ADVERTISEMENT

ಕುರುಬನಕಟ್ಟೆ ರಸ್ತೆ: ಕಳೆಗಿಡಗಳಿಂದ ಅಪಾಯ

ನಾಲೆ ಸಮೀಪ ತಡೆಗೋಡೆ ಇಲ್ಲದಿರುವುದರಿಂದಲೂ ಸವಾರರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 19:30 IST
Last Updated 28 ಡಿಸೆಂಬರ್ 2020, 19:30 IST
ಕುರುಬನಕಟ್ಟೆ ರಸ್ತೆಯ ಬದಿಯಲ್ಲಿ ಕಳೆ ಗಿಡಗಳು ಬೆಳೆದಿರುವುದು
ಕುರುಬನಕಟ್ಟೆ ರಸ್ತೆಯ ಬದಿಯಲ್ಲಿ ಕಳೆ ಗಿಡಗಳು ಬೆಳೆದಿರುವುದು   

ಕೊಳ್ಳೇಗಾಲ: ತಾಲ್ಲೂಕಿನ ಸುಪ್ರಸಿದ್ದ ಕುರುಬನ ಕಟ್ಟೆಗೆ (ಲಿಂಗಯ್ಯ, ಚೆನ್ನಯ್ಯನವರ ಗದ್ದುಗೆ) ಹೋಗುವ ರಸ್ತೆಗಳ ಇಕ್ಕೆಲಗಳಲ್ಲಿ ಹಾಗೂ ತಿರುವಿನಲ್ಲಿ ಜಾಲಿಗಿಡಗಳು ರಸ್ತೆಗೆ ಚಾಚಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ಹಲವು ಸಮಯದಿಂದಲೂ ಇದೇ ಪರಿಸ್ಥಿತಿ ಇದ್ದು, ಸರಾಗವಾಗಿ ಸಂಚರಿಸಲು ತೊಂದರೆಯಾಗುತ್ತಿದೆ ಎಂದು ವಾಹನ ಸವಾರರು ದೂರಿದ್ದಾರೆ.

ಪ್ರತಿ ಸೋಮವಾರ ಮತ್ತು ಶುಕ್ರವಾರ ಕುರುಬನ ಕಟ್ಟೆಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಇರುತ್ತದೆ. ನೂರಾರು ಭಕ್ತರು ಅನೇಕ ವಾಹನಗಳಲ್ಲಿ ಬರುತ್ತಾರೆ.

ADVERTISEMENT

ಕುರುಬರಕಟ್ಟೆಗೆಲಕ್ಕರಸನಪಾಳ್ಯ, ಕೆಂಪನ ಪಾಳ್ಯ, ತಿಮ್ಮರಾಜೀಪುರ ಗ್ರಾಮಗಳ ಮೂಲಕ ಮುಖ್ಯ ರಸ್ತೆ ಹೋಗುತ್ತದೆ. ಇದಲ್ಲದೇಕುಣಗಳ್ಳಿ, ಹೊಂಡರಬಾಳು, ಬಸ್ತಿಪುರ ಮೂಲಕವೂ ಇಲ್ಲಿಗೆ ಹೋಗಬಹುದು. ಈ ರಸ್ತೆಗಳು ಕಿರಿದಾಗಿವೆ.

ಮುಖ್ಯ ರಸ್ತೆಯ ಉದ್ದಕ್ಕೂ ಬಾರಿ ಗಾತ್ರದ ಕಳೆಗಿಡಗಳು ಬೆಳೆದು ರಸ್ತೆಯತ್ತ ಚಾಚಿದ್ದು, ಎದುರಿನಲ್ಲಿ ಯಾವ ವಾಹನ ಬರುತ್ತಿದೆ ಎನ್ನುವುದು ತಿಳಿಯುವುದಿಲ್ಲ. ರಸ್ತೆಯು ಕಿರಿದಾಗಿರುವುದರಿಂದ ಅಪಾಯ ಮತ್ತಷ್ಟು ಹೆಚ್ಚಿದೆ.ಬೆಳೆದಿರುವ ಮುಳ್ಳಿನ ಗಿಡಗಳ ಮೇಲೆ ಬಳ್ಳಿಗಳು ಹಬ್ಬಿವೆ.

