ADVERTISEMENT

ಚಾಮರಾಜನಗರ | ಅಂಗವಿಕಲರ ಸಭೆ ಪ್ರವೇಶಕ್ಕೆ ವೀಲ್‌ಚೇರ್ ಇಲ್ಲ!

ಸಭಾಂಗಣದೊಳಗೆ ತೆರಳಲಾಗದೆ ಕಚೇರಿ ಅಂಗಳದಲ್ಲೇ ಕಾದ ಅಂಗವಿಕಲರು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 5:51 IST
Last Updated 1 ಆಗಸ್ಟ್ 2025, 5:51 IST
ಚಾಮರಾಜನಗರದ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ಅಂಗವಿಕಲರ ಕುಂದುಕೊರತೆ ಸಭೆ ನಡೆಯಿತು
ಚಾಮರಾಜನಗರದ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ಅಂಗವಿಕಲರ ಕುಂದುಕೊರತೆ ಸಭೆ ನಡೆಯಿತು   

ಚಾಮರಾಜನಗರ: ತಾಲ್ಲೂಕು ಆಡಳಿತ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಅಂಗವಿಕಲರ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಲು ಅವರಿಗೆ ವೀಲ್‌ಚೇರ್ ವ್ಯವಸ್ಥೆ ಇಲ್ಲದೆ ಅಂಗವಿಕಲರು ತೀವ್ರ ಮುಜುಗರಕ್ಕೊಳಗಾಗಬೇಕಾಯಿತು.

ಸಭೆಯಲ್ಲಿ ಕುಂದುಕೊರತೆಗಳನ್ನು ಹೇಳಿಕೊಳ್ಳಲು ಬಂದಿದ್ದ ಅಂಗವಿಕಲರಿಗೆ ಸಭಾಂಗಣ ಪ್ರವೇಶಿಸಲು ವೀಲ್‌ಚೇರ್‌ಗಳನ್ನು ಇರಿಸದೆ ಕಿರಿಕಿರಿ ಅನುಭವಿಸಬೇಕಾಯಿತು. ತ್ರಿಚಕ್ರ ವಾಹನದಲ್ಲಿ ಬಂದಿದ್ದ ಅಂಗವಿಕಲ ಸಿದ್ದಯ್ಯ ಎಂಬುವರು ವೀಲ್‌ಚೇರ್‌ಗಾಗಿ ಅರ್ಧತಾಸಿಗೂ ಹೆಚ್ಚು ಸಮಯ ತ್ರಿಚಕ್ರವಾಹನದಲ್ಲೇ ಕುಳಿತರು. 

ವೀಲ್‌ಚೇರ್‌ಗಳು ಇಲ್ಲದ ವಿಚಾರ ಗಮನಕ್ಕೆ ಬರುತ್ತಿದ್ದಂತೆ ತಡಬಡಾಯಿಸಿದ ಅಧಿಕಾರಿಗಳು ಬೇರೆಡೆಯಿಂದ ತರಿಸಿ ತಾತ್ಕಾಲಿಕವಾಗಿ ವೀಲ್‌ಚೇರ್ ವ್ಯವಸ್ಥೆ ಮಾಡಿದರು. ಸಭೆ ನಿಗದಿಯಾಗಿದ್ದರೂ ವೀಲ್‌ಚೇರ್ ಸಹಿತ ಅಂಗವಿಕಲರ ಸ್ನೇಹಿ ವ್ಯವಸ್ಥೆ ಮಾಡದ ತಾಲ್ಲೂಕು ಆಡಳಿತದ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಯಿತು.

ADVERTISEMENT

ನಿಗದಿಗಿಂತ ತಡವಾಗಿ ಆರಂಭವಾದ ಸಭೆಯಲ್ಲಿ ಬೆರಳೆಣಿಕೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಅಂಗವಿಕಲರು ಭಾಗವಹಿಸಿದ್ದರು.

