ADVERTISEMENT

ಬಿಎಸ್‌ಪಿಯತ್ತ ಜನರ ಒಲವು: ಅರಕಲವಾಡಿ ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 14:39 IST
Last Updated 30 ಆಗಸ್ಟ್ 2018, 14:39 IST

ಚಾಮರಾಜನಗರ: ‘ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಗಳಲ್ಲಿ ಗೆಲ್ಲುವಂತಹ ವಾರ್ಡ್‌ಗಳಲ್ಲಿ ಬಿಎಸ್‌ಪಿ ಸ್ಪರ್ಧೆ ಮಾಡಿದೆ. ಕೊಳ್ಳೇಗಾಲದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ. ಚಾಮರಾಜನಗರದಲ್ಲಿ ಪಕ್ಷ ನಿರ್ಣಾಯಕ ಪಾತ್ರವಹಿಸಲಿದೆ’ ಎಂದು ಬಿಎಸ್‌ಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ಗುರುವಾರ ತಿಳಿಸಿದರು.

ಈ ಹಿಂದೆ, ನಗರಸಭೆಯಲ್ಲಿ ಆಡಳಿತ ನಡೆಸಿರುವ ಪಕ್ಷಗಳು ಪಟ್ಟಣಕ್ಕೆ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಿಲ್ಲ. ಇಂದಿಗೂ ಪಟ್ಟಣದ ಎಲ್ಲ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇಲ್ಲಿನ ಸ್ಥಿತಿ ಪಟ್ಟಣ ಪಂಚಾಯಿತಿಗಳಿಗಿಂತ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಇದರಿಂದ ಬೇಸತ್ತಿರುವ ಮತದಾರರು ಬಿಎಸ್‌ಪಿ ಗೆಲ್ಲಿಸಲು ಒಲವು ತೋರಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ದಲ್ಲಾಳಿಗಳ ಸಂತೆ: ಚಾಮರಾಜನಗರ ನಗರಸಭೆಯಲ್ಲಿ ಸಾಮಾನ್ಯ ಜನರ ಕೆಲಸ ಆಗುವುದಿಲ್ಲ. ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಿಲ್ಲ. ದಲ್ಲಾಳಿಗಳ ಸಂತೆಯಾಗಿದೆ. ಎಲ್ಲ ವಾರ್ಡ್‌ಗಳಲ್ಲಿ ಕನಿಷ್ಠ ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಮಾಡಿಲ್ಲ. ನೂತನ ಕಟ್ಟಡ ಕಾಮಗಾರಿ ಕಳಪೆಯಿಂದ ಕೂಡಿದೆ. ಇದರಿಂದ ತರಕಾರಿ ವ್ಯಾಪಾರಿಗಳು ಬೀದಿಬದಿಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದರು.

ADVERTISEMENT

ಸಾರ್ವಜನಿಕ ಶೌಚಾಲಯವಿಲ್ಲ: ಜಿಲ್ಲಾ ಕೇಂದ್ರಕ್ಕೆ ಗ್ರಾಮೀಣ ಭಾಗದ ಜನರು ಹೆಚ್ಚು ಬರುತ್ತಾರೆ. ಆದರೆ, ಇಲ್ಲಿ ಸಮರ್ಪಕ ಹಾಗೂ ಸ್ವಚ್ಛತೆಯಿಂದ ಕೂಡಿದ ಒಂದೂ ಸಾರ್ವಜನಿಕ ಶೌಚಾಲಯವಿಲ್ಲ. ಮಹಿಳೆಯರು ಸಂಕಷ್ಟ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಗರಸಭೆ ಆಡಳಿತ ಸಂಪೂರ್ಣ ವಿಫಲವಾಗಿದೆ. ಹೀಗಾಗಿ, ಹೊಸ ಆಲೋಚನೆಯೊಂದಿಗೆ ಅಧಿಕಾರಕ್ಕೆ ಬರುವ ಹಂಬಲ ಬಿಎಸ್‌ಪಿಗಿದೆ. ಇದಕ್ಕೆ ಎಲ್ಲ ಮತದಾರು ಸಹಕಾರ ನೀಡಬೇಕು ಎಂದರು.

ಅತಂತ್ರ ಸ್ಥಿತಿ: ಚಾಮರಾಜನಗರ ನಗರಸಭೆಯ 16 ವಾರ್ಡ್‌ಗಳಲ್ಲಿ ಸ್ಪರ್ಧಿಸಿರುವ ಪಕ್ಷ 8 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಲಿದೆ. ಇಲ್ಲಿ ಬೇರೆ ಯಾವುದೇ ಪಕ್ಷ ಪೂರ್ಣ ಬಹುಮತ ಪಡೆಯುವುದಿಲ್ಲ. ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದರು.

ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಆಲೂರುಮಲ್ಲು, ಮುಖಂಡರಾದ ಕೃಷ್ಣಯ್ಯ, ಕೃಷ್ಣಮೂರ್ತಿ, ಬ್ಯಾಡಮೂಡ್ಲು ಬಸವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.