ಯಳಂದೂರು: ತಾಲ್ಲೂಕಿನ ಬಿಳಿಗಿರಿಯ ಬನದ ಸಾಲು ಅಪರೂಪದ ಜೀವ ವೈವಿಧ್ಯತೆಯನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡಿದ್ದು ಸಾವಿರಾರು ವರ್ಷಗಳಿಂದ ವಿಕಸಿತವಾಗಿರುವ ಅಳಿವಿನಂಚಿನಲ್ಲಿರುವ ಜೀವಿ, ಸಸ್ಯ ಹಾಗೂ ಅರಣ್ಯ ಸಂಪತ್ತನ್ನು ಜತನದಿಂದ ಉಳಿಸಬೇಕಿದೆ.
ಮಾನವನ ಅತಿಯಾದ ಹಸ್ತಕ್ಷೇಪ ನಿಲ್ಲಿಸಿ ಜೀವಾವರದಲ್ಲಿ ಬದುಕು ಕಟ್ಟಿಕೊಂಡಿರುವ ಕೀಟಗಳು, ಜಲ ಜೀವಿ ಹಾಗೂ ಉರಗ ಸಂತತಿಗಳನ್ನು ಕಾಪಾಡಬೇಕಿದೆ. ಅಮೂಲ್ಯ ಜೀವಿ ಪ್ರಭೇದಗಳ ಗುರುತಿಸಿ ದಾಖಲಿಸುವ ಕೆಲಸಕ್ಕೂ ವೇಗ ನೀಡಬೇಕಿದೆ.
ತಾಲ್ಲೂಕಿನ ಗಿರಿ ಕಂದರಗಳ ಸುಂದರ ನಿಸರ್ಗದಲ್ಲಿ ನಕ್ಷತ್ರ ಆಮೆ, ಸಿವೆಟ್ ಹಾಗೂ ಪುನುಗು ಬೆಕ್ಕು, ಸಾಂಬಾರ ಜಿಂಕೆ, ಆನೆ, ಹುಲಿ, ಚಿರತೆ ಹಾಗೂ ಕರಡಿಗಳಿವೆ. ಇವುಗಳ ಆವಾಸದಲ್ಲಿ ಮಳೆಕಾಡು, ಹುಲ್ಲುಗಾವಲು, ಶೃಂಗಭೂಮಿ, ಎತ್ತರದ ಬಂಡೆಗಳಲ್ಲಿ ಅರಳುವ ಆರ್ಕಿಡ್ ಸಮೂಹಗಳಿವೆ. ಅಸಂಖ್ಯ ಜೀವಿಗಳು ಇಲ್ಲಿ ಉಸಿರಾಡುತ್ತಿವೆ. ಬಹುತೇಕ ಜನ ಜಂಗುಳಿಯಿಂದ ದೂರ ಜೀವಿಸುವ ಸೀಳುನಾಯಿ, ಹುಲಿ, ಸಿಂಗಳೀಕಗಳ ಆಶ್ರಯ ಧಾಮವಾಗಿಯೂ ಬಿಳಿಗಿರಿ ಕಾನನ ಅಂತರರಾಷ್ಟ್ರೀಯ ಮಾನ್ಯತೆ ಪಡೆದಿದೆ.
