
ಹನೂರು: ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಶ್ರಿತ ಕೃಷಿಯನ್ನು ನಂಬಿ ಬದುಕುತ್ತಿರುವ ರೈತರ ಜೀವನಕ್ಕೆ ನೆರವಾಗುವ ನಿಟ್ಟಿನಲ್ಲಿ ರಾಮನ ಗುಡ್ಡೆ ಕೆರೆಗೆ ನೀರು ಹರಿಸುತ್ತಿದ್ದು, ಆರ್ಥಿಕ ಸಬಲತೆ ಸಾಧ್ಯವಾಗಲಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ರಾಮನಗುಡ್ಡೆ ಕೆರೆಗೆ ಕಾವೇರಿ ನದಿ ನೀರನ್ನು ಹಳ್ಳದ ಮೂಲಕ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿ, ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಲಾಶಯಗಳಿಗೆ ಕಾವೇರಿ ನದಿ ನೀರು ತುಂಬಿಸುವ ಮೂಲಕ ರೈತರಿಗೆ ನೆರವಾಗಬೇಕೆಂಬುದು ನನ್ನ ವೈಯಕ್ತಿಕ ಉದ್ದೇಶ. ರೈತನಿಗೆ ಬಹಳ ಮುಖ್ಯವಾಗಿ ನೀರು–ವಿದ್ಯುತ್ ಕೊಟ್ಟರೆ ಬೇರೆನನ್ನು ಕೇಳುವುದಿಲ್ಲ ಎಂದರು.
ಈಗಾಗಲೇ ಗುಂಡಾಲ್ ಜಲಾಶಯ ಭರ್ತಿಯಾಗಿದೆ. ಅದರ ಅಚ್ಚುಕಟ್ಟ ಪ್ರದೇಶದಲ್ಲಿ ರೈತರು ವ್ಯವಸಾಯವನ್ನು ಮಾಡುತ್ತಿದ್ದಾರೆ. ಅದರಂತೆಯೇ ರಾಮನ ಗುಡ್ಡೆ ಕೆರೆಗೆ ಕಾವೇರಿ ನದಿ ಮೂಲದಿಂದ ನೀರು ಹರಿದು ಬರುತ್ತಿದ್ದು ಈ ಭಾಗದ ಸುಮಾರು 615ಕ್ಕೂ ಹೆಚ್ಚು ಎಕರೆಗೆ ನೀರು ಉಣಿಸಿದಂತಾಗುತ್ತದೆ. ಆ ನಿಟ್ಟಿನಲ್ಲಿ ಮುಂದುವರೆದ ಭಾಗವಾಗಿ ಹುಬ್ಬೆ ಹುಣಸೆ ಜಲಾಶಯಕ್ಕೆ ಹಾಗೂ ಉಡುತೋರೆ ಹಳ್ಳ ಜಲಾಶಯಕ್ಕೆ ಕಾವೇರಿ ನದಿ ಮೂಲದಿಂದ ನೀರು ಹರಿಸಲು ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಕಾವೇರಿ ನದಿ ನೀರು ತುಂಬಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈಗಾಗಲೇ ಶಾಸಕರ ಅನುದಾನದಡಿಯಲ್ಲಿ ಸುಮಾರು ನಾಲ್ಕು ಕೋಟಿ ವೆಚ್ಚದಲ್ಲಿ ಬರುವಂತಹ ಕೆರೆಗಳ ಹೂಳು ತೆಗೆಸುವ ಕಾರ್ಯ ಮಾಡಲಾಗುತ್ತದೆ. ಅಲ್ಲದೆ ರಾಮಾಪುರ ಹೋಬಳಿ ವ್ಯಾಪ್ತಿಯಲ್ಲಿ ಹಾಗೂ ಮಾರ್ಟಳ್ಳಿ ವ್ಯಾಪ್ತಿಯಲ್ಲಿ ಸಹ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜೊತೆಗೆ ಮೀಣ್ಯತ್ತ ಹಳ್ಳ ಹಾಗೂ ಗೋಪಿನಾಥನ ಜಲಾಶಯಗಳಿಗೆ ನೀರು ತುಂಬಿಸಲು ಅಗತ್ಯ ಕ್ರಮವಿಸಲಾಗುವುದು. ಜೊತೆಗೆ ವಿದ್ಯುತ್ ಶಿಕ್ಷಣ ಆರೋಗ್ಯ ಹಾಗೂ ರಸ್ತೆಗೆ ಸಂಬಂಧಿಸಿದಂತೆ ಈಗಾಗಲೇ ಅಗತ್ಯ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಮಹೇಶ್ ಮಾತನಾಡಿ, ರಾಮನಗುಡ್ಡೆ ಕೆರೆಗೆ ನದಿ ಮೂಲದಿಂದ ನೀರು ಬರುತ್ತಿರುವುದು ರೈತರಲ್ಲರಿಗೂ ಆನಂದ ಉಂಟು ಮಾಡಿದೆ. ಆದರೆ ಕಳೆದ ಮೂರು ತಿಂಗಳ ನಿರಂತರ ಪರಿಶ್ರಮದಿಂದ ನದಿ ಮೂಲದಿಂದ ನೀರು ತೆಗೆದುಕೊಂಡು ಬರಲಾಗುತ್ತಿದೆ. ಶಾಸಕ ಶ್ರಮ ಹಾಗೂ ಅಧಿಕಾರಿಗಳ ಶ್ರಮದ ಫಲವಾಗಿ ರಾಮನ ಗುಡ್ಡೆ ಕೆರೆಗೆ ನೀರು ತುಂಬುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಂಡು ಪ್ರಶ್ನೆಗಳನ್ನು ಕೇಳುವ ಸಾಮರ್ಥ್ಯ ಬೆಳೆಸಿಕೊಂಡು ತಮ್ಮ ಜೀವನದಲ್ಲಿ ಆರ್ಥಿಕವಾಗಿ ಸದೃಢರಾಗಲು ಪ್ರಯತ್ನ ಮಾಡಬೇಕು ಎಂದರು.
ನೀರು ಬಳಕೆದಾರರ ಸಲಹಾ ಸಂಘ ಮಾಡಿಕೊಳ್ಳಿ: ರೈತರು ನೀರು ಬಳಕೆದಾರ ಸಲಹಾ ಸಮಿತಿ ಅಥವಾ ಸಂಘವನ್ನು ರಚನೆ ಮಾಡಿಕೊಂಡು ನೀರನ್ನು ಬಳಕೆ ಮಾಡುವಲ್ಲಿ ಮುತುವರ್ಜಿ ವಹಿಸಬೇಕು. ಇಲ್ಲವಾದಲ್ಲಿ ಗೊಂದಲಕೀಡು ಮಾಡುತ್ತದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮುಮ್ತಾಜ್ ಬಾನು, ಎಂಜಿನಿಯರ್‌ಗಳಾದ ರಘುಪತಿ, ಉಮೇಶ್, ಕರುಣಾಮಯಿ, ಬಸವೇಶ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿವಮೂರ್ತಿ, ಮುಳ್ಳೂರು ಶಿವಮಲ್ಲು, ಗುರುಮಲ್ಲಪ್ಪ, ಹಾಗೂ , ವಿವಿಧ ಸಂಘಟನೆಗಳ ಮುಖ್ಯಸ್ಥರು, ರೈತರುಗಳು ಹಾಗೂ ಸಾರ್ವಜನಿಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.