ADVERTISEMENT

ಯಳಂದೂರು | ಜಲಾಶಯಗಳಲ್ಲಿ ಕುಸಿಯುತ್ತದೆ ಜಲರಾಶಿ

ಬೇಸಿಗೆ ಮುನ್ನವೇ ಕೆರೆ ಕಟ್ಟೆಗಳಲ್ಲಿ ಕುಸಿದ ನೀರಿನ ಮಟ್ಟ

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 6:30 IST
Last Updated 21 ಜನವರಿ 2024, 6:30 IST
ಯಳಂದೂರು ತಾಲ್ಲೂಕಿನ ಹೊಸಹಳ್ಳಿ ಜಲಾಶಯದಲ್ಲಿ (ಈರಣ್ಣನಕಟ್ಟೆ ಪೋಡು) ನೀರು ತಳಮುಟ್ಟಿದೆ
ಯಳಂದೂರು ತಾಲ್ಲೂಕಿನ ಹೊಸಹಳ್ಳಿ ಜಲಾಶಯದಲ್ಲಿ (ಈರಣ್ಣನಕಟ್ಟೆ ಪೋಡು) ನೀರು ತಳಮುಟ್ಟಿದೆ   

ಯಳಂದೂರು: ಕಳೆದ ಬಾರಿ ಮುಂಗಾರು ಅವಧಿಯಲ್ಲಿ ಕೊರತೆ ತಾಲ್ಲೂಕಿನ ಜಲಾಶಯಗಳ ಮೇಲೂ ಪರಿಣಾಮ ಬೀರಿದೆ. 2022ರಲ್ಲಿ ಕೋಡಿ ಬಿದ್ದಿದ್ದ ಬಹುತೇಕ ಕೆರೆ ಮತ್ತು ಕಟ್ಟೆಗಳಲ್ಲಿ ಈ ಬಾರಿ ಬೇಸಿಗೆ ಆರಂಭವಾಗುತ್ತಲೇ ನಿಧಾನವಾಗಿ ಜಲಮಟ್ಟ ಕಡಿಮೆಯಾಗುತ್ತಿದೆ. ಬೇಸಿಗೆ ಬೆಳೆಗಳಿಗೆ ನೀರು ಸಿಗುವುದು ಅನುಮಾನ.

ತಾಲ್ಲೂಕಿನಲ್ಲಿ 3 ಜಲಾಶಯ ಮತ್ತು 29ಕ್ಕೂ ಹೆಚ್ಚಿನ ಕೆರೆ ಕಟ್ಟೆಗಳಿವೆ. ಬೇಸಿಗೆ ಸಮಯದಲ್ಲಿ ಜಲಾಶಯದ ಸುತ್ತಮುತ್ತಲ ಗ್ರಾಮಗಳ ಕೃಷಿಕರು ಕೆರೆ ಹಾಗೂ ಜಲಾಶಯದ ನೀರು ಅವಲಂಬಿಸಿದ್ದಾರೆ. ಈ ವರ್ಷ ಬೇಸಿಗೆಗೂ ಮೊದಲೇ ಕೃಷ್ಣಯ್ಯನಕಟ್ಟೆ, ಬೆಲ್ಲತ್ತಡ್ಯಾಂಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ, ಬಿಳಿಗಿರಿ ಕಾಡಿಗೆ ಹೊಂದಿಕೊಂಡ ಹೊಸಹಳ್ಳಿ ಅಣೆಕಟ್ಟೆ ತಳಮುಟ್ಟಿದೆ.

‘2022ರಲ್ಲಿ ನಿರೀಕ್ಷೆಗೂ ಮೀರಿ ಮಳೆ ಸುರಿದಿತ್ತು. ಅಪಾರ ಪ್ರಮಾಣದ ನೀರು ಕೆರೆ, ಕಟ್ಟೆಗಳತ್ತ ಹರಿದಿತ್ತು. ಜಲಾಶಯಗಳಲ್ಲಿ ಕೋಡಿಬಿದ್ದಿತ್ತು. ನೆರೆಗೆ ಕೃಷಿ ಭೂಮಿ ಮುಳುಗಿತ್ತು. 2023ರಲ್ಲಿ ಮಳೆ ಕೊರತೆ ಬಾಧಿಸಿದ್ದರಿಂದ ಸಾಗುವಳಿಗೆ ಹಿನ್ನಡೆಯಾಗಿತ್ತು. ಬಹಳಷ್ಟು ಬೇಸಾಯಗಾರರು ಬರದ ಬೇಗೆಗೆ ಸಿಲುಕಿ, ವ್ಯವಸಾಯ ನಿರ್ಲಕ್ಷಿಸಿದ್ದರು. ಕಾಡಂಚಿನ ಪ್ರದೇಶಗಳ ರೈತರು ಕೆರೆ, ಕಟ್ಳೆಗಳ ನೀರು ಬಳಸಿಕೊಂಡು ಭತ್ತ, ಬಾಳೆ ಮತ್ತು ಕಬ್ಬು ಹಿಡುವಳಿ ಕೈಗೊಂಡಿದ್ದರು’ ಎಂದು ಕೃಷಿಕ ಗೌಡಹಳ್ಳಿ ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು. 

