ADVERTISEMENT

ಬಂಡೀಪುರದಲ್ಲಿ ‘ವಿಶ್ವ ಆನೆ ದಿನಾಚರಣೆ’: ಆಟವಾಡಿ ಮನರಂಜಿಸಿದ ಆನೆಗಳು.....

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 16:16 IST
Last Updated 12 ಆಗಸ್ಟ್ 2022, 16:16 IST
ಆನೆ ದಿನಾಚರಣೆಯಲ್ಲಿ ಆನೆಗಳು ಕಲಾ ಪ್ರದರ್ಶನ ನೀಡಿದವು.
ಆನೆ ದಿನಾಚರಣೆಯಲ್ಲಿ ಆನೆಗಳು ಕಲಾ ಪ್ರದರ್ಶನ ನೀಡಿದವು.   

ಗುಂಡ್ಲುಪೇಟೆ: ‘ಆನೆ ಮತ್ತು ಹುಲಿ ಕಾಡಿನ ನಿಜವಾದ ಒಡೆಯರು. ಇವುಗಳು ಹೆಚ್ಚಿದಷ್ಟು ಕಾಡು ಸಂಪದ್ಭರಿತ ಮತ್ತು ಆರೋಗ್ಯಕರ ಅರಣ್ಯ ಪ್ರದೇಶ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಅಭಿಪ್ರಾಯ ಪಟ್ಟರು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹೆಡಿಯಾಲ ಉಪ ವಿಭಾಗದ ಕಲ್ಕರೆ ವಲಯದ ರಾಂಪುರ ಆನೆ ಶಿಬಿರದಲ್ಲಿ ಆಯೋಜಿದ್ದ ವಿಶ್ವ ಆನೆ ದಿ‌ನಾಚರಣೆಯಲ್ಲಿ ಮಾತನಾಡಿದರು.

ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್ ಮಾತನಾಡಿ, ‘ವಿಶ್ವ ಆನೆ ದಿನವನ್ನು 2012ರಿಂದ ಆಚರಿಸಲಾಗುತ್ತಿದೆ. ಆನೆ ದಿನಾಚರಣೆ ಒಂದು ದಿನದ ಕಾರ್ಯಕ್ರಮವಲ್ಲ, ಪ್ರತಿನಿತ್ಯ ಅವುಗಳನ್ನು ಪೋಷಿಸುತ್ತಿದ್ದೇವೆ. ಕಾಡಂಚಿನ ಗ್ರಾಮದಲ್ಲಿ ಆನೆ ಮತ್ತು ಮಾನವ ಸಂಘರ್ಷ ನಡೆಯುತ್ತಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಇಲಾಖೆ ಕೆಲಸ ಮಾಡುತ್ತಿದೆ’ ಎಂದರು.

ADVERTISEMENT

‘ಕಾಡಂಚಿನ ಜಮೀನಿನಲ್ಲಿ ಆನೆಗಳ ದಾಳಿಗೆ ಒಳಗಾಗಿ ಮೃತರಾಗುತ್ತಿರುವ ಸಂಖ್ಯೆ ಇತ್ತೀಚೆಗೆ ಇಳಿಮುಖವಾಗುತ್ತಿದೆ. ಅಂತಹ ಘಟನೆಗಳು ನಡೆಯಲೇಬಾರದು ಎಂಬುದು ಇಲಾಖೆ ಆಶಯ’ ಎಂದರು.

‘ದೇಶದಲ್ಲಿ 49,000 ಸಾವಿರ ಆನೆಗಳಿವೆ, ಕರ್ನಾಟಕದಲ್ಲಿ 6,000, ಬಂಡೀಪುರದಲ್ಲಿ 1,200 ಆನೆಗಳಿವೆ, ಬೇಸಿಗೆ ಬಂದರೆ ಆನೆಗಳು ಕಬಿನಿ ಹಿನ್ನೀರಿನ ಕಡೆ ಬರುತ್ತವೆ. ಆಗ ಎರಡು ಸಾವಿರಕ್ಕೂ ಹೆಚ್ಚು ಆನೆಗಳು ಸಿಗುತ್ತವೆ. ರಾಜ್ಯದಲ್ಲಿ ಎಂಟು ಸಾಕಾನೆ ಕ್ಯಾಂಪ್ ಇವೆ. ಈಗ ಹೊಸದಾಗಿ ಇನ್ನೊಂದು ಆನೆ ಕ್ಯಾಂಪ್ ಹಾರಂಗಿಯಲ್ಲಿ ಮಾಡಿದ್ದೇವೆ. ರಾಂಪುರ ಕ್ಯಾಂಪಿನಲ್ಲಿ 23 ಆನೆಗಳಿದ್ದು, ಎರಡು ಆನೆಗಳು ದಸರಾದಲ್ಲಿ ಪಾಲ್ಗೊಳ್ಳಲಿವೆ’ ಎಂದರು.

