ADVERTISEMENT

ಗ್ರಾ.ಪಂ.ಚುನಾವಣೆ: ಅನುದಾನದ ಮೇಲೆ ಕಣ್ಣು, ಹೆಚ್ಚಿದ ಪೈಪೋಟಿ

ನರೇಗಾ ಸೇರಿ ವಿವಿಧ ಯೋಜನೆಗಳಲ್ಲಿ ಕೋಟ್ಯಂತರ ರೂಪಾಯಿ ಲಭ್ಯ

ಸೂರ್ಯನಾರಾಯಣ ವಿ
Published 19 ಡಿಸೆಂಬರ್ 2020, 13:33 IST
Last Updated 19 ಡಿಸೆಂಬರ್ 2020, 13:33 IST
ಗ್ರಾ.ಪಂ ಚುನಾವಣೆ 2020
ಗ್ರಾ.ಪಂ ಚುನಾವಣೆ 2020   

ಚಾಮರಾಜನಗರ: ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಗೆ ಈ ಬಾರಿ ಹೆಚ್ಚಿನ ಪೈಪೋಟಿ ವ್ಯಕ್ತವಾಗಿದ್ದು, ಬಹುತೇಕ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.

ಮೊದಲ ಹಂತದಲ್ಲಿ ನಡೆಯಲಿರುವ77 ಗ್ರಾಮ ಪಂಚಾಯಿತಿಗಳ 1241 ಸದಸ್ಯ ಸ್ಥಾನಗಳ ಪೈಕಿ 62 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 3,079 ಮಂದಿ ಕಣದಲ್ಲಿದ್ದಾರೆ.

ಎರಡನೇ ಹಂತದ ಚುನಾವಣೆಯ ಅಭ್ಯರ್ಥಿಗಳ ವಿವರ ಇನ್ನಷ್ಟೇ ತಿಳಿಯಬೇಕಿದೆ. ಎರಡನೇ ಹಂತದಲ್ಲಿ 3,001 ನಾಮಪತ್ರಗಳು ಕ್ರಮಬದ್ಧವಾಗಿವೆ. ಶನಿವಾರ ಸಂಜೆಯವರೆಗೂ ನಾಮಪತ್ರ ವಾಪಸ್‌ ಪಡೆಯಲು ಅವಕಾಶ ಇದ್ದುದರಿಂದ ಅಂತಿಮವಾಗಿ ಕಣದಲ್ಲಿರುವವರ ಸಂಖ್ಯೆ ಹಾಗೂ ಅವಿರೋಧವಾಗಿ ಆಯ್ಕೆಗೊಂಡವರು ಹಾಗೂ ಇತರ ವಿವರಗಳು ಭಾನುವಾರ ತಿಳಿಯಲಿದೆ.

ADVERTISEMENT

ಕಳೆದ ಬಾರಿಯ ಚುನಾವಣೆಯಲ್ಲಿ ಅಂತಿಮ ಕಣದಲ್ಲಿ 5,453 ಅಭ್ಯರ್ಥಿಗಳಿದ್ದರು. ಸದ್ಯದ ಸನ್ನಿವೇಶ ಅವಲೋಕಿಸುವುದಾದರೆ ಅದಕ್ಕಿಂತ ಹೆಚ್ಚೇ ಅಭ್ಯರ್ಥಿಗಳು ಈ ಬಾರಿ ಚುನಾವಣಾ ಅಖಾಡಲ್ಲಿರುವಸಾಧ್ಯತೆ ಇದೆ.

ಪಕ್ಷಗಳ ನಡುವೆ ಹಾಗೂ ಸ್ಥಳೀಯ ಮಟ್ಟದಲ್ಲಿ ಮುಖಂಡರ ನಡುವೆ ಈ ಮಟ್ಟಿಗಿನ ಪೈಪೋಟಿ ಹಾಗೂ ಆಕಾಂಕ್ಷಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ನಡೆಸುವ ವಿವಿಧ ಲಾಬಿಯ ಹಿಂದೆ ಹಲವು ಕಾರಣಗಳಿವೆ ಎಂದು ಹೇಳುತ್ತಾರೆ ಹಳ್ಳಿ ರಾಜಕಾರಣವನ್ನು ಬಲ್ಲವರು.