ಇಲ್ಲಿನ ಜೀವಮಂಡಲದಲ್ಲಿ ವಿವಿಧ ಅರಣ್ಯ ನಮೂನೆಗಳಿದ್ದು 25ಕ್ಕೂ ಹೆಚ್ಚಿನ ಸಸ್ತನಿಗಳು, 250 ಪ್ರಭೇದಗಳ ಪಕ್ಷಿಗಳು, 22 ಬಗೆಯ ಸರೀಸೃಪಗಳು, 11 ದ್ವಿಚರಿಗಳು, 150 ಚಿಟ್ಟೆಗಳ ಪ್ರಭೇದಗಳಿವೆ. ಇವುಗಳಲ್ಲಿ ಸಿವೆಟ್ ಮತ್ತು ಸಾಂಬಾರ (ಜಿಂಕೆ) ಸಂತತಿ ಕೆಂಪುಪಟ್ಟಿಯಲ್ಲಿ ಸೇರಿದೆ ಎಂದು ಅಂತರರಾಷ್ಟ್ರೀಯ ವನ್ಯಜೀವಿ ಸಂರಕ್ಷಣಾ ಸಂಸ್ಥೆಯು (ಐಯುಸಿಎನ್) ದಾಖಲಿಸಿದೆ
ಜೀವವೈವಿಧ್ಯ ಕಾನೂನು ಜಾರಿಗೊಳಿಸಿ: ‘ಬಿಆರ್‌ಟಿ ಅಭಯಾರಣ್ಯದಲ್ಲಿ ಸಾವಿರಾರು ಸಸ್ಯ ಮತ್ತು ಪ್ರಾಣಿ ಸಂಕುಲಗಳು ಮನೆ ಮಾಡಿದೆ. ಕೆಂಪು ಕೆರ್ರಿ, ಮರಬೆಕ್ಕು, ಕೇಶಳಿಲು, ಮುಳ್ಳುಹಂದಿ, ಮುಸುವ, ಚುಕ್ಕಿಜಿಂಕೆ, ಬೊಗಳುವ ಜಿಂಕೆ ಮತ್ತು ಬೂದು ಡ್ರೊಂಗೊ ಹಾಗೂ ಗೋಲ್ಡನ್ ಅರಿಯೋಲ್ ಪಕ್ಷಿಗಳನ್ನು ಇಲ್ಲಿ ಕಾಣಬಹುದು. ಇವುಗಳ ಮಹತ್ವವನ್ನು ಅರಿತು ದಾಖಲಿಸುವ ಕೆಲಸವನ್ನು ಸ್ಥಳೀಯ ಪಂಚಾಯಿತಿಗಳು ಮಾಡಬೇಕು. ಎಲ್ಲ ಗ್ರಾಮಗಳಲ್ಲಿ ಜೀವನಿಧಿಯ ರಕ್ಷಣಾ ಸಮಿತಿಗಳು ಅಸ್ತಿತ್ವಕ್ಕೆ ಬರಬೇಕು’ ಎಂದು ಅಭಿಪ್ರಾಯ ಪಡುತ್ತಾರೆ ಏಟ್ರೀ ಸಂಶೋದಕ ಸಿ.ಮಾದೇಗೌಡ.
‘ಈಚಿನ ವರ್ಷಗಳಲ್ಲಿ ಬೆಟ್ಟದ ಸುತ್ತಮತ್ತ ವನ್ಯಜೀವಿಗಳ ಕಳ್ಳ ಬೇಟೆಗೆ ತಡೆ ಬಿದ್ದಿದೆ. ಯುವಜನತೆಯ ಸಹಕಾರ ಮತ್ತು ಸಂಘಟನೆಗಳ ಸಹಭಾಗಿತ್ವದಿಂದ ಅರಣ್ಯ ರಕ್ಷಣೆಗೆ ಹೆಚ್ಚು ಒತ್ತು ನೀಡಲಾಗಿದೆ. ಸ್ಥಳೀಯರ ನೆರವಿನಿಂದ ಕಾಳ್ಗಿಚ್ಚು ತಡೆದು ಖಗ ಮೃಗಗಳನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಏಕ ಬಳಕೆ ಪ್ಲಾಸ್ಟಿಕ್‌ಗಳಿಗೆ ಕಡಿವಾಣ ಹಾಕಲಾಗಿದೆ ಎನ್ನುತ್ತಾರೆ’ ಅರಣ್ಯ ಅಧಿಕಾರಿಗಳು.
ಪ್ಲಾಸ್ಟಿಕ್ ಮುಕ್ತ ಕಾನನ ಅಭಿಯಾನ
‘ಜಾಗತಿಕ ಪ್ಲಾಸ್ಟಿಕ್ ಮಾಲಿನ್ಯ ಕೊನೆಗೊಳಿಸುವುದು’ ಎಂಬ ಘೋಷವಾಕ್ಯದೊಂದಿಗೆ ಜೂನ್ 5 ರಂದು ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ. ಬಿಆರ್‌ಟಿ ಗುಂಬಳ್ಳಿ ತಪಾಸಣಾ ಕೇಂದ್ರದ ಬಳಿ ಸಾರ್ವಜನಿಕರಿಗೆ ಪ್ಲಾಸ್ಟಿಕ್ ಬಳಕೆಯಿಂದ ಹುಲಿ ಅಭಯಾರಣ್ಯದಲ್ಲಿ ಉಂಟಾಗುವ ಸಮಸ್ಯೆಗಳನ್ನು ತಿಳಿಸಿ ಪ್ಲಾಸ್ಟಿಕ್ ಮುಕ್ತ ಕಾನನ ಜಾಗೃತಿ ಅಭಿಯಾನ ನಡೆಸಲಾಗುತ್ತದೆ ಎಂದು ಆರ್‌ಎಫ್‌ಒ ಎನ್.ನಾಗೇಂದ್ರನಾಯಕ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.