ADVERTISEMENT

ವನ್ಯಜೀವಿ–ಮಾನವ ಸಂಘರ್ಷ ನಿಯಂತ್ರಣಕ್ಕೆ ಕಾರ್ಯಪಡೆ ರಚಿಸಿ

ಉನ್ನತಾಧಿಕಾರಿಗಳ ತುರ್ತು ಸಭೆಯಲ್ಲಿ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 4:21 IST
Last Updated 28 ಅಕ್ಟೋಬರ್ 2025, 4:21 IST
ಸರಗೂರು ತಾಲ್ಲೂಕಿನಲ್ಲಿ ಹುಲಿದಾಳಿಗೆ ಓರ್ವ ಮೃತಪಟ್ಟು ಓರ್ವ ಗಂಭೀರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಬಂಡೀಪುರದಲ್ಲಿ ಸೋಮವಾರ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ವನ್ಯಜೀವಿ ವಿಭಾಗದ ಉನ್ನತ ಅಧಿಕಾರಿಗಳ ತುರ್ತು ಸಭೆ ನಡೆಸಿದರು
ಸರಗೂರು ತಾಲ್ಲೂಕಿನಲ್ಲಿ ಹುಲಿದಾಳಿಗೆ ಓರ್ವ ಮೃತಪಟ್ಟು ಓರ್ವ ಗಂಭೀರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಬಂಡೀಪುರದಲ್ಲಿ ಸೋಮವಾರ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ವನ್ಯಜೀವಿ ವಿಭಾಗದ ಉನ್ನತ ಅಧಿಕಾರಿಗಳ ತುರ್ತು ಸಭೆ ನಡೆಸಿದರು   

ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ‘ಮಾನವ ಹಾಗೂ ವನ್ಯಜೀವಿ ಸಂಘರ್ಷ ನಿಯಂತ್ರಿಸಲು ಸ್ಥಳೀಯ ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು, ಪರಿಸರ ತಜ್ಞರನ್ನೊಳಗೊಂಡ ರಾಜ್ಯಮಟ್ಟದ ವನ್ಯಜೀವಿ ಮಾನವ ಸಂಘರ್ಷ ನಿರ್ವಹಣಾ ಕಾರ್ಯಪಡೆ ರಚಿಸಬೇಕು’ ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು.

ಸರಗೂರು ತಾಲ್ಲೂಕಿನಲ್ಲಿ ಹುಲಿದಾಳಿಗೆ ರೈತರೊಬ್ಬರು ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ, ಬಂಡೀಪುರದಲ್ಲಿ ಸೋಮವಾರ ವನ್ಯಜೀವಿ ವಿಭಾಗದ ಉನ್ನತಾಧಿಕಾರಿಗಳ ತುರ್ತು ಸಭೆ ನಡೆಸಿದ ಅವರು, ‘ಉದ್ದೇಶಿತ ಕಾರ್ಯಪಡೆಯು ಕಾಡಂಚಿನ ಗ್ರಾಮಗಳ ಜನರಿಗೆ ಪ್ರಾಣಿಗಳ ಜೊತೆ ಸಹಬಾಳ್ವೆ ನಡೆಸುವ, ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವ ಕುರಿತು ಜಾಗೃತಿ ಮೂಡಿಸಬೇಕು’ ಎಂದರು.

‘ಕಾಡಿನಂಚಿನಲ್ಲಿರುವ ಶಾಲೆಗಳ ವಿದ್ಯಾರ್ಥಿಗಳಿಗೆ ಸಂವೇದನಾಶೀಲತೆ ಬೆಳೆಸುವುದರ ಜೊತೆಗೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಸ್ನೇಹಸೇತುವಾಗಿ ಕಾರ್ಯಪಡೆ ಕಾರ್ಯನಿರ್ವಹಿಸಬೇಕು’ ಎಂದರು.