ಕೋಟಿಗೂ ಹೆಚ್ಚು ಅನುದಾನ: ಅಧಿಕಾರ ವಿಕೇಂದ್ರೀಕರಣ ತತ್ವದ ಅಡಿಯಲ್ಲಿ ಈಗ ಗ್ರಾಮ ಪಂಚಾಯಿತಿಗಳು ಮೊದಲಿಗಿಂತ ಹೆಚ್ಚು ಸ್ವಾಯತ್ತವಾಗಿವೆ. ಸಾಕಷ್ಟು ಅನುದಾನವೂ ಹರಿದು ಬರುತ್ತಿದೆ. ಹಾಗಾಗಿ ಪಕ್ಷಗಳು, ರಾಜಕಾರಣಿಗಳು ಹಾಗೂ ಸ್ಥಳೀಯ ಮುಖಂಡರ ಗಮನವನ್ನು ಪಂಚಾಯಿತಿಗಳು ಸೆಳೆಯುತ್ತಿವೆ ಎಂಬುದು ಅವರ ಮಾತು.

ಹಣಕಾಸು ಯೋಜನೆಯ (ಸದ್ಯ 15ನೆಯದ್ದು ಜಾರಿಯಲ್ಲಿದೆ) ಅಡಿಯಲ್ಲಿ ಗ್ರಾಮದ ಜನಸಂಖ್ಯೆಯ ಅನುಸಾರ ₹40 ಲಕ್ಷದಿಂದ ₹70 ಲಕ್ಷದವರೆಗೂ ಅನುದಾನ ಬರುತ್ತದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ಪ್ರತಿ ವರ್ಷ ಪಂಚಾಯಿತಿಗಳಿಗೆ ಕೋಟಿ ರೂಪಾಯಿಗೂ ಹೆಚ್ಚು ಹಣ ಬರುತ್ತದೆ.

‘ಬೇಡಿಕೆ ಆಧಾರದಲ್ಲಿ ಕೆಲಸ ಮಾಡಿಸುವುದರಿಂದ ನರೇಗಾ ಯೋಜನೆಗೆ ಇಂತಿಷ್ಟೇ ಹಣ ಎಂದು ನಿಗದಿಪಡಿಸಲಾಗುವುದಿಲ್ಲ. ಜಿಲ್ಲೆಯ ದೊಡ್ಡ ಗ್ರಾಮ ಪಂಚಾಯಿತಿಗಳು ₹2 ಕೋಟಿಯಿಂದ ₹3 ಕೋಟಿವರೆಗಿನ ವೆಚ್ಚದ ಕೆಲಸ ಮಾಡಿಸುತ್ತಿವೆ. ಜಿಲ್ಲೆಯಲ್ಲಿ 130 ಗ್ರಾಮ ಪಂಚಾಯಿತಿಗಳಿದ್ದು, ಈ ಯೋಜನೆ ಅಡಿಯಲ್ಲಿ ಸರಾಸರಿ ₹1 ಕೋಟಿಯಷ್ಟು ವ್ಯಯಿಸುತ್ತಿವೆ’ ಎಂದು ಹೇಳುತ್ತಾರೆ ಅಧಿಕಾರಿಗಳು.

ಇದಲ್ಲದೇ ವಸತಿ ಯೋಜನೆ, ಸ್ವಚ್ಛ ಭಾರತ ಅಭಿಯಾನ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ ಅನುದಾನ ಬರುತ್ತದೆ. ಕನಿಷ್ಠವೆಂದರೂ ವರ್ಷಕ್ಕೆ ₹1.5 ಕೋಟಿಯಿಂದ ₹2 ಕೋಟಿವರೆಗೆ ಅನುದಾನ ಲಭಿಸುತ್ತದೆ ಎಂದು ಹೇಳುತ್ತಾರೆ ಅಧಿಕಾರಿಗಳು.

