ADVERTISEMENT

ಸಂತೇಮರಹಳ್ಳಿ: ಮಳೆ ನಿಂತರೂ, ಜಮೀನಿನಲ್ಲಿ ತಗ್ಗದ ನೀರು

ಹೊಂಗನೂರು ಕೆರೆ ಕೋಡಿ ಬಿದ್ದ ಪರಿಣಾಮ, ಫಸಲು ಜಲಾವೃತ

ಮಹದೇವ್ ಹೆಗ್ಗವಾಡಿಪುರ
Published 20 ನವೆಂಬರ್ 2021, 16:14 IST
Last Updated 20 ನವೆಂಬರ್ 2021, 16:14 IST
ಕಬ್ಬಿನ ಫಸಲು ಜಲಾವೃತಗೊಂಡಿರುವುದು
ಕಬ್ಬಿನ ಫಸಲು ಜಲಾವೃತಗೊಂಡಿರುವುದು   

ಸಂತೇಮರಹಳ್ಳಿ: ಹೋಬಳಿ ವ್ಯಾಪ್ತಿಯಲ್ಲಿ ಸುರಿದ ಸತತ ಮಳೆ ಹಾಗೂಹೊಂಗನೂರು ಹಿರೀಕೆರೆ ಕೋಡಿ ಬಿದ್ದ ಪರಿಣಾಮ ಕೆಳ ಭಾಗದಲ್ಲಿರುವ ಜಮೀನುಗಳಲ್ಲಿ ಬೆಳೆದಿದ್ದ ಫಸಲುಗಳು ಜಲಾವೃತವಾಗಿವೆ.

ಶುಕ್ರವಾರದಿಂದೀಚೆಗೆ ಮಳೆ ಕಡಿಮೆಯಾಗಿದೆ. ಹಾಗಿದ್ದರೂ, ಜಮೀನುಗಳಲ್ಲಿ ನಿಂತಿರುವ ನೀರು ಪೂರ್ಣವಾಗಿ ಬಸಿದು ಹೋಗಿಲ್ಲ. ಕೆಲವು ಜಮೀನುಗಳಲ್ಲಿ ಇನ್ನೂ ಮೊಣಕಾಲುವರೆಗೆ ನೀರು ನಿಂತಿದೆ. ಇದರಿಂದಾಗಿ ರೈತರು ಬೆಳೆ ನಷ್ಟದ ಭೀತಿಯಲ್ಲಿದ್ದಾರೆ.

ಆರು ವರ್ಷಗಳ ನಂತರ ಹಿರೀಕೆರೆ ಭರ್ತಿಯಾಗಿರುವುದರಿಂದ ಊರಿನ ರೈತರು ಹರ್ಷಗೊಂಡಿದ್ದಾರೆ. ಮತ್ತೊಂದು ಕಡೆಯಲ್ಲಿ ಕೆರೆ ಕೋಡಿ ಬಿದ್ದು ನೀರು ಜಮೀನುಗಳಿಗೆ ನುಗ್ಗಿದ್ದರಿಂದ ರೈತರು ಆತಂಕದಲ್ಲಿದ್ದಾರೆ.

ADVERTISEMENT

ಕೆರೆಯ ತಳ ಭಾಗದಲ್ಲಿ ಬೆಳೆದಿರುವ ರಾಗಿ, ಮುಸುಕಿನ ಜೋಳ, ಭತ್ತ, ಬಾಳೆ ಹಾಗೂ ಕಬ್ಬು ಫಸಲಿನಲ್ಲಿ ನೀರು ನಿಂತಿದೆ. ಕಟಾವು ಹಂತಕ್ಕೆ ಬಂದಿದ್ದ ಮುಸುಕಿನ ಜೋಳ ಹಾಗೂ ರಾಗಿ ಬೆಳೆಗಳು ಸಂಪೂರ್ಣವಾಗಿ ನೀರು ಪಾಲಾಗಿವೆ.