‘ಭಾರಿ ವಾಹನಗಳು ಸರಾಗವಾಗಿ ಬರಲು ಅಡ್ಡಿಯಾಗುತ್ತಿದೆ. ರಾತ್ರಿ ವೇಳೆಯಲ್ಲಿ ಸಂಚರಿಸುವಾಗ ರಸ್ತೆಗೆ ಚಾಚಿಕೊಂಡಿರುವ ಕಳೆಗಿಡಕ್ಕೆ ನೇರವಾಗಿ ಬೆಳಕು ಬಿದ್ದರೆ ಮುಂದೆ ರಸ್ತೆ ಇರುವುದೂ ತಿಳಿಯುವುದಿಲ್ಲ. ರಾತ್ರಿಯಲ್ಲಿ ಈ ರಸ್ತೆಗಳಲ್ಲಿ ಕಾಡುಹಂದಿಗಳ ಕಾಟವೂ ಮಿತಿಮೀರಿದೆ. ಕಳೆ ಗಿಡಗಳನ್ನು ತೆರವುಗೊಳಿಸದರೆ ವಾಹನ ಸವಾರರಿಗೆ ಅನುಕೂಲವಾಗುತ್ತದೆ’ ಎಂದು ಲಾರಿ ಚಾಲಕ ಮಹದೇವ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸೂಚನ ಫಲಕ ಇಲ್ಲ: ಈ ರಸ್ತೆಯಲ್ಲಿ ಅನೇಕ ತಿರುವುಗಳಿವೆ. ಹಲವು ಗ್ರಾಮಗಳೂ ಬರುತ್ತವೆ. ಆದರೆ, ಸವಾರರಿಗೆ ಸೂಚನೆ ನೀಡುವ ಫಲಕಗಳು ಎಲ್ಲೂ ಇಲ್ಲ. ಸವಾರರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಅಲ್ಲಲ್ಲಿ ಸೂಚನಾ ಫಲಕಗಳನ್ನು ಅಡಳಡಿಸಲು ತಾಲ್ಲೂಕು ಆಡಳಿತ ಗಮನ ಹರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ತಡೆ ಗೋಡೆ ಇಲ್ಲ: ಕೆಂಪನಪಾಳ್ಯ ರಸ್ತೆಯಿಂದ ತಿಮ್ಮರಾಜೀಪುರ ಗ್ರಾಮದ ಮುಖ್ಯ ರಸ್ತೆಯ ಸಮೀಪದಲ್ಲಿ ಕಬಿನಿ ನಾಲೆ ಇದೆ. ಇಲ್ಲಿ ರಸ್ತೆಗೆ ತಡೆಗೋಡೆ ನಿರ್ಮಿಸಲಾಗಿಲ್ಲ. ವಾಹನಗಳ ಚಾಲಕರು ಕೊಂಚ ಮೈಮರೆತರೂ ಅಪಘಾತ ಖಚಿತ.

‘ಈ ರಸ್ತೆಯಲ್ಲಿ ವಾಹನ ಸವಾರರು ಚಲಿಸಬೇಕಾದರೆ ಎಚ್ಚರಿಕೆಯಿಂದ ಇರಬೇಕು. ನಾಲೆಯಲ್ಲಿ ಯಾವಾಗಲೂ ನೀರು ಹರಿಯುವುದಿಲ್ಲ. ಬೇಸಿಗೆ ಸಂದರ್ಭದಲ್ಲಿ ಖಾಲಿಯಾಗಿರುತ್ತದೆ ಮತ್ತು ಮಳೆಗಾಲ, ಚಳಿಗಾಲದಲ್ಲಿ ನೀರು ಹರಿಯುತ್ತದೆ. ಎರಡು ತಿಂಗಳ ಹಿಂದೆಯಷ್ಟೇ ಈ ನಾಲೆಗೆ ಇಬ್ಬರು ಬೈಕ್ ಸವಾರರು ಬಿದ್ದು, ಗಾಯಗೊಂಡು ಪ್ರಾಣಪಾಯದಿಂದ ಪಾರಾಗಿದ್ದಾರೆ. ರಸ್ತೆಗೆ ಹಾಗೂ ನಾಲೆ ನಡುವೆ ತಡೆಗೋಡೆಯನ್ನು ನಿರ್ಮಿಸುವ ಅಗತ್ಯವಿದೆ’ ಎಂದು ತಿಮ್ಮರಾಜೀಪುರ ಗ್ರಾಮದ ರಾಜು ಅವರು ಹೇಳಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೊಳ್ಳೇಗಾಲ ತಹಶೀಲ್ದಾರ್‌ ಕೆ.ಕುನಾಲ್‌ ಅವರು, ‘30ರವರೆಗೂ ಚುನಾವಣಾ ಕಾರ್ಯ ಇದೆ. ನೀತಿ ಸಂಹಿತೆಯೂ ಜಾರಿಯಲ್ಲಿದೆ. ಆ ಬಳಿಕ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ಸೂಚಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.