ADVERTISEMENT

ಕಾಫಿಗೆ ಬಂಗಾರದ ಬೆಲೆ: ಉತ್ಪಾದನೆ ಇಳಿಮುಖ

ಕಾಫಿ ಬೆಲೆ ಗಗನಮುಖಿ; ಮಾರುಕಟ್ಟೆಯಲ್ಲಿ ಕೆಜಿಗೆ ₹ 600 ನಿಗದಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2025, 5:56 IST
Last Updated 17 ಫೆಬ್ರುವರಿ 2025, 5:56 IST
ಯಳಂದೂರು ತಾಲ್ಲೂಕಿನಲ್ಲಿ ಸಾವಯವ ವಿಧಾನದಲ್ಲಿ ಬೆಳೆದಿರುವ ಕಾಫಿ
ಯಳಂದೂರು ತಾಲ್ಲೂಕಿನಲ್ಲಿ ಸಾವಯವ ವಿಧಾನದಲ್ಲಿ ಬೆಳೆದಿರುವ ಕಾಫಿ   

ಯಳಂದೂರು: ವಾಣಿಜ್ಯ ಬೆಳೆ ಕಾಫಿಗೆ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಬಂದಿದ್ದು, ಬೇಡಿಕೆ ಗಗನ ಮುಖಿಯಾಗಿದೆ. ಆದರೆ, ಕಾಫಿ ಉತ್ಪಾದನೆ ಇಳಿಮುಖವಾಗಿರುವುದು ರೈತರಲ್ಲಿ ನಿರಾಸೆ ಮೂಡಿಸಿದೆ.

ಹವಾಮಾನ ವೈಪರೀತ್ಯ: ಹವಾಮಾನ ವೈಪರೀತ್ಯ, ಮಳೆ ಪ್ರಮಾಣದಲ್ಲಿ ವ್ಯತ್ಯಯ ಸೇರಿದಂತೆ ಹಲವು ಕಾರಣಗಳಿಂದ ಕಾಫಿ ಫಸಲು ಭಾರಿ ಪ್ರಮಾಣದಲ್ಲಿ ಕುಸಿತವಾಗಿದೆ. ಬೆಲೆ ಮತ್ತು ಬೇಡಿಕೆ ಹೆಚ್ಚಾಗಿದ್ದರೂ ಬೆಳೆಗಾರರ ಕೈಗೆ ಆದಾಯ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಉತ್ತಮ ಹವಾಗುಣ: ಯಳಂದೂರು ತಾಲ್ಲೂಕಿನಲ್ಲಿ ಕಾಫಿ ಬೆಳೆಯಲು ಉತ್ತಮ ಹವಾಮಾನ ಇದೆ. ಕಾಫಿ ಗಿಡಗಳ ಬೆಳವಣಿಗೆಗೆ ಅತಿ ಅಗತ್ಯವಾಗಿ ಬೇಕಾದ ಗಿರಿ ಶ್ರೇಣಿಗಳ ಸಾಲು, ದಟ್ಟಕಾಡು ತಾಲ್ಲೂಕಿನಲ್ಲಿ ಇದೆ. ವನ್ಯಜೀವಿಗಳ ಆವಾಸದ ನಡುವೆ ತಾಲ್ಲೂಕಿನಲ್ಲಿ ಕಾಫಿ ಬೆಳೆಯಲಾಗುತ್ತದೆ. ಇಲ್ಲಿನ ವಾತಾವರಣ ಹಾಗೂ ಮಣ್ಣಿನ ಗುಣದ ಕಾರಣಕ್ಕೆ ಕಾಫಿ ಗುಣಮಟ್ಟ ಹೆಚ್ಚಾಗಿದ್ದು ಸವಿರುಚಿಯೂ ಇದೆ. ಮುಖ್ಯವಾಗಿ ಕಾಫಿಯನ್ನು ಸಾವಯವ ವಿಧಾನದಲ್ಲಿ ಸಂಸ್ಕರಿಸಿ ಮಾರಾಟ ಮಾಡಲಾಗುಗುವುದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.

