ADVERTISEMENT

ಮಗುವಿಗೆ ಜನ್ಮನೀಡಿ ಅಸುನೀಗಿದ ತಾಯಿ

ಹೆರಿಗೆಯಾದ ನಾಲ್ಕು ಗಂಟೆಗಳಲ್ಲಿ ಹೃದಯಾಘಾತದಿಂದ ಶಿಕ್ಷಕಿ ನಿಧನ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 10:32 IST
Last Updated 21 ಜನವರಿ 2020, 10:32 IST
ನೀಲಮ್ಮ
ನೀಲಮ್ಮ   

ಚಾಮರಾಜನಗರ: ಗಂಡುಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲಿ ತಾಯಿ ಮೃತಪಟ್ಟಿರುವ ದಾರುಣ ಘಟನೆ ಮೈಸೂರಿನ ಆಸ್ಪತ್ರೆಯಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ.

ತಾಲ್ಲೂಕಿನ ಬೆಂಡರವಾಡಿ ಮಲ್ಲಯ್ಯನಪುರದ ಮಹದೇವಸ್ವಾಮಿ ಎಂಬುವವರ ಪತ್ನಿ, ನಗರದ ಸೋಮವಾರ ಪೇಟೆಯ ಎಂಸಿಎಸ್‌ ಪಬ್ಲಿಕ್‌ ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿದ್ದ ನೀಲಮ್ಮ (36) ಮೃತಪಟ್ಟ ದುರ್ದೈವಿ.

ತುಂಬು ಗರ್ಭಿಣಿ ನೀಲಮ್ಮ ಅವರನ್ನು ಹೆರಿಗೆಗಾಗಿ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ವೈದ್ಯರು ಶಸ್ತ್ರಕ್ರಿಯೆ ಮೂಲಕ ಹೆರಿಗೆ ಮಾಡಿಸಿದ್ದರು. ಗಂಡುಮಗು ಆರೋಗ್ಯವಾಗಿತ್ತು.

ADVERTISEMENT

ಬಿಳಿ ರಕ್ತ ಕಣದ ಕೊರತೆಯ ಸಮಸ್ಯೆ ಎದುರಿಸುತ್ತಿದ್ದ ನೀಲಮ್ಮ ಅವರಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದರು. ಬೆಳಗಿನ ಜಾವ 2.45ರ ಸುಮಾರಿಗೆ ತೀವ್ರ ಹೃದಯಾಘಾತವಾಗಿ ನೀಲಮ್ಮ ಮೃತಪಟ್ಟರು ಎಂದು ವೈದ್ಯರು ತಿಳಿಸಿದ್ದಾರೆ.

ಎರಡನೇ ಮಗು: ನಗರ ಸಮೀಪದ ರಾಮಸಮುದ್ರದ ಶಿವಮಲ್ಲಪ್ಪ ಅವರ ಪುತ್ರಿ ನೀಲಮ್ಮ ಅವರನ್ನು ಬೆಂಡರವಾಡಿ ಮಲ್ಲಯ್ಯನಪುರ ಗ್ರಾಮದ ಮಹದೇವಸ್ವಾಮಿ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಮೂರು ವರ್ಷ ಗಂಡುಮಗು ಕೂಡ ಇದೆ.

ಈಗ ಜನಿಸಿರುವ ಎರಡನೇ ಗಂಡುಮಗುವು ಕೆಲವೇ ಗಂಟೆಗಳಲ್ಲಿ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದೆ.

ಶಾಲಾ ಮಕ್ಕಳಿಂದ ಅಂತಿಮ ದರ್ಶನ: ನೀಲಮ್ಮ ಅವರ ಮೃತದೇಹ ಮನೆಗೆ ಬರುತ್ತಲೇ ಕುಟುಂಬದವರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ನೀಲಮ್ಮ ಅವರು ಕೆಲಸ ಮಾಡುತ್ತಿದ್ದ ಎಂಸಿಎಸ್‌ ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ಮಕ್ಕಳು ಭಾರಿ ಸಂಖ್ಯೆಯಲ್ಲಿ ಬಂದು ಅಂತಿಮ ದರ್ಶನ ಪಡೆದರು. ಸಂಜೆ ಮಲ್ಲಯ್ಯನಪುರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.