ADVERTISEMENT

ಇಂದು ವಿಶ್ವ ಅರಣ್ಯ ದಿನ: ಕಾಡು ಮಾನವನ ವಿಕಾಸದ ತೊಟ್ಟಿಲು

ಈ ವರ್ಷದ ಧ್ಯೇಯ ‘ಅರಣ್ಯ ಮತ್ತು ಆಹಾರ’

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2025, 5:00 IST
Last Updated 21 ಮಾರ್ಚ್ 2025, 5:00 IST
<div class="paragraphs"><p>ಅಪರೂಪದ ವೃಕ್ಷ ಕಿಂಚಗ ಹೂ ಬಿಟ್ಟಿದೆ</p></div>

ಅಪರೂಪದ ವೃಕ್ಷ ಕಿಂಚಗ ಹೂ ಬಿಟ್ಟಿದೆ

   

ಯಳಂದೂರು: ತಾಲ್ಲೂಕಿನ ನಿಸರ್ಗ ಜೀವ ವೈವಿಧ್ಯತೆಗಳ ಸಂಗಮ, ಪಶು– ಪಕ್ಷಿಗಳಿಗೆ ಜೀವನಾಧಾರ. ಇಲ್ಲಿನ ಸಸ್ಯ ಪ್ರಭೇದ, ಗಿಡಮರ, ಪ್ರಾಣಿ ಪ್ರಪಂಚ ಎಲ್ಲರನ್ನು ಆಕರ್ಷಿಸಿದೆ. ಆದರೆ, ಇಲ್ಲಿನ ಮಳೆ ವೈಭವ, ಉಷ್ಣಾಂಶದ ಹೆಚ್ಚಳ, ವೃಷ್ಠಿ ವನಗಳ ಪುನರುತ್ಪತಿ ಸಾಮರ್ಥ್ಯ ಶಿಥಿಲವಾಗುತ್ತಿದ್ದು, ಮತ್ತೆ ಕಾನನದ ವೈಭವವನ್ನು ಅರಳಿಸಬೇಕಿದೆ.

ಇಲ್ಲಿನ ಜೀವ ಪರಿಸರ 750-1816 ಮೀಟರ್ ಎತ್ತರದ ವರೆಗೆ ವಿಸ್ತರಿಸಿದೆ. ಬೆಟ್ಟದ ಶ್ರೇಣಿ ದಕ್ಷಿಣ ಮತ್ತು ಉತ್ತರಕ್ಕೆ ವ್ಯಾಪಿಸಿದ್ದು, ಉದ್ದಕ್ಕೂ ಹಸಿರು ಹಾಸಿನಂತೆ ಅಲೆಯ ರೂಪದಲ್ಲಿ ಮೈದಳೆದಿದೆ. ಪೂರ್ವ ಮತ್ತು ಪಶ್ಚಿಮ ಘಟ್ಟಗಳನ್ನು ಸಂಧಿಸುವ ಮೂಲಕ ಸಾವಿರಾರು ಸಸ್ಯ, ಜೀವಿ ಸಂಕುಲಗಳಿಗೆ ಜೀವ ತುಂಬಿದೆ. ಆದರೆ, ಈಚಿನ ವರ್ಷಗಳಲ್ಲಿ ಒಂದೇ ಜಾತಿಯ ಸಸ್ಯಗಳು ಮುನ್ನೆಲೆಗೆ ಬಂದು ಅಪರೂಪದ ಅಭಯಾರಣ್ಯದ ಸಸ್ಯ ವೈವಿಧ್ಯತೆ ನಶಿಸುತ್ತಿದೆ ಎನ್ನುತ್ತಾರೆ ಪರಿಸರ ಪ್ರಿಯರು.

ADVERTISEMENT

‘ದೊಡ್ಡ ಸಂಪಿಗೆ ಮರವೇ ನೀರು, ನೆರಳು, ಪರಿಮಳ, ತಂಗಾಳಿ, ಪಕ್ಷಿಗಳಿಗೆ ಆಶ್ರಯ, ಆಹಾರ ಕೊಡವೆ’ ಎಂದು ಸೋಲಿಗರು ಹಾಡುತ್ತಿದ್ದರು. ಈಗಲೂ ನಿಸರ್ಗದ ಸುತ್ತಲೇ ಅರಣ್ಯ, ಹೊಳೆಹಳ್ಳ, ಭೂಯಿ ಕೇಂದ್ರವಾಗಿಸಿ ತಮ್ಮ ಹಾಡು ಹಸೆಗಳಲ್ಲಿ ಕಾಡು ಸಂಸ್ಕೃತಿಯನ್ನು ಕಟ್ಟಿಕೊಡುತ್ತಾರೆ. ಇಂತಹ ಜನಪದ ಪದ ಗುಚ್ಛಗಳು ಬುಡಕಟ್ಟು ಜನರ ಹಬ್ಬಗಳಲ್ಲಿ ಪರಿಚಯ ಆಗುತ್ತವೆ ಎನ್ನುತ್ತಾರೆ ಸೋಲಿಗರು.

