ಕೊಳ್ಳೇಗಾಲ: ಇಲ್ಲಿನ ನಗರಸಭೆ ನಿವಾಸಿಗಳಿಗೆ 24*7 ಶುದ್ಧ ಕುಡಿಯುವ ನೀರಿನ ಬಿಲ್ ನಿವಾಸಿಗಳಿಗೆ ಶಾಕ್ ಕೊಟ್ಟಿದೆ.
ದುಬಾರಿ ನೀರಿನ ಬಿಲ್ ಕಂಡು ಭಾನುವಾರ ನಗರದ ಮುನೇಶ್ವರನ ಗುಡಿಯ ಬೀದಿ, ದೇವಾಂಗ ಪೇಟೆ, ಭೀಮ ನಗರ, ದೊಡ್ಡ ನಾಯಕರ ಬಡಾವಣೆಯ ನಿವಾಸಿಗಳು ನಗರಸಭೆ ವಿರುದ್ಧ ಅಸಮಾಧಾನ ಹೊರಹಾಕಿದರು.
13ನೇ ವಾರ್ಡ್ ಮುನೇಶ್ವರ ಗುಡಿ ಬೀದಿಯ ಮನೆಗಳಿಗೆ ಶನಿವಾರ ಕಳೆದ 3 (ಏಪ್ರಿಲ್‌ನಿಂದ ಜೂನ್) ತಿಂಗಳಿಗೆ ಕುಡಿಯುವ ನೀರಿನ ಬಿಲ್ ವಿತರಣೆ ಮಾಡಲಾಗಿತ್ತು. ಇದರಲ್ಲಿ ಪರಮೇಶ್ ಎಂಬುವರಿಗೆ ನೀರಿನ ₹7076, ನಂಜುಂಡಸ್ವಾಮಿ ₹25,551, ರಂಗಸ್ವಾಮಿ ₹11229, ನಂಜುಂಡಸ್ವಾಮಿ ₹24 ಸಾವಿರ, ತೊಳಸಮ್ಮ ₹5 ಸಾವಿರ, ಶ್ರೀನಿವಾಸ್ ₹3 ಸಾವಿರ, ಶಂಕರ್ ₹5 ಸಾವಿರ, ರಾಜು ಎಂಬುವರಿಗೆ ₹4 ಸಾವಿರ ನೀರಿನ ಬಿಲ್ ಬಂದಿದೆ. ಈ ಹಿನ್ನಲೆ ಬಡಾವಣೆ ಮಹಿಳೆಯರು ಸೇರಿದಂತೆ ನಿವಾಸಿಗಳು ಭಾನುವಾರ ಮುನೇಶ್ವರ ಗುಡಿ ಬೀದಿಯಲ್ಲಿ ದುಬಾರಿ ಬಿಲ್ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಡಾವಣೆ ನಿವಾಸಿ ಚಂದ್ರಮ್ಮ ಮಾತನಾಡಿ, ‘ನಗರಸಭೆಯಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಇದು ಎಷ್ಟರಮಟ್ಟಿಗೆ ಸರಿ. ಕಳಪೆ ನಲ್ಲಿಗಳನ್ನು ಹಾಕಿರುವುದಲ್ಲದೆ, ಅಶುದ್ಧ ಕುಡಿಯುವ ನೀರು ಬಿಡುತ್ತಿದ್ದಾರೆ. ಕಳೆದ 3 ತಿಂಗಳಿಗೆ ₹11 ಸಾವಿರ ಬಿಲ್ ನೀಡಿದ್ದಾರೆ. ಇಷ್ಟೊಂದು ಹಣ ಹೇಗೆ ಕಟ್ಟಲು ಸಾಧ್ಯ’ ಎಂದು ದೂರಿದರು.
ನಗರಸಭೆ ನಾಮ ನಿರ್ದೇಶಿತ ಸದಸ್ಯ ಮಧುಚಂದ್ರ ಮಾತನಾಡಿ, ಕುಡಿಯುವ ನೀರಿನ ಬಿಲ್ ಅವೈಜ್ಞಾನಿಕವಾಗಿದೆ. ಕಳೆದ 3 ತಿಂಗಳಿಗೆ ಬಡಾವಣೆ ನಿವಾಸಿಗಳಿಗೆ ನೂರಲ್ಲ, ಇನ್ನೂರಲ್ಲ ಸಾವಿರಾರು ತರಾವರಿ ಬಿಲ್ ಬಂದಿದೆ. ಹಿಂದೆ ₹120 ನೀರಿನ ಬಿಲ್ ಕಟ್ಟುತ್ತಿದ್ದೇವು. ಏಕಾಏಕಿ ಸಾವಿರಾರು ಬಿಲ್ ಬಂದಿದೆ. ನೀರಿನ ಬಿಲ್ ಬಗ್ಗೆ ನಗರಸಭೆ ಜಾಗೃತಿ ಮೂಡಿಸಿಲ್ಲ. ಈ ಎಡವಟ್ಟಿನಿಂದ ಜನರು ಪರಿತಪಿಸುವಂತಾಗಿದೆ. ಈ ಬಗ್ಗೆ ಪರಿಶೀಲನೆ ಕ್ರಮ ಅಗತ್ಯವಿದೆ. 1 ಲಕ್ಷ ಲೀಟರ್ ನೀರು ಉಚಿತವಾಗಿ ನೀಡಬೇಕು. ಮತ್ತೆ ದುಬಾರಿ ಬಿಲ್ ನೀಡಿದರೆ ನಗರಸಭೆ ಮುಂದೆ ಪ್ರತಿಭಟನೆ ಕೈಗೊಳ್ಳುತ್ತೇವೆ’ ಎಂದು ಎಚ್ಚರಿಸಿದರು.
ಪಟ್ಟಣದ ಮುನೇಶ್ವರ ಗುಡಿ ಬೀದಿಯ ರಾಜಮ್ಮ, ಯಶೋಧ, ರಾಣ , ಜಯಲಕ್ಷ್ಮಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.