ADVERTISEMENT

ಚರಂಡಿ ತ್ಯಾಜ್ಯ ಹೆಚ್ಚಳ: ರಸ್ತೆ ಆವರಿಸುವ ನೀರು

ಯಳಂದೂರು: ಗ್ರಾಮೀಣ ಭಾಗದಲ್ಲಿಚ ಚರಂಡಿ ಸ್ವಚ್ಛತೆಗೆ ಮಳೆಯನ್ನೇ ಕಾಯುವ ಆಡಳಿತ‌

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 4:53 IST
Last Updated 10 ಜುಲೈ 2021, 4:53 IST
ಯಳಂದೂರು ತಾಲ್ಲೂಕಿನ ಹೊನ್ನೂರು ಗ್ರಾಮದ ಹೊರ ವಲಯದ ಚರಂಡಿಯಲ್ಲಿ ಕಂಡು ಬಂದ ಘನ ತ್ಯಾಜ್ಯ
ಯಳಂದೂರು ತಾಲ್ಲೂಕಿನ ಹೊನ್ನೂರು ಗ್ರಾಮದ ಹೊರ ವಲಯದ ಚರಂಡಿಯಲ್ಲಿ ಕಂಡು ಬಂದ ಘನ ತ್ಯಾಜ್ಯ   

ಯಳಂದೂರು: ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ನಿರ್ಮಿಸಲಾಗಿರುವ ಚರಂಡಿಗಳಲ್ಲಿ ಕಸಕಡ್ಡಿ, ಪ್ಲಾಸ್ಟಿಕ್‌ ತ್ಯಾಜ್ಯಗಳು ತುಂಬಿದ್ದು ನೀರಿನ ಸರಾಗ ಹರಿಯುವಿಕೆಗೆ ತಡೆಯೊಡ್ಡಿದೆ.

ಮಳೆಗಾಲಕ್ಕೂ ಮುನ್ನ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮ ವಹಿಸದೇ ಇರುವುದರಿಂದ ಈ ಸಮಸ್ಯೆ ಉದ್ಭವಿಸಿದೆ. ರಸ್ತೆಗಳಲ್ಲಿ ಹರಿಯುವ ಮಳೆ ನೀರು ಚರಂಡಿ ಸೇರಿ ಕೊಳಚೆ ನೀರಿನೊಂದಿಗೆ ಬೆರೆತು ಗ್ರಾಮಗಳ ಕೆಳ ಪಾತ್ರದಲ್ಲಿರುವ ಕೆರೆಕಟ್ಟೆಗಳಿಗೆ ಸೇರುತ್ತಿದೆ.

ತಾಲ್ಲೂಕಿನ ಬಹುತೇಕ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಮಳೆಗಾಲಕ್ಕೆ ಇನ್ನೂ ಸಿದ್ಧತೆ ಆರಂಭವಾಗಲಿಲ್ಲ.ಗುಂಬಳ್ಳಿ, ದುಗ್ಗಹಟ್ಟಿ, ಹೊನ್ನೂರು ಮಾಂಬಳ್ಳಿ,ಮದ್ದೂರು ಪಂಚಾಯುತಿಗಳಲ್ಲಿ ಊರಿನ ಸ್ವಚ್ಛತೆಗೆ ಮುಂಗಾರು ಮಳೆಯನ್ನು ಕಾಯುವಸ್ಥಿತಿಯೂ ಇದೆ. ಮಳೆ ನೀರು ಬಂದಾಗ ತ್ಯಾಜ್ಯ ಕೊಚ್ಚಿಕೊಂಡು ಹೋಗಿ ಚರಂಡಿ ಸ್ವಚ್ಛವಾಗುತ್ತದೆ ಎಂಬುದು ಸ್ಥಳೀಯ ಅಧಿಕಾರಿಗಳ ಲೆಕ್ಕಾಚಾರ.