ಬೆಟ್ಟದಲ್ಲಿ ಮರ, ಪೊದೆ, ಮೂಲಿಕೆ, ಆರ್ಕಿಡ್, ಬಳ್ಳಿ ಸೇರಿದಂತೆ ನೂರಾರು ಬಗೆಬಗೆ ಗಿಡಗಳ ಜೀವಜಾಲ ಹರಡಿದೆ. ಇವು ಅತಿಕ್ರಮಣ ಸಸ್ಯಗಳ ಹೆಚ್ಚಳ, ಬೆಂಕಿ ಪ್ರಕೋಪ, ಮನುಷ್ಯರ ಪ್ರಭಾವ ಹಾಗೂ ಹವಾಮಾನ ಬದಲಾವಣೆ ಮೊದಲಾದ ಪರಿಣಾಮಗಳಿಂದ ಹೊಸ ಸಸ್ಯ ತಳಿಗಳ ಬೆಳವಣಿಗೆಗೆ ತೊಡಕಾಗಿವೆ. ಲಂಟಾನಾ ಕಮಾರಾ ಇಲ್ಲಿನ ಸಸ್ಯಾವರಣಗಳ ಮೇಲೆ ದಾಳಿ ಇಟ್ಟಿದ್ದು ಅಪಾಯಕಾರಿ ಮಟ್ಟದಲ್ಲಿ ಆವರಿಸಿದ್ದು, ಅರಣ್ಯ ಇಲಾಖೆ ಇವುಗಳನ್ನು ತಗ್ಗಿಸಲು ಶ್ರಮಿಸುತ್ತಿದೆ ಎನ್ನುತ್ತಾರೆ ಮೂಲಿಕೆ ತಜ್ಞ ಬೊಮ್ಮಯ್ಯ,

‘ಅತಿಯಾಗಿ ಜಾನುವಾರು ಮೇಯಿಸುವುದು, ಮಳೆ ಕೊರತೆ, ವಾಣಿಜ್ಯ ಸಸ್ಯಗಳ ಹೆಚ್ಚಳ ತಡೆಯಬೇಕು. ಅರಣ್ಯ ಸಂವರ್ಧನೆ ಹೆಚ್ಚಿಸುವ ಚಿಟ್ಟೆ, ಜೇನು, ಪಕ್ಷಿ, ವನ್ಯಜೀವಿ ಹಾಗೂ ಜಲಮೂಲಗಳ ರಕ್ಷಣೆಯಿಂದ ಅರಣ್ಯ ವೈವಿಧ್ಯತೆಯನ್ನು ಹೆಚ್ಚಿಸಬಹುದು’ ಎಂದು ಏಟ್ರೀ ಸಂಶೋಧಕ ಸಿ.ಮಾದೇಗೌಡ ಹೇಳುತ್ತಾರೆ.

ಸಸ್ಯ ವೈವಿಧ್ಯತೆ ಉಳಿಸಬೇಕು: ಬಿಳಿಗಿರಿಬೆಟ್ಟದ ವಿಶೇಷತೆಗಳಾದ ಬೆಜ್ಜೆ, ಮತ್ತಿ, ನೆಲ್ಲಿ, ಬೆಂಡೆ, ಹೊನ್ನೆ, ಅರಳೆ, ದಡಸಲು, ದೊಳ್ಳಿ, ನೇರಳೆ, ಚೌವೆ, ಚೌನೆ, ಕರ್ವಾಡಿ, ಕೆಸಿಲು, ಕೆಂಡೆ, ಬೂರಗ, ಸಂಪಿಗೆ, ಜಾಲ, ಕಕ್ಕೆ, ಬೈಸೆ, ಕುಮಾವು, ಕಾಂಧೂಪ ಮೊದಲಾದ ಸಸ್ಯ ಸಂಕುಲವನ್ನು ಉಳಿಸಬೇಕು ಎಂದು ಆರ್‌ಎಫ್ಒ ನಾಗೇಂದ್ರನಾಯಕ್ ಮಾಹಿತಿ ನೀಡಿದರು.

ಈ ಬಾರಿ ‘ಅರಣ್ಯ ಮತ್ತು ಆಹಾರ’ ಧ್ಯೇಯವಾಕ್ಯ: ವಿಶ್ವಸಂಸ್ಥೆ 2012ರಲ್ಲಿ ಮಾರ್ಚ್ 21ರಂದು ಅಂತರಾಷ್ಟ್ರೀಯ ಅರಣ್ಯ ದಿನ ಎಂದು ಘೋಷಿಸಿದೆ. ವಿಶ್ವದ ಎಲ್ಲ ರೀತಿಯ ಕಾನುಗಳನ್ನು ಉಳಿಸುವುದು ಹಾಗೂ ಮುಂದಿನ ಮನುಕುಲಕ್ಕೂ ಕಾಡನ್ನು ಉಳಿಸುವುದು ಇದರ ಉದ್ದೇಶ. ಜೊತೆಗೆ ಆಹಾರ ಭದ್ರತೆ, ಪೋಷಣೆ, ಔಷಧ ಹಾಗೂ ಜೀವನೋಪಾಯ ಮೂಲವಾಗಿ ಪರಿಗಣಿಸುವ ಉದ್ದೇವೂ ಸೇರಿದೆ. ಈ ಬಾರಿ ‘ಅರಣ್ಯ ಮತ್ತು ಆಹಾರ’ ಎಂಬ ವಿಶ್ವಸಂಸ್ಥೆ ಘೋಷಿಸಿದ್ದು, ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಕಾಡಿನ ರಕ್ಷಣೆಗೆ ಯೋಜನೆ ರೂಪಿಸಲು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.