‘₹2 ಲಕ್ಷಕ್ಕಿಂತ ಹೆಚ್ಚು ಮೊತ್ತದ ಕಾಮಗಾರಿಗಳಿಗೆ ಟೆಂಡರ್‌ ಕರೆಯಬೇಕು ಎಂಬ ನಿಯಮ ಇದೆ. ಆದರೆ, ಪಂಚಾಯಿತಿ ಅಧಿಕಾರಿಗಳು ಹಾಗೂ ಸದಸ್ಯರು ಸೇರಿ ಕಾಮಗಾರಿಗಳನ್ನು ತುಂಡು ಗುತ್ತಿಗೆ ನೀಡುತ್ತಾರೆ. ತಮಗೆ ಗೊತ್ತಿದ್ದವರಿಗೇ ನೀಡಿ ಕಮಿಷನ್‌ ಪಡೆಯುತ್ತಾರೆ. ನರೇಗಾದಲ್ಲೂ ಅವ್ಯವಹಾರ ನಡೆಯುತ್ತದೆ. ಫಲಾನುಭವಿಗಳ ಉದ್ಯೋಗ ಚೀಟಿಗಳನ್ನು ಪಡೆದು, ಅವರು ಕೆಲಸ ಮಾಡಿದಂತೆ ಲೆಕ್ಕ ತೋರಿಸಿ, ಅವರ ಖಾತೆಗೆ ಹಣ ವರ್ಗಾಯಿಸಿ, ಅವರಿಗೆ ಸ್ವಲ್ಪ ಹಣ ಕೊಟ್ಟು, ಖಾತೆಯಲ್ಲಿ ಇರುವ ಹಣವನ್ನು ಪಡೆಯುವ ದಂಧೆಯೂ ಕೆಲವು ಕಡೆ ನಡೆಯುತ್ತದೆ. ವಸತಿ ಯೋಜನೆಗಳಲ್ಲಿ ಫಲಾನುಭವಿಗಳ ಕೈಯಿಂದ ಕಮಿಷನ್‌ ಅನ್ನೂ ಪಡೆಯುತ್ತಾರೆ’ ಎಂದು ಹೇಳುತ್ತಾರೆ ಗ್ರಾಮ ಪಂಚಾಯಿತಿಗಳ ಕಾರ್ಯನಿರ್ವಹಣೆ ಬಗ್ಗೆ ತಿಳಿದವರು.

‘ದುಡ್ಡು ಮಾಡಬಹುದು ಎಂಬ ಕಾರಣಕ್ಕೆ ಬಹುತೇಕರು ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ತೋರಿಸುತ್ತಾರೆ. ಅದಕ್ಕಾಗಿ ಆದಷ್ಟು ಅವಿರೋಧವಾಗಿ ಆಯ್ಕೆಯಾಗಲು ಪ್ರಯತ್ನಿಸುತ್ತಾರೆ. ಸದಸ್ಯತ್ವದ ಹರಾಜು, ಮುಖಂಡರು ಹಾಗೂ ಕುಲದ ಯಜಮಾನರ ಮೂಲಕ ಬೇರೆ ಯಾರೂ ಸ್ಪರ್ಧಿಗಳು ನಿಲ್ಲದಂತೆ ನೋಡಿಕೊಳ್ಳುವುದರ ಹಿಂದೆ ದುಡ್ಡು ಮಾಡಬಹುದು ಎಂಬ ಲೆಕ್ಕಾಚಾರವೇ ಇರುತ್ತದೆ’ ಎಂಬುದು ಅವರ ವಾದ.

