ADVERTISEMENT

ಮಾನವನ ಸ್ವಾರ್ಥಕ್ಕೆ ಪರಿಸರ ಬಲಿ: ನ್ಯಾಯಾಧೀಶ ಸದಾಶಿವ

ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ, ಗಿಡನೆಟ್ಟು, ನೀರೆರೆದ ನ್ಯಾಯಾಧೀಶ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 12:42 IST
Last Updated 5 ಜೂನ್ 2021, 12:42 IST
ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಎಸ್‌.ಸುಲ್ತಾನ್‌ಪುರಿ ಅವರು ನ್ಯಾಯಾಲಯದ ಆವರಣದಲ್ಲಿ ಗಿಡ ನೆಟ್ಟು ನೀರೆರೆದರು
ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಎಸ್‌.ಸುಲ್ತಾನ್‌ಪುರಿ ಅವರು ನ್ಯಾಯಾಲಯದ ಆವರಣದಲ್ಲಿ ಗಿಡ ನೆಟ್ಟು ನೀರೆರೆದರು   

ಚಾಮರಾಜನಗರ: ‘ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಆಮ್ಲಜನಕದ ಸಮಸ್ಯೆ ಇರುವುದಿಲ್ಲ’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಎಸ್.ಸುಲ್ತಾನಪುರಿ ಅವರು ಶನಿವಾರ ಅಭಿಪ್ರಾಯಪಟ್ಟರು.

ವಿಶ್ವ ಪರಿಸರ ದಿನದ ಅಂಗವಾಗಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ಕಾರ್ಉಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದ ಅವರು, ‘ಗಿಡ, ಮರಗಳನ್ನು ನಾಶ ಮಾಡುತ್ತಿರುವುದರಿಂದ ಈಗ ಮನುಷ್ಯನಿಗೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಸಿಗುತ್ತಿಲ್ಲ. ಮಾನವನ ಸ್ವಾರ್ಥದಿಂದ ಪರಿಸರ ಮಲಿನವಾಗುತ್ತಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

‘ನಮ್ಮ ಪರಿಸರವನ್ನು ಉಳಿಸಿ ಬೆಳೆಸಬೇಕಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಪರಿಸರದ ಸಂರಕ್ಷಣೆಗೆ ಮುಂದಾಗಬೇಕು. ಮುಂದಿನ ಪೀಳಿಗೆಗೂ ಶುದ್ಧ ವಾತಾವರಣವನ್ನು ಉಳಿಸಬೇಕು. ಮನೆ, ಶಾಲಾ ಆವರಣ ಸೇರಿದಂತೆ ಎಲ್ಲಿ ಅವಕಾಶವಿದೆಯೋ ಅಲ್ಲೆಲ್ಲ ಸಸಿಗಳನ್ನು ನೆಟ್ಟು ಪೋಷಿಸಬೇಕು’ ಎಂದು ಅವರು ಹೇಳಿದರು.

ADVERTISEMENT

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ ಅವರು ಮಾತನಾಡಿ, ‘ಮನುಷ್ಯ ಪರಿಸರವನ್ನು ಹಗುರವಾಗಿ ತೆಗೆದುಕೊಂಡಿದ್ದಾನೆ. ಪರಿಸರ ಮಾಲಿನ್ಯ ಮಾಡುವ ಮೂಲಕ ಆಮ್ಲಜನಕವನ್ನು ಕಲುಷಿತಗೊಳಿಸಲಾಗುತ್ತಿದೆ. ಮಾನವ ತನ್ನ ದುರಾಸೆಗಾಗಿ ಕಾಡನ್ನು ಕಡಿದು ನಾಶ ಮಾಡುತ್ತಿದ್ದಾನೆ. ನಾವು ಬದುಕಲು ಶುದ್ಧ ಗಾಳಿ, ವಾತಾವರಣ ಬೇಕು. ಆದ್ದರಿಂದ ಪರಿಸರವನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಮನೆಗೊಂಡು ಗಿಡ ನೆಡಲು ಮುಂದಾಗಬೇಕು.ಪರಿಸರದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅವರು ಮಾತನಾಡಿ, ‘ಪ್ರತಿಯೊಬ್ಬ ನಾಗರಿಕನೂ ಪರಿಸರ ಸಂರಕ್ಷಣೆ ಮಾಡಿದಾಗ ಮುಂದಿನ ಪೀಳಿಗೆಯು ಒಳ್ಳೆಯ ವಾತಾವರಣ ಕಾಣಬಹುದು. ಪರಿಸರ ನಾಶಕ್ಕೆ ಮನುಷ್ಯ ಕಾರಣನಾಗಿದ್ದು, ನಮ್ಮ ಮನೋಭಾವನೆಯನ್ನು ಬದಲಾಯಿಸದಿದ್ದರೆ ಮುಂದಿನ ಪೀಳಿಗೆ ನಾಶವಾಗುತ್ತದೆ’ ಎಂದು ತಿಳಿಸಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಮಹಮ್ಮದ್ ರೋಷನ್ ಷಾ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸ್ಮಿತಾ, ನ್ಯಾಯಾಂಗ ಇಲಾಖೆಯ ರಘುರಾಂ, ಸುರೇಶ್, ಯಂಕನಾಯಕ, ಹರಿಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.