ADVERTISEMENT

‘ಆನೆ, ಹುಲಿ, ಚಿರತೆ ಸಹಿತ ವನ್ಯಜೀವಿಗಳ ಸೆರೆ ಕಾರ್ಯಾಚರಣೆ ವೇಳೆ ಎಸ್‌ಒಪಿ ಪಾಲಿಸಬೇಕು. 155 ಸೆಕ್ಷನ್ ಅಡಿ ನಿರ್ಬಂಧಕಾಜ್ಞೆ ಜಾರಿಗೊಳಿಸಿ ಕಾರ್ಯಾಚರಣೆ ಮಾಡಬೇಕು. ಸಾಮಾಜಿಕ ಮಾಧ್ಯಮಗಳ ಮೂಲಕ ಸಕಾಲದಲ್ಲಿ ಸುರಕ್ಷತಾ ಕ್ರಮಗಳ ಮಾಹಿತಿ ರವಾನಿಸಬೇಕು. ವಾಟ್ಸ್‌ ಆ್ಯಪ್‌ ಮೂಲಕ ಸಂದೇಶ ರವಾನೆಗೆ ಸಮಗ್ರ ಕಮಾಂಡ್ ಸೆಂಟರ್ ಸ್ಥಾಪಿಸಲಾಗುವುದು’ ಎಂದರು.

‘ಟೆಂಟಕಲ್ ಫೆನ್ಸಿಂಗ್, ಸೌರ ತಂತಿ ಬೇಲಿ ಅಳವಡಿಕೆ, ಆನೆ ಕಂದಕ ನಿರ್ಮಾಣ ಹಾಗೂ ರೈಲ್ವೆ ಬ್ಯಾರಿಕೇಡ್‌ಗೆ ಚೈನ್ ಲಿಂಕ್ ಬೇಲಿ ಹಾಕಲು ಪ್ರಸ್ತಾವ ಸಲ್ಲಿಸಬೇಕು. ಮುಂಚೂಣಿ ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಿಸಬೇಕು. ವನ್ಯಜೀವಿಗಳು ಕಾಡಿನಿಂದ ಹೊರಗೆ ಹೋಗದಂತೆ ನಿಯಂತ್ರಿಸುವ ಕ್ರಮಗಳ ಬಗ್ಗೆ 5 ದಿನಗಳಲ್ಲಿ ವರದಿ ಸಲ್ಲಿಸಬೇಕು’ ಎಂದು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸಚಿವರು ಸೂಚಿಸಿದರು.

‘ಮಲೆನಾಡಿನಲ್ಲಿ ಕಾಳಿಂಗ ಸರ್ಪಗಳ ಸಂಶೋಧನೆ ಹೆಸರಲ್ಲಿ ಶೋಷಣೆ ನಡೆಯುತ್ತಿರುವ ಬಗ್ಗೆ ವರದಿ ಪರಾಮರ್ಶಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಶಾಸಕರಾದ ಅನಿಲ್ ಚಿಕ್ಕಮಾದು, ಗಣೇಶ್ ಪ್ರಸಾದ್, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ.ರೇ, ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್, ಎಪಿಸಿಸಿಎಫ್ ಮನೋಜ್ ರಾಜನ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮತ್ತು ಎಸ್‌ಪಿ ಬಿ.ಟಿ.ಕವಿತಾ ಇದ್ದರು.

ಎರಡು ಹಂತದ ತಪಾಸಣೆ

‘ಅರಣ್ಯದೊಳಗೆ ಏಕ ಬಳಕೆ ಪ್ಲಾಸ್ಟಿಕ್ ತಡೆಯಲು 2 ಹಂತದಲ್ಲಿ ವಾಹನಗಳ ತಪಾಸಣೆಗೆ ಚಾಲನೆ ನೀಡಿದ ಸಚಿವರು ಬಂಡಿಪುರ ನಾಗರಹೊಳೆ ಸೇರಿದಂತೆ ರಾಜ್ಯದ ಅರಣ್ಯದೊಳಗೆ ಸಾಗುವ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮಾಲೀಕರಿಗೆ ಮೊದಲ ಹಂತದಲ್ಲಿ ಸ್ವಯಂ ಪ್ರೇರಿತವಾಗಿ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ಕಸದ ಬುಟ್ಟಿಗೆ ಹಾಕಲು ಸೂಚಿಸಲಾಗುವುದು. 2ನೇ ಹಂತದ ತಪಾಸಣೆ ನಡೆಸುವಾಗ ವಾಹನಗಳಲ್ಲಿ ಪ್ಲಾಸ್ಟಿಕ್ ಕಂಡುಬಂದರೆ ದಂಡ ವಿಧಿಸಲಾಗುವುದು’ ಎಂದು ತಿಳಿಸಿದರು.