ADVERTISEMENT

ಗುಂಡ್ಲುಪೇಟೆ: ಕಾಡಾನೆ ದಾಳಿ, ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 13:29 IST
Last Updated 23 ಫೆಬ್ರುವರಿ 2024, 13:29 IST
ಗುಂಡ್ಲುಪೇಟೆ ತಾಲ್ಲೂಕಿನ ಹೊಂಗಹಳ್ಳಿ ಹೊರ ವಲಯದ ರೈತರ ಜಮೀನಿನಲ್ಲಿ ಕಾಡಾನೆ ದಾಳಿಯಿಂದ ಬಾಳೆ ಬೆಳೆ ನಾಶವಾಗಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಹೊಂಗಹಳ್ಳಿ ಹೊರ ವಲಯದ ರೈತರ ಜಮೀನಿನಲ್ಲಿ ಕಾಡಾನೆ ದಾಳಿಯಿಂದ ಬಾಳೆ ಬೆಳೆ ನಾಶವಾಗಿದೆ.   

ಗುಂಡ್ಲುಪೇಟೆ: ತಾಲ್ಲೂಕಿನ ಹೊಂಗಹಳ್ಳಿ ಗ್ರಾಮದ ಹೊರವಲಯದ ರೈತರ ಜಮೀನುಗಳಲ್ಲಿ ಕಾಡಾನೆ ದಾಳಿ ನಡೆಸಿ ಬಾಳೆ, ತೆಂಗು ಬೆಳೆ ನಾಶಪಡಿಸಿವೆ.

ಹೊಂಗಹಳ್ಳಿ ಗ್ರಾಮದ ತಾಯಮ್ಮ ಸೇರಿ ಇತರೆ ರೈತರು ಬೆಳೆ ನಷ್ಟ ಅನುಭವಿಸಿದ್ದು, ಬಂಡೀಪುರ ರಾಷ್ಟ್ರೀಯ ಉದ್ಯಾನದ ಮದ್ದೂರು ಅಥವಾ ಓಂಕಾರ ಅರಣ್ಯ ವಲಯದಿಂದ ಆಹಾರ ಅರಸಿ ಬಂದಿದ್ದ ಕಾಡಾನೆಗಳು ಸೋಲಾರ್ ವಿದ್ಯುತ್ ತಂತಿ ಬೇಲಿ ಮುರಿದು ಒಳನುಗ್ಗಿವೆ. ಈ ವೇಳೆ ಬೆಳವಣಿಗೆ ಹಂತದಲ್ಲಿದ್ದ ಬಾಳೆ ಬೆಳೆಯನ್ನು ತಿಂದು, ತುಳಿದು ನಾಶ ಮಾಡಿವೆ. ಕಾವಲಿಗಿದ್ದ ರೈತರು ಕೂಗಿಕೊಂಡರೂ ಲೆಕ್ಕಿಸದೇ ಪಕ್ಕದ ಜಮೀನುಗಳಲ್ಲಿ ತೆಂಗಿನ ಗಿಡಗಳನ್ನು ನಾಶ ಮಾಡಿವೆ.

‘ಬೇಸಿಗೆ ಹಿನ್ನೆಲೆಯಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ ಉಪಟಳ ಹೆಚ್ಚಿದೆ. ನಿತ್ಯ ಒಂದಲ್ಲ ಒಂದು ಕಡೆಯಿಂದ ಕಂದಕ ದಾಟಿ ಕಾಡಿನಿಂದ ಹೊರಬರುವ ಕಾಡಾನೆಗಳು ಜಮೀನುಗಳಲ್ಲಿ ಬೆಳೆ ನಾಶ ಮಾಡುತ್ತಿವೆ. ಆದ್ದರಿಂದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮದ ರೈತರು ಒತ್ತಾಯಿಸಿದ್ದಾರೆ.

ADVERTISEMENT

ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮದ್ದೂರು ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್, ಓಂಕಾರ ಅರಣ್ಯ ವಲಯದ ಶಿವಕುಮಾರ್, ಸತೀಶ್ ಭೇಟಿ ನೀಡಿ ಮಹಜರು ನಡೆಸಿದರು. ಬೆಳೆನಾಶಕ್ಕೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.