರನಟ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ದೈವ ಸಾಕ್ಷಾತ್ಕಾರ ಪಡೆದಿರುವ ವಿಶ್ವಕರ್ಮರು ಬೇಲೂರು ಹಾಗೂ ಸೋಮನಾಥಪುರದಲ್ಲಿ ಸುಂದರ ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದಾರೆ.
ವಿಶ್ವಕರ್ಮ ಸಮುದಾಯ ಮೂಲವೃತ್ತಿಯ ಜೊತೆಗೆ ಶಿಕ್ಷಣಕ್ಕೂ ಆದ್ಯತೆ ನೀಡಬೇಕು. ಮೂಢನಂಬಿಕೆ, ಕಂದಾಚಾರ ಬದಿಗೊತ್ತಿ ಕೌಶಲಾಭಿವೃದ್ಧಿ ತರಬೇತಿ ಪಡೆದು ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಶಾಸಕರು ಸಲಹೆ ನೀಡಿದರು.
ಜಿಲ್ಲಾ ಕೇಂದ್ರದಲ್ಲಿ ವಿಶ್ವಕರ್ಮ ಜನಾಂಗದ ಸಮುದಾಯ ಭವನಕ್ಕೆ ಸರ್ಕಾರದಿಂದ ಅನುದಾನ ನೀಡಲಾಗುವುದು. ಕೌಶಲಾಭಿವೃದ್ಧಿ ಕೇಂದ್ರ ತೆರೆದು ಅನುಕೂಲ ಕಲ್ಪಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರದ ಸಮೀಕ್ಷೆಯಲ್ಲಿ ವಿಶ್ವಕರ್ಮ ಸಮುದಾಯ ನಿಖರ ಹಾಗೂ ಸ್ಪಷ್ಟ ಮಾಹಿತಿ ನಮೂದಿಸಬೇಕು. ಜನಾಂಗದ ಅಭಿವೃದ್ಧಿಗೆ ಪೂರಕವಾಗಿ ಮಾಹಿತಿ ನೀಡಿದರೆ ಅನುಕೂಲವಾಗಲಿದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ ಮಾತನಾಡಿ ‘ಸಾವಿರಾರು ವರ್ಷಗಳ ಹಿಂದೆ ವಿಜ್ಞಾನ, ತಂತ್ರಜ್ಞಾನದ ಪ್ರಭಾವ ಇಲ್ಲದ ಸಂದರ್ಭದಲ್ಲಿ ಸುಂದರ ವಾಸ್ತುಶಿಲ್ಪಗಳನ್ನು ಹೊಂದಿರುವ ದೇವಾಲಯಗಳನ್ನು ನಿರ್ಮಿಸಿರುವ ವಿಶ್ವಕರ್ಮ ಸಮುದಾಯ ಅಗ್ರಮಾನ್ಯರಾಗಿದ್ದಾರೆ. ಕಲಾಕೌಶಲದ ಮೂಲಕ ಜಗತ್ತಿಗೆ ಹಲವು ಕೊಡುಗೆ ನೀಡಿದ್ದಾರೆ ಎಂದರು.
ನಗರಸಭೆ ಉಪಾಧ್ಯಕ್ಷೆ ಮಮತಾ ಮಾತನಾಡಿ ವಿಶ್ವಕರ್ಮರು ವಿಶ್ವದ ಮೊದಲ ಎಂಜಿನಿಯರ್ ಎಂಬ ಶ್ರೇಯ ಪಡೆದಿದ್ದು ಅಮರಾವತಿ, ದ್ವಾರಕ ನಿರ್ಮಾಣ ಮಾಡಿದ್ದಾರೆ, ಶಿವನಿಗೆ ತ್ರಿಶೂಲ ನೀಡಿದವರೂ ವಿಶ್ವಕರ್ಮರು ಎಂಬು ಪ್ರತೀತಿ ಇದೆ ಎಂದು ಹೇಳಿದರು.
ಎಸ್‌ಪಿ ಬಿ.ಟಿ.ಕವಿತಾ ಮಾತನಾಡಿ ಸೃಷ್ಟಿಯ ನಂತರ ಜಗತ್ತನ್ನು ಅತ್ಯಂತ ಸುಂದರವಾಗಿ ನಿರ್ಮಿಸಿದವರು ವಿಶ್ವಕರ್ಮರು. ಸಮುದಾಯದ ಸೌಂದರ್ಯಪ್ರಜ್ಞೆ ಕಣ್ಮನ ಸೆಳೆಯುತ್ತಿದೆ. ವಿಶ್ವಕರ್ಮರ ಜಾಗೃತಪ್ರಜ್ಞೆ ಸಮಾಜಕ್ಕೆ ಅವಶ್ಯಕ ಎಂದರು.
ಮೈಸೂರು ಮಹಾರಾಣಿ ಕಾಲೇಜಿನ ಸಹ ಪ್ರಾಧ್ಯಾಪಕಿ ಎಚ್.ಆರ್. ಚಂದ್ರಕಲಾ ಮಾತನಾಡಿ, ಶಿಲ್ಪಕಲೆಗೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದ್ದು ವಿಶ್ವಮಟ್ಟದಲ್ಲಿ ಪರಿಚಯಿಸಿದ್ದಾರೆ. ಕಲ್ಲನ್ನು ಸುಂದರ ಶಿಲೆಯಾಗಿಸಲು ಏಕಾಗ್ರತೆ, ತನ್ಮಯತೆ, ಕುಸುರಿ ಕಲೆ ಪರಿಪೂರ್ಣತೆ ಇದ್ದರೆ ಮಾತ್ರ ಸಾಧ್ಯವಾಗುತ್ತದೆ. ಅಂತಹ ವಿಶಿಷ್ಟವಾದ ಕಲೆಯನ್ನು ಸಿದ್ಧಿಸಿಕೊಂಡಿರುವ ವಿಶ್ವಕರ್ಮರು ಜಗತ್ತು ಮೆಚ್ಚಿಕೊಂಡಿರುವ ಸುಂದರ ವಿಗ್ರಹಗಳನ್ನು ನಿರ್ಮಿಸಿದ್ದಾರೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಿಂದ ವಿಶ್ವಕರ್ಮರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ ಜಿಲ್ಲಾಡಳಿತ ಭವನದಲ್ಲಿ ಸಮಾಪನಗೊಂಡಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜು, ಸಮುದಾಯದ ಮುಖಂಡರಾದ ವಿ. ಶ್ರೀನಿವಾಸ ಪ್ರಸಾದ್, ಅನಂತಕುಮಾರ್, ಲಿಂಗಣ್ಣಾಚಾರ್, ಕುಮಾರ್ ಇತರರು ಕಾರ್ಯಕ್ರಮದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.