ADVERTISEMENT

‘ಮುಂಬರುವ ಬೇಸಿಗೆ ಸಮಯಕ್ಕೆ ನೀರಿನ ಕೊರತೆ ಕಾಡಲಿದೆ. ನಾಲ್ಕು ವರ್ಷಗಳ ನಂತರ ಮೊದಲ ಬಾರಿಗೆ ಜಲಾವರಗಳ ಮಟ್ಟ ಗಣನೀಯವಾಗಿ ಇಳಿದಿದೆ. ಅಲ್ಫಾವಧಿ ಬೆಳೆಗಳಿಗೆ ನೀರು ಸಿಗದಂತಾಗಿದೆ. ಬಿಸಿಲಿನ ಪ್ರಖರತೆ ಈ ಬಾರಿ ಹೆಚ್ಚಾಗುವ ನಿರೀಕ್ಷೆ ಇದೆ’ ಎಂದು ಕೃಷಿ ಅಧಿಕಾರಿ ವೆಂಕಟರಂಗಶೆಟ್ಟಿ ಮಾಹಿತಿ ನೀಡಿದರು.

ಪ್ರಾಣಿಗಳಿಗೆ ಸಮಸ್ಯೆ ಇಲ್ಲ: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಕೆರೆಗಳಲ್ಲಿ ನೀರಿದ್ದು, ಪ್ರಾಣಿಗಳಿಗೆ ಸಮಸ್ಯೆಯಾಗದು ಎಂದು ಹೇಳುತ್ತಾರೆ ಅರಣ್ಯ ಅಧಿಕಾರಿಗಳು. 

‘ಬೆಲ್ಲತ್ತ ಹಾಗೂ ಕೃಷ್ಣಯ್ಯನಕಟ್ಟೆ ಜಲಾವರಗಳಲ್ಲಿ ವರ್ಷಪೂರ್ತಿ ನೀರು ಇರುತ್ತದೆ.  ಹೀಗಾಗಿ ವನ್ಯ ಜೀವಿಗಳ ಬಳಕೆಗೆ ಸಿಗಲಿದೆ. ಈ ಸಲ, ಮುಂಗಾರು ಪೂರ್ವ ಮಳೆ ಬೇಗ ಬಂದರೆ ಸಮಸ್ಯೆಯಾಗದು. ಕಾಡಿನೊಳಗಡೆ ನೀರಿನ ಮೂಲಗಳಿದ್ದು ವನ್ಯಪ್ರಾಣಿಗಳಿಗೆ ನೀರಿನ ಕೊರತೆಯಾಗದು’ ಎಂದು ಯಳಂದೂರು ವಲಯ ಅರಣ್ಯಾಧಿಕಾರಿ ನಾಗೇಂದ್ರ ನಾಯಕ್ ಹೇಳಿದರು. 

ಬೇಸಿಗೆ ಕೃಷಿ ಈ ಬಾರಿ ಕಷ್ಟ ಬಿಸಿಲಿನ ಝಳ ತೀವ್ರ ಸಾಧ್ಯತೆ ಪ್ರಾಣಿಗಳಿಗಿಲ್ಲ ಸಮಸ್ಯೆ: ಅಧಿಕಾರಿಗಳು

ಬತ್ತುತ್ತಿವೆ ಕೆರೆ ಬಾವಿ! ‘ಕಳೆದ ವರ್ಷ ಬಹುತೇಕ ಕೆರೆ ಕಟ್ಟೆಗಳಲ್ಲಿ ನೀರು ತುಂಬಿತ್ತು. ಹೊನ್ನೂರು ಯರಿಯೂರು ಕೆಸ್ತೂರು ಕೆರೆಗಳ ನೀರನ್ನು ಕೃಷಿಕರು ಬಳಸಿಕೊಂಡು ಅಲ್ಪಾವಧಿ ಬೆಳೆಗಳನ್ನು ಬೆಳೆಯುತ್ತಿದ್ದರು. ಅತಿಯಾದ ನೀರು ಹರಿದ ಪರಿಣಾಮ ಕೆರೆಗಳಲ್ಲಿ ಹೂಳು ತುಂಬಿ ಕಳೆ ಗಿಡಗಳು ಸಮೃದ್ಧವಾಗಿ ಬೆಳೆದಿದೆ. ಈಗ ನೀರು ತಳ ಮುಟ್ಟಿದ್ದು ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ. ಅಂತರ್ಜಲ ಸಮಸ್ಯೆಯೂ ಕಾಡಲಿದೆ’ ಎಂದು ರೈತ ಹೊನ್ನೂರು ಪ್ರಸನ್ನ ಕಳವಳ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.