
ಹನೂರು: ನಿರ್ಮಾಣವಾಗಿ ನಲವತ್ತು ವರ್ಷ ಕಳೆದರೂ ನೀರಿಲ್ಲದೇ ಬರಡಾಗಿದ್ದ ರಾಮನಗುಡ್ಡೆ ಕೆರೆಗೆ ಕೊನೆಗೂ ನೀರು ಹರಿಸಲು ಸಿದ್ಧತೆಗಳು ನಡೆದಿದ್ದು, ಜ.16ರಂದು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ದೊರೆಯಲಿದೆ.
ಸಾವಿರಾರು ಕೃಷಿ ಭೂಮಿಗೆ ನೀರುಣಿಸಿ ನೂರಾರು ಪ್ರಾಣಿ ಪಕ್ಷಿಗಳಿಗೆ ಜೀವಜಲವಾಗಬೇಕಿದ್ದ ರಾಮನಗುಡ್ಡೆ ಕೆರೆ ನಾಲ್ಕು ದಶಕಗಳಿಂದಲೂ ನೀರಿಲ್ಲದೆ ಒಣಗಿ ನಿಂತಿತ್ತು. ಕೆರೆ ನಿರ್ಮಾಣವಾಗುವ ಸಂದರ್ಭದಲ್ಲಿ ರೈತರಿಗೆ ಹೊಸ ಹರ್ಷ ಮೂಡಿತ್ತು. ಆದರೆ ಹನೂರು ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದಾಗಿ ಒಂದೆರಡು ಬಾರಿ ಮಾತ್ರ ಭರ್ತಿಯಾಗಿತ್ತು. ಇದರಿಂದ ರೈತರಿಗೆ ಯಾವುದೇ ಉಪಯೋಗ ಆಗುತ್ತಿರಲಿಲ್ಲ. ಕಳೆದ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಕಾವೇರಿ ನದಿ ಮೂಲದಿಂದ ತಾಲ್ಲೂಕಿನ ಹುಬ್ಬೆಹುಣಸೆ, ರಾಮನಗುಡ್ಡೆ ಹಾಗೂ ಗುಂಡಾಲ್ ಜಲಾಶಯಕ್ಕೆ ನೀರು ತುಂಬಿಸುವುದಾಗಿ ಭರವಸೆ ನೀಡಲಾಗಿತ್ತು.
ಈ ಪೈಕಿ ಗುಂಡಾಲ್ ಜಲಾಶಯಕ್ಕೆ ನೀರು ಯೋಜನೆ ಜಾರಿಗೊಳಿಸಲಾಯಿತು. ಆದರೆ ಉಳಿದ ಎರಡು ಯೋಜನೆ ನನೆಗುದಿಗೆ ಬಿದ್ದಿತು. ಈ ಬಗ್ಗೆ ರೈತ ಹಾಗೂ ಪ್ರಗತಿಪರ ಸಂಘಟನೆಗಳು ಸಾಕಷ್ಟು ಸಲ ರಾಮನಗುಡ್ಡೆ ಹಾಗೂ ಹುಬ್ಬೆಹುಣಸೆ ಕೆರೆಗಳಿಗೆ ನೀರು ತುಂಬಿಸುವಂತೆ ಪ್ರತಿಭಟನೆ ನಡೆಸಿದ್ದವು.
ಕ್ಷೇತ್ರದ ನೀರಾವರಿ ಸೌಲಭ್ಯ ಕೊರತೆಯನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಿದ ಶಾಸಕ ಎಂ.ಆರ್. ಮಂಜುನಾಥ್ ಕೆರೆಗಳ ಕಾಲುವೆಗಳ ದುರಸ್ತಿ ಕಾರ್ಯಕ್ಕೆ ಮುಂದಾಗಿ ಬಳಿಕ ರಾಮನಗುಡ್ಡೆ ಕೆರೆಗೆ ನೀರು ತುಂಬಿಸುವ ಯೋಜನೆಗೆ ಕೈ ಹಾಕಿದರು. ನಿರಂತರವಾಗಿ ಇಲಾಖೆ ಸಚಿವರು ಹಾಗೂ ಅಧಿಕಾರಿಗಳ ಸಂಪರ್ಕದಿಂದಾಗಿ ಕೊನೆಗೂ ಕೆರೆಗೆ ನೀರು ಹರಿಸುವಲ್ಲಿ ಯಶಸ್ವಿಯಾಗಿರುವ ಶಾಸಕರ ಪ್ರಯತ್ನಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಗುಂಡಾಲ್‌ಗೆ ಕಾವೇರಿ ನೀರು ಸರಬರಾಜು ಆಗುತ್ತಿರುವ ಘಟಕದಿಂದ ರಾಮನಗುಡ್ಡ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ 1.50.ಮೀ ಅಂತರದಲ್ಲಿರುವ ಬೂದುಬಾಳು ಗುಂಡಾಪುರ ಮುಖ್ಯ ರಸ್ತೆಯ ಚಂಗೋಡಿ ಮಾದಯ್ಯನ ಕೆರೆ ಹಳ್ಳಕ್ಕೆ ₹2.50 ಕೋಟಿ ವೆಚ್ಚದಲ್ಲಿ ಪೈಪ್ ಲೈನ್ ಕಾಮಗಾರಿಯನ್ನು ಕೈಗೊಳ್ಳಲು ಕ್ರಿಯಾ ಯೋಜನೆ ತಯಾರಿಸಿದ ಪರಿಣಾಮ ಈ ಕ್ರಿಯಾ ಯೋಜನೆಯಂತೆ ಜಲಾಶಯಕ್ಕೆ ನೀರು ಹರಿಯುವಂತಾಗಿದೆ. ಈಗಾಗಲೇ ಪ್ರಾಯೋಗಿಕವಾಗಿ ಕೆಲಕಾಲ ನೀರನ್ನು ಹರಿಸಲಾಗಿದೆ.
ನದಿ ಮೂಲದಿಂದ ಡ್ಯಾಂಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ಹಳ್ಳದ ಮೂಲಕ ನೀರು ಹರಿಯುವುದರಿಂದ ಈ ಭಾಗದಲ್ಲಿ ಪಂಪ್‌ಸೆಟ್ ಹಾಗೂ ಮಳೆಯಾಶ್ರಿತ ಜಮೀನುಗಳಲ್ಲಿ ಬೇಸಾಯ ಮಾಡುತ್ತಿರುವ ಬೂದುಬಾಳು, ಗುಂಡಾಪುರ, ಆಚಗಳ್ಳಿದೊಡ್ಡಿ, ಕಾಮಗೆರೆ, ಗಣೇಶಪ್ಪನ ದೊಡ್ಡಿ, ಮಂಗಲ ಗ್ರಾಮಗಳ ನೂರಾರು ರೈತರ ಸಾವಿರಾರು ಎಕರೆಗೆ ಅಂತರ್ಜಲದ ಮೂಲಕ ನೀರಿನ ಸೌಲಭ್ಯ ದೊರೆಯಲಿದೆ. ಮಳೆ ಬಂದು ಒಂದು ಬಾರಿ ಹಳ್ಳ ತುಂಬಿ ಹರಿದರೆ ವರ್ಷದವರೆಗೆ ಅಂತರ್ಜಲ ಹೆಚ್ಚುತ್ತದೆ ಎಂದು ನಂಬಿರುವ ಮತ್ತು ಮಳೆಯನ್ನು ಆಶ್ರಯಿಸಿರುವ ಈ ಭಾಗದ ರೈತರಿಗೆ ವರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.