ಹಿರೀಕೆರೆ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶಗಳಾದ ಹೊಂಗನೂರು, ಮಸಣಾಪುರ, ಗಂಗವಾಡಿ ಹಾಗೂ ಮೇಲ್ಮಾಳ ಗ್ರಾಮಗಳ ರೈತರ ಫಸಲುಗಳು ನಷ್ಟವಾಗಿವೆ. ಇನ್ನೇನು ಫಸಲು ಬಂದು ಕೈಗೆ ಸಿಗಬೇಕು ಎನ್ನುವಷ್ಟರಲ್ಲಿ ಸುರಿದ ಮಳೆಯಿಂದ ಫಸಲುಗಳು
ನೆಲ ಕಚ್ಚಿವೆ. ಇದರಿಂದ ರೈತರು ಚಿಂತೆಗೀಡಾಗಿದ್ದಾರೆ.

ಮಳೆ ಹಾಗೂ ಕೆರೆಯ ಕೋಡಿ ನಿಂತು ನೀರು ಇಂಗಿದರೂ ಫಸಲು ಕೊಚ್ಚಿ ಹೋಗಿರುತ್ತದೆ. ಬೆಳೆದ ಫಸಲು ನೋಡುವುದು ಕಷ್ಟವಾಗುತ್ತದೆ.ಜೋಳ ಹಾಗೂ ರಾಗಿಯ ತೆನೆಗಳು ಚಿಗುರು ಒಡೆಯುವ ಹಂತ ತಲುಪಿವೆ. ನೀರು ಇಂಗುವ ವೇಳೆಗೆ ತೆನೆಗಳು ನೆಲಕ್ಕೆ ಬಾಗಿ ಜಾನುವಾರುಗಳಿಗೂ ಮೇವು ದೊರಕುವುದು ಕಷ್ಟ ಎನ್ನುತ್ತಾರೆ ರೈತರು.

ಪರಿಹಾರಕ್ಕೆ ಆಗ್ರಹ

‘ಭತ್ತದ ಫಸಲು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಬಾಳೆ ಹಾಗೂ ಕಬ್ಬು ಬೆಳೆಗಳಲ್ಲಿ ನೀರು ನಿಂತು ಬೆಳೆಗಳು ಕೊಳೆಯಲು ಆರಂಭವಾಗಿವೆ. ಪಂಚಾಯಿತಿಯು ಯಾವುದೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಿಲ್ಲ. ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಯಾವ ಅಧಿಕಾರಿಗಳು ಬಂದು ಗಮನ ಹರಿಸಿಲ್ಲ. ನಷ್ಟ ಉಂಟಾಗಿರುವ ಫಸಲಿಗೆ ಪರಿಹಾರ ಒದಗಿಸಲು ಕಂದಾಯ ಅಧಿಕಾರಿಗಳು ಮುಂದಾಗಬೇಕು’ ಎಂದು ರೈತ ಪ್ರಭಾಕರಗೌಡ ಅವರು ಒತ್ತಾಯಿಸಿದರು.

‘ಒಂದು ಎಕರೆಯಲ್ಲಿ ₹50 ಸಾವಿರ ಖರ್ಚು ಮಾಡಿ ಅರಿಸಿನ ಬೆಳೆಯಲಾಗಿತ್ತು. ಮಂಡಿಯುದ್ದ ನೀರು ನಿಂತು ಬೆಳೆ ಸಂಪೂರ್ಣ ನಷ್ಟವಾಗಿದೆ. ₹2 ಲಕ್ಷಕ್ಕೂ ಹೆಚ್ಚು ಹಣ ನಷ್ಟವಾಗಿದೆ’ ಎಂದು ಚಾಟೀಪುರ ಗ್ರಾಮದ ರೈತ ಮಾದೇಶ್ ಅವರು ಅಳಲು ತೋಡಿಕೊಂಡರು.

‘ಹಿರೀಕೆರೆ ಕೋಡಿ ಬಿದ್ದ ಪರಿಣಾಮ ನೀರಿನ ರಭಸಕ್ಕೆ ಕೆಲವು ಕೆರೆಯ ಒತ್ತುವರಿ ಬೆಳೆಗಳು ಸೇರಿದಂತೆ ಫಸಲಿಗೆ ಹಾನಿಯಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ವರದಿ ತಯಾರಿಸಿ ತಾಲ್ಲೂಕು ಆಡಳಿತಕ್ಕೆ ಮಾಹಿತಿ ನೀಡಲಾಗಿದೆ’ ಎಂದು ಹೊಂಗನೂರು ಗ್ರಾಮ ಲೆಕ್ಕಿಗ ನಾಗೇಶ್ ಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.