ಮೈಸೂರು ಎಸ್ಪಿ ಚೇತನ್ ಮಾತನಾಡಿ,‘ ಆನೆ ದಿನಾಚರಣೆ ಜೊತೆಗೆ ಸಮಾಜಕ್ಕೆ ಒಂದು ಸಂದೇಶ ನೀಡಬೇಕು. ಮಾನವ ಮತ್ತು ಪ್ರಾಣಿಗಳ ಸಂಘರ್ಷದಿಂದ ಏನೆಲ್ಲಾ ನಷ್ಟ ಆಗುತ್ತದೆ. ಅದನ್ನು ತಡೆಗಟ್ಟುವ ವಿಧಾನಗಳೇನು ಎಂಬುದರ ಬಗ್ಗೆ ಚಿಂತಿಸಿ ಜನರಿಗೆ ಅರಿವು ಮೂಡಿಸಬೇಕು’ ಎಂದರು.

ಕಾರ್ಯಕ್ರಮದಲ್ಲಿ ಎಸಿಎಫ್ ಗಳಾದ ಕೆ.ಪರಮೇಶ್, ರವೀಂದ್ರ, ನವೀನ್, ಪಶುವೈದ್ಯಾಧಿಕಾರಿ ವಾಸೀಂ ಸೇರಿದಂತೆ ವಲಯ ಅರಣ್ಯಾಧಿಕಾರಿಗಳು, ಎಸ್ಟಿಪಿಎಫ್ ಸಿಬ್ಬಂದಿ, ಆನೆ ಮಾವುತರು ಕಾವಾಡಿಗರು ಇದ್ದರು.

ಆನೆಗಳ ಕಸರತ್ತು

ರಾಂಪುರ ಆನೆ ಶಿಬಿರದ ಬಳಿ ಸಾಕಾನೆಗಳು ವಿವಿಧ ರೀತಿ ಕೌಶಲ್ಯ ಪ್ರದರ್ಶಿಸಿದವು. ಶಿಬಿರದ 21 ಆನೆಗಳಲ್ಲಿ ಚೈತ್ರಾ ಮತ್ತು ಲಕ್ಷ್ಮೀ ಆನೆಗಳು ಮೈಸೂರು ನಾಡ ದಸರಾಗೆ ತೆರಳಿವೆ. ಉಳಿದ ಸಾಕಾನೆಗಳಾದ ಪಾರ್ಥಸಾರಥಿ, ಕೃಷ್ಣ, ರೋಹಿತ, ನಿಸರ್ಗ ವಿವಿಧ ಭಂಗಿಯಲ್ಲಿ ಪ್ರದರ್ಶನ ನಡೆಸಿದವು. ಸಾಕಾನೆಗಳ ಮಾವುತರು ಹಾಗೂ ಕಾವಾಡಿಗಳು ಹೇಳಿದಂತೆ ಆನೆಗಳು ಶಿಬಿರದ ಆವರಣದಲ್ಲಿ ಪ್ರದರ್ಶನ ನಡೆಸಿ ಮೆಚ್ಚುಗೆ ಪಡೆದವು.

ಮರದ ಬುಡದ ಮೇಲೆ ಒಂಟಿ ಕಾಲಿನಲ್ಲಿ ನಿಂತು ಸೆಲ್ಯೂಟ್, ಪೆರೇಡ್, 2 ಕಾಲಿನ ನಡಿಗೆ, ಒಂಟಿ ಕಾಲಿನ ನಡಿಗೆ ಸೇರಿದಂತೆ ವಿವಿಧ ಭಂಗಿಯಲ್ಲಿ ಪ್ರದರ್ಶನ ನಡೆಸಿ ಅಚ್ಚರಿಮೂಡಿಸಿದವು. ಅಲ್ಲದೆ 75ನೇ ವರ್ಷದ ಅಮೃತ ಮಹೋತ್ಸವದ ಹಿನ್ನಲೆ ಆನೆಗಳ ಮೇಲೆ ಕುಳಿತ ಮಾವುತರು ತ್ರಿವರ್ಣ ಧ್ವಜವನ್ನು ಹಾರಾಡಿಸಿದ್ದು ಎಲ್ಲರ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.