ರಾಜಕೀಯದ ಮೆಟ್ಟಿಲು
ಗ್ರಾಮ ಪಂಚಾಯಿತಿ ಚುನಾವಣೆಯ ಮೂಲಕ ಸ್ಪರ್ಧಿಸಿ ರಾಜಕಾರಣಕ್ಕೆ ಬರುವ ಆಶಯ ಇಟ್ಟುಕೊಂಡವರೂ ಹಲವರು ಇದ್ದಾರೆ. ಇದಕ್ಕೆ ಜಿಲ್ಲೆಯಲ್ಲೇ ಉತ್ತಮ ನಿದರ್ಶನ ಇದೆ. ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ತಳಮಟ್ಟದಿಂದಲೇ ರಾಜಕಾರಣಿಯಾಗಿ ರೂಪುಗೊಂಡವರು. ಮಂಡಲ ಪಂಚಾಯಿತಿಯಿಂದ (ನಂತರ ಇದೇ ಗ್ರಾಮ ಪಂಚಾಯಿತಿ ಆಯಿತು) ಅವರು ರಾಜಕಾರಣ ಆರಂಭಿಸಿದವರು. ನಂತರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಆ ಬಳಿಕ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದವರು.

ಪಕ್ಷಗಳೂ ಕಾರಣ
ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಉದ್ದೇಶದಿಂದ ರಾಜಕೀಯ ಪಕ್ಷಗಳು ಗ್ರಾಮ ಪಂಚಾಯಿತಿ ಚುನಾವಣೆಗೆ ಹೆಚ್ಚು ಒತ್ತು ನೀಡುತ್ತವೆ. ‍ಈ ಕಾರಣಕ್ಕೂ ಹೆಚ್ಚು ಪೈಪೋಟಿ ಕಂಡು ಬರುತ್ತದೆ.

ಪಕ್ಷಗಳ ಚಿಹ್ನೆ, ಮುಖಂಡರ ಹೆಸರು ಬಳಸದಿದ್ದರೂ, ಪಕ್ಷದ ಪರ ಒಲವಿರುವ, ಗೆಲ್ಲುವ ಅಭ್ಯರ್ಥಿಗಳಿಗಾಗಿ ಪಕ್ಷಗಳು ಹುಡುಕಾಟ ನಡೆಸುತ್ತವೆ. ಬಹುತೇಕ ಸಂದರ್ಭದಲ್ಲಿ ಸ್ಥಳೀಯವಾಗಿ ಪಕ್ಷದಲ್ಲಿ ಸಕ್ರಿಯರಾಗಿರುವ, ಆರ್ಥಿಕವಾಗಿ ಸದೃಢವಾಗಿರುವವರ ಬಗ್ಗೆಯೇ ಪಕ್ಷಗಳ ಮುಖಂಡರು ಒಲವು ತೋರಿಸುತ್ತಾರೆ.

‘ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ. ಆತ್ಮ ನಿರ್ಭರ ಭಾರತ ನಿರ್ಮಾಣದಲ್ಲಿ ಗ್ರಾಮಗಳ ಪಾತ್ರ ಬಹಳ ಮುಖ್ಯ. ಆಡಳಿತದ ಬಗ್ಗೆ ಅನುಭವ ಇದ್ದರೆ, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಸುಲಭವಾಗುತ್ತದೆ. ಹಾಗಾಗಿ, ಜನರ ನಡುವೆ ಹೆಚ್ಚು ಸಕ್ರಿಯರಾಗಿರುವ ಹಾಗೂ ಗ್ರಾಮ ಪಂಚಾಯಿತಿಯ ಒಳ ಹೊರಗನ್ನು ಬಲ್ಲವರು ಗೆದ್ದರೆ ಆಡಳಿತಕ್ಕೆ ಅನುಕೂಲವಾಗುತ್ತದೆ’ ಎಂದು ಹೇಳುತ್ತಾರೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಸುಂದರ್‌ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.