ಫಲಾನುಭವಿ ಕೃಷ್ಣಮೂರ್ತಿ ಮಾತನಾಡಿ, ಅಂಗವಿಕಲರಿಗೆ ಯುಡಿಐಡಿ ಕಾರ್ಡ್ ಮಾಡಿಸಲು ವೈದ್ಯರ ಪ್ರಮಾಣ ಪತ್ರ ಅಗತ್ಯವಿದ್ದು ವಾರದಲ್ಲಿ ಎರಡು ದಿನ ವೈದ್ಯರು ಸೌಲಭ್ಯ ಪಡೆಯಲು ಲಭ್ಯರಿರುವಂತೆ ಕ್ರಮ ಕೈಗೊಳ್ಳಬೇಕು. ಆಶಾಕಿರಣ ಯೋಜನೆಯಡಿ ಕನ್ನಡಕ ವಿತರಿಸಬೇಕು, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಅಂಗವಿಕಲರಿಗೆ ಮೀಸಲಾದ ಆಸನಗಳನ್ನು ಅವರಿಗೆ ಬಿಟ್ಟುಕೊಡುವಂತೆ ‌ನಿರ್ವಾಹಕರು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ತಹಶೀಲ್ದಾರ್ ಗಿರಿಜಾ ಪ್ರತಿಕ್ರಿಯಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಫಲಾನುಭವಿ ರಮೇಶ್ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ ಇಲ್ಲದೆ ಮಲಮೂತ್ರ ವಿಸರ್ಜನೆಗೆ ತೊಂದರೆಯಾಗುತ್ತಿದೆ. ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಬಸ್‌ಪಾಸ್ ನವೀಕರಣ ಮಾಡಲು ಹೋದಾಗ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹಳೆಯ ಬಸ್‌ ಪಾಸ್ ತರುವಂತೆ ಸೂಚನೆ ನೀಡುತ್ತಾರೆ. ನವೀಕರಣ ಪ್ರಕ್ರಿಯೆ ತಡವಾಗುತ್ತಿದ್ದು , ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಂಗವಿಕಲರೊಬ್ಬರು ನೋವು ತೋಡಿಕೊಂಡರು. ತಹಶೀಲ್ದಾರ್ ಪ್ರತಿಕ್ರಿಯಿಸಿ ಬಸ್ ಪಾಸ್ ನವೀಕರಣ ಪ್ರಕ್ರಿಯೆ ಸುಲಭವಾಗಿಸುವ ಸಂಬಂಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ್, ಎಂಆರ್‌ಡಬ್ಲ್ಯೂ ರಾಜೇಶ್, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಮೀನಾಕ್ಷಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ನಾಗೇಶ್,  ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಸಭೆಗೆ ತೆರಳಲು ವೀಲ್‌ಚೇರ್‌ಗಾಗಿ ತ್ರಿಚಕ್ರ ವಾಹನದ ಮೇಲೆ ಕಾಯುತ್ತಿದ್ದ ಅಂಗವಿಕಲರಾದ ಸಿದ್ದಯ್ಯ

ಸಭೆಯಲ್ಲಿ ಬೆರಳೆಣಿಕೆ ಅಧಿಕಾರಿಗಳು, ಅಂಗವಿಕಲರು ಭಾಗಿ ಬ್ಯಾಂಕ್‌ಗಳಲ್ಲಿ ಸಿಗುತ್ತಿಲ್ಲ ಜಾಮೀನು ರಹಿತ ಸಾಲ: ಆರೋಪ ಶೌಚಾಲಯಗಳಲ್ಲಿ ಇಲ್ಲ ಅಂಗವಿಕಲ ಸ್ನೇಹಿ ಸೌಲಭ್ಯ: ದೂರು

ಸಾಲ ಸಲಕರಣೆ ವ್ಯಾಪಾರಕ್ಕೆ ಮನವಿ ಅಂಗವಿಕಲರಿಗೆ ಬ್ಯಾಂಕ್‌ಗಳಲ್ಲಿ ಸಾಲ ನೀಡುವಾಗ ಜಾಮೀನುದಾರ ರಹಿತ ಸಾಲ ಸೌಲಭ್ಯ ನೀಡಬೇಕು ಎಂದು ತಹಶೀಲ್ದಾರ್‌ ಗಿರಿಜಾ ಅವರಿಗೆ ಫಲಾನುಭವಿಗಳು ಮನವಿ ಸಲ್ಲಿಸಿದರು. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಬ್ಯಾಂಕ್‌ ಶಾಲಾ ಕಾಲೇಜು ಸಹಿತ ಎಲ್ಲ ವಾಣಿಜ್ಯ ಮಳಿಗೆಗಳಲ್ಲಿ ಅಂಗವಿಕಲರು ಸುಲಭವಾಗಿ ಒಳ ಪ್ರವೇಶಿಸಲು ರ‍್ಯಾಂಪ್‌ ಹಾಗೂ ವೀಲ್‌ಚೇರ್‌ಗಳ ವ್ಯವಸ್ಥೆ ಮಾಡಬೇಕು. ಬ್ಯಾಂಕ್‌ಗಳಲ್ಲಿ ಆದ್ಯತೆ ಮೇರೆಗೆ ತ್ವರಿತ ಸಾಲ ಮಂಜೂರಾತಿ ನೀಡಬೇಕು ಫುಟ್‌ಪಾತ್‌ಗಳಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.