
ಮಾದಪ್ಪನ ಪ್ರತಿಮೆ
ಚಾಮರಾಜನಗರ: ಹನೂರು ತಾಲ್ಲೂಕಿನ ಮಲೆ ಮಹದೇಶ್ವರನ ಬೆಟ್ಟದ ದೀಪದಗಿರಿ ಒಡ್ಡಿನಲ್ಲಿ ನಿರ್ಮಾಣವಾಗಿರುವ 108 ಅಡಿ ಮಲೆ ಮಹದೇಶ್ವರನ ಪ್ರತಿಮೆ ಬಳಿ ಮಹಿಳೆಯೊಬ್ಬರು ಜೆಸಿಬಿ ಬಕೆಟ್‌ನಲ್ಲಿ ಕುಳಿತು ರೀಲ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿಯಾಗಿದೆ.
ಮಲೆ ಮಹದೇಶ್ವರನ ಪ್ರತಿಮೆ ಬಳಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆದರೂ ಮಹಿಳೆಯು ಪ್ರತಿಮೆ ಬಳಿ ಅಪಾಯಕಾರಿಯಾಗಿ ರೀಲ್ಸ್ ಮಾಡಲು ಅನುಮತಿ ನೀಡಿದ್ದು ಯಾರು. ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತರಿಗೊಂದು ನಿಯಮ, ಪ್ರಭಾವಿಗಳಿಗೊಂದು ನಿಯಮ ಪಾಲನೆಯಾಗುತ್ತಿದೆಯೇ? ಎಂದು ಜಾಲತಾಣಗಳಲ್ಲಿ ನೆಟ್ಟಿಗರು ಪ್ರಶ್ನಿಸಿದ್ದಾರೆ.
2 ತಿಂಗಳ ಹಿಂದೆ ಕ್ಷೇತ್ರಕ್ಕೆ ಬಂದಿದ್ದ ಮಹಿಳೆ ದೀಪದಗಿರಿ ಒಡ್ಡಿಗೆ ತೆರಳಿ ಜೆಸಿಬಿ ಚಾಲಕನ ಮನವೊಲಿಸಿ ಪ್ರತಿಮೆ ಎದುರು ವಿಡಿಯೋ ಚಿತ್ರೀಕರಿಸಿದ್ದಾರೆ ಎನ್ನಲಾಗಿದ್ದು ಈ ಸಂಬಂಧ ಜೆಸಿಬಿ ಚಾಲಕನನ್ನು ಕೆಲಸದಿಂದ ವಜಾ ಮಾಡಲಾಗಿದೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನು ಸಂಪರ್ಕಿಸಿದರೂ ಕರೆ ಸ್ವೀಕರಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.