ADVERTISEMENT

ಬಿಳಿಗಿರಿ ಬೆಟ್ಟದ ಸುತ್ತಮುತ್ತ 600ಕ್ಕೂ ಹೆಚ್ಚಿನ ಕಾಫಿ ಬೆಳೆಗಾರರು ಇದ್ದಾರೆ. 800 ಎಕರೆ ಪ್ರದೇಶದಲ್ಲಿ ಕಾಫಿತೋಟ ವಿಸ್ತರಣೆಯಾಗಿದೆ. ಜನವರಿ ಅಂತ್ಯದಲ್ಲಿ ಕಾಫಿ ಕೊಯ್ಲು ಮುಗಿದಿದ್ದು, ಈ ಸಲ ಶೇ 50 ಮಾತ್ರ ಬೆಳೆ ಕೈಸೇರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅರ್ಧದಷ್ಟು ಕಾಫಿ ಇಳುವರಿ ತಗ್ಗಿದೆ. ಬೆಲೆ ಹೆಚ್ಚಳವಾಗಿದ್ದರೂ ಅದರ ಲಾಭದಿಂದ ಬೆಳೆಗಾರರು ವಂಚಿತರಾಗಿದ್ದಾರೆ ಎಂದು ಮುತ್ತುಗದಗದ್ದೆ ಪೋಡಿನ ಕಾರನಕೇತೆಗೌಡ ಬೇಸರ ವ್ಯಕ್ತಪಡಿಸಿದರು.

ಇತ್ತೀಚಿನ ವರ್ಷಗಳಲ್ಲಿ ಕೆಲವು ಕಾಫಿ ತಳಿಗಳು ಸೂಕ್ಷ್ಮವಾಗಿದ್ದು, ಬೆಳೆ ನಿರ್ವಹಣೆಯು ರೈತರ ಪಾಲಿಗೆ ಸವಾಲಾಗಿ ಪರಿಣಮಿಸಿದೆ. ಆಳುಕಾಳಿನ ಸಮಸ್ಯೆ ಹಾಗೂ ಹೆಚ್ಚಿನ ಖರ್ಚು ವೆಚ್ಚವನ್ನು ಬೇಡುತ್ತಿರುವುದರಿಂದ ಕಾಫಿ ನಿರ್ವಹಣೆ ದುಬಾರಿಯಾಗುತ್ತಿದೆ. ಮುಂದಿನ ವರ್ಷ ಸಕಾಲದಲ್ಲಿ ಮಳೆ ಸುರಿದರೆ ಬೆಳೆ ಕೈಸೇರುವ ನಿರೀಕ್ಷೆ ಇದೆ. ಇದಕ್ಕೆ ಪೂರ್ವಭಾವಿಯಾಗಿ ಬೆಳೆಗಾರರು ಮಾರ್ಚ್ ಆರಂಭದಿಂದಲೇ ಫಸಲಿನ ನಿರ್ವಹಣೆಯಲ್ಲಿ ತೊಡಗಬೇಕು ಎನ್ನುತ್ತಾರೆ ಕಾಫಿ ಮಂಡಳಿಯ ಅಧಿಕಾರಿಗಳು.

ತಾಲ್ಲೂಕಿನಲ್ಲಿ ಬೆಳೆಗಾರರು ಅರೇಬಿಕಾ ಮತ್ತು ರೊಬೊಸ್ಟಾ ತಳಿಗಳನ್ನು ನಿರ್ಲಕ್ಷ ಮಾಡಲಾಗಿದ್ದು ಚಂದ್ರಗಿರಿ ಮತ್ತು ಸೆಲೆಕ್ಷನ್-9 ಗಿಡಗಳನ್ನು ನಾಟಿ ಮಾಡಿದ್ದಾರೆ. ಮಳೆ ಋತುವಿನಲ್ಲಿ ಉಂಟಾಗುವ ವ್ಯತ್ಯಾಸ, ಹೆಚ್ಚಾದ ಉಷ್ಣಾಂಶ, ಅನಿರೀಕ್ಷಿತ ವರ್ಷಧಾರೆ ಮತ್ತಿತರ ಕಾರಣಗಳಿಂದ ಉತ್ಪಾದನೆ ಕುಸಿತಕ್ಕೆ ಕಾರಣವಾಗಿದೆ ಎನ್ನುತ್ತಾರೆ ಬೆಳೆಗಾರರಾದ ಕಲ್ಲಿಸಿದ್ದಮ್ಮ ಮತ್ತು ಬಂಗ್ಲೆಪೋಡು ಸಿದ್ದಮ್ಮ.