ADVERTISEMENT

ಮಳೆಗಾಲ ಆರಂಭವಾದರೆ, ಹಳ್ಳಿಯ ಘನ ಮತ್ತು ಪ್ಲಾಸ್ಟಿಕ್ತ್ಯಾಜ್ಯ ಊರ ಮುಂದೆ ಸಂಗ್ರಹವಾಗುತ್ತದೆ. ಕೆಲವೊಮ್ಮೆ ಕೆರೆಕಟ್ಟೆ ಸೇರಿ ಶುದ್ಧನೀರನ್ನು ಮಲಿನಗೊಳಿಸುತ್ತದೆ. ಯರಗಂಬಳ್ಳಿ, ಗೌಡಹಳ್ಳಿ, ಅಂಬಳೆ ಸುತ್ತಮುತ್ತ ಕೃಷಿಕರುಕಲುಷಿತ ನೀರನ್ನು ಹೊಲ, ಗದ್ದೆಗೆ ಬಳಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

‘ಗ್ರಾಮದ ಚರಂಡಿ ನೀರಿನಲ್ಲಿ ಘನತ್ಯಾಜ್ಯ ಸೇರುತ್ತದೆ. ಇದರಿಂದ ಮೋರಿ ಕಟ್ಟಿಕೊಂಡುಅಕ್ಕಪಕ್ಕದ ಮನೆಗಳಿಗೆ, ಜಮೀನುಗಳಿಗೆ ನೀರು ನುಗ್ಗುತ್ತದೆ. ಅಸಮರ್ಪಕ ಚರಂಡಿ ನಿರ್ವಹಣೆಯಿಂದಮಳೆಗಾಲದಲ್ಲಿ ಕೆರೆ, ಹೊಲ, ಗದ್ದೆಗಳತ್ತ ಹರಿಯುತ್ತದೆ. ಹಾಗಾಗಿ, ಪ್ರತಿ ತಿಂಗಳುಚರಂಡಿ ಮತ್ತು ರಸ್ತೆ ಬದಿ ಸ್ವಚ್ಛಗೊಳಿಸುವತ್ತ ಪಂಚಾಯಿತಿಗಳು ಯೋಜನೆ ರೂಪಿಸಲಿ’ ಎಂದು ಹೊನ್ನೂರು ಮಹೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಚರಂಡಿ ಸ್ವಚ್ಛತೆ ಮಾಡಿ: ‘ಮಳೆ ಬಂದರೆ ಕೆಲವು ಬಡಾವಣೆಗಳಲ್ಲಿ ನೀರು ನಿಲ್ಲುತ್ತದೆ. ಚರಂಡಿ ಸ್ವಚ್ಛತೆ ನಡೆಯದ ಕಾರಣ ನೀರು ಮನೆಗಳತ್ತ ಹರಿಸುತ್ತದೆ. ಮಳೆಗಾಲಕ್ಕೂ ಮೊದಲು ಗ್ರಾಮೀಣ ಭಾಗಗಳಚರಂಡಿ ಮತ್ತು ಬಡಾವಣೆಯ ರಸ್ತೆಗಳನ್ನು ಅಭಿವೃದ್ಧಿಪಡಿಸುವತ್ತ ಗ್ರಾಮಾಭಿವೃದ್ಧಿಅಧಿಕಾರಿಗಳು ಮುಂದಾಗಬೇಕು’ ಎಂದು ಮಲ್ಲಿಗೆಹಳ್ಳಿಯ ಆರ್‌.ಪ್ರಮೋದ್‌ ಅವರು ಒತ್ತಾಯಿಸಿದರು.

‘ಎಲ್ಲ ಅಧಿಕಾರಿಗಳಿಗೂ ಸೂಚನೆ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆರ್‌.ಉಮೇಶ್‌, ‘ಜನವಸತಿ ಮತ್ತು ಕೆಳ ಪಾತ್ರದ ಚರಂಡಿಶುದ್ಧಗೊಳಿಸಿ, ತ್ಯಾಜ್ಯವನ್ನು ಹೊರ ಸಾಗಿಸಲುತಾಲ್ಲೂಕಿನ 12 ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೂ ಸೂಚಿಸಲಾಗಿದೆ. ಅನುಪಯುಕ್ತತ್ಯಾಜ್ಯವನ್ನು ಗೊಬ್ಬರ ತಯಾರಿಸಿ, ಪರಿಸರ ಸ್ನೇಹಿ ವಿಧಾನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲೂ ಚಿಂತಿಸಲಾಗಿದೆ. ಮಳೆಗಾಲದಲ್ಲಿ ರಸ್ತೆ ಮತ್ತು ಕೊಚ್ಚೆಯಲ್ಲಿ ಸೇರುವಪ್ಲಾಸ್ಟಿಕ್ ಬಾಟಲಿ, ಘನತ್ಯಾಜ್ಯವನ್ನು ತೆಗೆದು, ನಂತರ ಕೊಳಚೆ ನೀರನ್ನುಹರಿಸಬೇಕು. ಈ ಬಗ್ಗೆ ಆಯಾ ಪಂಚಾಯಿತಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.