ಕಾಫಿಗೆ ವಾರ್ಷಿಕ ಮಳೆ ಕೊರತೆಯೂ ಕಾಡುತ್ತಿರುವುದು ಇಳುವರಿ ಕುಸಿತಕ್ಕೆ ಪ್ರಮುಖ ಕಾರಣ. ಈ ಸಾಲಿನಲ್ಲಿ ಚಂಡಮಾರುತದ ಪ್ರಭಾವದಿಂದ ಆಗಾಗ ಮಳೆ ಕಾಡಿದ್ದರಿಂದ ಕಾಪಿ ಬಹುಬೇಗ ಹಣ್ಣಾಯಿತು. ದಟ್ಟ ಮಂಜು ಆವರಿಸಿದ್ದರಿಂದ 1.20 ಲಕ್ಷ ಕೆಜಿ ಕಾಫಿ ಉತ್ಪಾದನೆ ಗುರಿಗೆ ಪ್ರತಿಯಾಗಿ ಕೇವಲ 60 ಸಾವಿರ ಕೆಜಿಗೆ ಉತ್ಪಾದನೆಯಾಗಿದೆ ಎನ್ನುತ್ತಾರೆ ಬುಡಕಟ್ಟು ಸಂಘದ ಜಿಲ್ಲಾ ಕಾರ್ಯದರ್ಶಿ ಸಿ.ಮಾದೇಗೌಡ.

ಅಡವಿ ಸಂಸ್ಥೆಯಲ್ಲಿ ಗುಣಮಟ್ಟದ ಕಾಫಿ ಪರಿಶೀಲನೆ ಮಾಡುತ್ತಿರುವ ಸದಸ್ಯರು

ಕಾಫಿ ಬೆಲೆ ಮತ್ತಷ್ಟು ಹೆಚ್ಚಳ ನಿರೀಕ್ಷೆ

ಬಯಲು ಪ್ರದೇಶ ಮತ್ತು ಬೆಟ್ಟದ ಕಾಫಿಯ ಹೆಚ್ಚಿನ ಭಾಗವನ್ನು ಬಿಳಿಗಿರಿ ಉತ್ಪಾದಕ ಕಂಪನಿ ಕೊಳ್ಳುತ್ತದೆ. ಸ್ಥಳೀಯ ವ್ಯಾಪಾರಿಗಳು ಮಧ್ಯವರ್ತಿಗಳು ಶೇ 25ರಷ್ಟನ್ನು ಖರೀದಿಸುತ್ತಾರೆ. ಕಳೆದ ವರ್ಷ ಕೆ.ಜಿಗೆ ₹290 ದರ ಇತ್ತು. ಈ ಬಾರಿ ಡಿಸೆಂಬರ್ ಅಂತ್ಯದಲ್ಲಿ ಕಾಫಿಗೆ ಕೆಜಿಯೊಂದಕ್ಕೆ ₹ 410 ಧಾರಣೆ ಇತ್ತು ಜನವರಿಯಲ್ಲಿ ₹ 500 ಮುಟ್ಟಿತ್ತು. ಫೆಬ್ರುವರಿಯಲ್ಲಿ ಕೆಜೆಗೆ ₹600 ದಾಟಿದೆ. ಕೃಷಿಕರು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಬೆಲೆ ಮತ್ತು ಬೇಡಿಕೆ ಕಾಫಿ ಬೆಳೆಗೆ ಬಂದಿದೆ. ಕೊಳೆರೋಗ ಗಾಳಿಗೆ ಮಣ್ಣುಪಾಲಾದ ಹಣ್ಣು ಮತ್ತಿತರ ಕಾರಣಗಳಿಂದ ಉತ್ಪಾದನೆ ಕುಸಿದಿದೆ. ಮುಂದಿನ ದಿನಗಳಲ್ಲಿ ಕಾಫಿಗೆ ಬೆಲೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಅಡವಿ ಸಂಸ್ಥೆಯ ಸದಸ್ಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.